ಕೆ.ಆರ್.ನಗರ: ನಾಮಧಾರಿಗೌಡ ಜನಾಂಗದ ಬಹುದಿನಗಳ ಬೇಡಿಕೆಯಂತೆ ಅವರನ್ನು ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದು ಈ ವಿಚಾರದಲ್ಲಿ ಸಮಾಜದ ಮುಖಂಡರು ನನ್ನೊಂದಿಗೆ ಕೈ ಜೋಡಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಭರವಸೆ ನೀಡಿದರು.
ಪಟ್ಟಣದ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ಸಮಾಜದ ವತಿಯಿಂದ ಶನಿವಾರ ಆಯೋಜಿಸಿದ್ದ ಶಾಸಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ನಾಮಧಾರಿ ಸಮಾಜದ ಮುಖಂಡರೊಡಗೂಡಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಾಮಧಾರಿಗೌಡ ಸಮಾಜದವರಿಗೆ ಆಧ್ಯತೆಯ ಮೇರೆಗೆ ಅವಕಾಶ ನೀಡುವುದಾಗಿ ಹೇಳಿದರಲ್ಲದೆ ಈಗಾಗಲೇ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಿಮ್ಮ ಸಮಾಜದ ಲತಾರವಿ ಅವರಿಗೆ ನೀಡಿದ್ದು ಇವರ ಜತೆಗೆ ಈಗ ಆಶ್ರಯ ಸಮಿತಿ ಸದಸ್ಯರನ್ನಾಗಿ ಸಮಂತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ನಾಮಧಾರಿಗೌಡ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತಲ್ಲದೆ ಶಾಸಕ ಡಿ.ರವಿಶಂಕರ್ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಅಖಿಲ ನಾಮಧಾರಿಗೌಡ ಕೇಂದ್ರ ಸಮಿತಿ ಅಧ್ಯಕ್ಷ ಪಿ.ಚನ್ನರೇವಣ್ಣ, ತಾಲೂಕು ಘಟಕದ ಅಧ್ಯಕ್ಷ ಕೆ.ಆರ್.ಅಶೋಕ್‌ಕುಮಾರ್, ಸಂಘದ ಕಾರ್ಯದರ್ಶಿ ಎಂ.ಆರ್.ಪುಟ್ಟರಾಜು, ನಿರ್ದೇಶಕ ಪುರುಷೋತ್ತಮ ಪುರಸಭೆ ಮಾಜಿ ಸದಸ್ಯ ಕೆ.ಆರ್.ಗಿರೀಶ್ ಮಾತನಾಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಪುರಸಭೆ ಸದಸ್ಯ ನಟರಾಜು, ತಾಪಂ ಮಾಜಿ ಸದಸ್ಯ ಜಯರಾಮೇಗೌಡ, ಸಮಾಜದ ಮುಖಂಡರಾದ ನೀಲಕಂಠೇಗೌಡ, ದಶರಥ, ಶೋಭಾ, ಮಹೇಶ್, ತಿಮ್ಮೇಗೌಡ, ನಂಜಪ್ಪ, ಸುಧಾಕರ್, ಸುಮಂತ್, ರಾಮಚಂದ್ರು, ಕೃಷ್ಣೇಗೌಡ, ಜಗದೀಶ್, ನಾ.ರಾ.ಗಿರೀಶ್, ಎಸ್.ಪಿ.ತ್ಯಾಗರಾಜ್, ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ತಾಂಡವಮೂರ್ತಿ ಮತ್ತಿತರರು ಹಾಜರಿದ್ದರು.