ಮಹಾಮಸ್ತಕಾಭಿಷೇಕ ಅಟ್ಟಳಿಗೆ ಮುಹೂರ್ತಕ್ಕೆ ಚಾಲನೆ

ಬೆಳ್ತಂಗಡಿ: ಮಹಾಮಸ್ತಕಾಭಿಷೇಕ ಅಂಗವಾಗಿ ಬುಧವಾರ ಅಟ್ಟಳಿಗೆ ಮುಹೂರ್ತ ನೆರವೇರಿತು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ತ್ಯಾಗಿಗಳಾದ ಆಚಾರ್ಯ ಶ್ರೀ 108 ಸೂರ್ಯನಂದಿ ಸಾಗರ್ ಮಹಾರಾಜ್, ಆಚಾರ್ಯ ಶ್ರೀ 108 ಶ್ರೇಯಸಾಗರ್ ಮಹಾರಾಜ್ ಸಮ್ಮುಖದಲ್ಲಿ ಜೈನ ಪುರೋಹಿತರ(ಇಂದ್ರರ) ಮಂತ್ರಘೋಷಗಳೊಂದಿಗೆ ಅಟ್ಟಳಿಗೆ ನಿರ್ಮಾಣಕ್ಕೆ ಮುಹೂರ್ತ ನೆರವೇರಿಸಲಾಯಿತು. ಮಾಣಿಯ ಮಹಾವೀರ ಪ್ರಸಾದ್ ಇಂಡಸ್ಟ್ರಿ ನೇತೃತ್ವದಲ್ಲಿ ಅಟ್ಟಳಿಗೆ ನಿರ್ಮಾಣ ಕಾರ್ಯ ನಡೆಯಲಿದೆ.

ಅಟ್ಟಳಿಗೆ ಮುಹೂರ್ತದ ವೇಳೆ ಹೇಮಾವತಿ ವಿ.ಹೆಗ್ಗಡೆ, ಧರ್ಮಸ್ಥಳ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ಡಿ.ಸುರೇಂದ್ರ ಕುಮಾರ್ ಮತ್ತು ಸಂಚಾಲಕ ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಮಾನ್ಯ ಮೊದಲಾದವರು ಉಪಸ್ಥಿತರಿದ್ದರು.

ವಿಶೇಷ ಲಿಫ್ಟ್ ವ್ಯವಸ್ಥೆ: ಗುತ್ತಿಗೆದಾರರಾದ ಮಹಾಪದ್ಮಪ್ರಸಾದ್ ಹಾಗೂ ಮಹಾವೀರ್ ಅವರು ಅಟ್ಟಳಿಗೆ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇವರು ಈ ಹಿಂದೆ ವೇಣೂರು ಹಾಗೂ ಕಾರ್ಕಳದಲ್ಲಿ ನಡೆದ ಮಹಾಮಸ್ತಕಾಭಿಷೇಕಗಳ ಅಟ್ಟಳಿಗೆ ನಿರ್ಮಾಣದ ನೇತೃತ್ವ ವಹಿಸಿದ್ದರು. 6 ಅಂತಸ್ತಿನ ಅಟ್ಟಳಿಗೆಯನ್ನು 80 ಟನ್ ಸ್ಟೀಲ್ ಬಳಸಿ ನಿರ್ಮಿಸಲಾಗುತ್ತಿದೆ. ಅಟ್ಟಳಿಗೆ 13.7ಮೀ. ಅಗಲ, 62 ಅಡಿ ಎತ್ತರ ಇರಲಿದೆ. ಪ್ಲೈವುಡ್ ಹಾಕಿ ನಿಲ್ಲಲು ವ್ಯವಸ್ಥೆ ಮಾಡಲಾಗುತ್ತದೆ. 400ರಿಂದ 500 ಜನ ನಿಂತು ಅಭಿಷೇಕ ಮಾಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅಟ್ಟಳಿಗೆ ಹಿಂಭಾಗದಿಂದ ಮೆಟ್ಟಿಲುಗಳ ವ್ಯವಸ್ಥೆಯಿದೆ. ಅಟ್ಟಳಿಗೆಗೆ ತೆರಳಲು ಸಾಧ್ಯವಾಗುವಂತೆ 2 ಪ್ರತ್ಯೇಕ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ. ವಸ್ತುಗಳನ್ನು ಕೊಂಡೊಯ್ಯಲು ಒಂದು ಲಿಫ್ಟ್ ಹಾಗೂ ಜನರನ್ನು ಸಾಗಿಸಲು ಮತ್ತೊಂದು ಲಿಫ್ಟ್ ನೆರವಾಗಲಿದೆ. 2, 3 ದಿನದಲ್ಲಿ ಕೆಲಸ ಆರಂಭವಾಗಲಿದ್ದು, 15 ದಿನಗಳಲ್ಲಿ ಅಟ್ಟಳಿಗೆ ನಿರ್ಮಾಣ ಕಾರ್ಯ ಮುಗಿಯಲಿದೆ ಎಂದು ಮಹಾಪದ್ಮಪ್ರಸಾದ್ ತಿಳಿಸಿದ್ದಾರೆ.