ಭಾವಚಿತ್ರಗಳಲ್ಲಿ ಅಟಲ್ ಅನಾವರಣ

ಕೃಷ್ಣ ಕುಲಕರ್ಣಿ ಕಲಬುರಗಿ
ಅಟಲ್ ಎಂದಾಕ್ಷಣ ನೆನಪಾಗುವುದು ಅವರ ಕವನ ವಾಚನ, ಅದ್ಭುತ ಮಾತುಗಾರಿಕೆ ಹಾಗೂ 1999ರಲ್ಲಿ ವಿಶ್ವಾಸಮತಕ್ಕೂ ಮುನ್ನ ಮಾಡಿದ ಭಾಷಣ. ಬೆಂಗಳೂರಿನ ಪ್ರಯಾಸ್ ಟ್ರಸ್ಟ್ನಿಂದ ಮರಾಠಿ ಸಾಹಿತ್ಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಪ್ಪು ಮತ್ತು ಬಿಳುಪಿನ ಭಾವಚಿತ್ರಗಳ ಪ್ರದರ್ಶನ ಅಟಲ್ಜಿ ಬದುಕಿನ ಮಹತ್ತರ ಕ್ಷಣಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು.
ಕವಿ ಹೃದಯದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಕಾರಣದಲ್ಲಿ ಅಜಾತಶತ್ರು ಎಂದೇ ಖ್ಯಾತರು. ಇಂಥ ಶ್ರೇಷ್ಠ ವ್ಯಕ್ತಿತ್ವದ ಕಪ್ಪು ಬಿಳುಪಿನ 70-80ರ ದಶಕದ ಭಾವಚಿತ್ರಗಳನ್ನು ನೋಡಿದವರಿಗೆ ಮತ್ತೊಮ್ಮೆ ಅವರನ್ನು ನೆನೆಸಿಕೊಳ್ಳುವಂತೆ ಪ್ರದರ್ಶನ ಅವಕಾಶ ಮಾಡಿಕೊಟ್ಟಿತು.
ಅಟಲ್ಜಿ ಅವರ ಪ್ರತಿವರ್ಷದ ಜನ್ಮದಿನದಂದು ಬೆಂಗಳೂರಿನ ಪ್ರಯಾಸ್ ಟ್ರಸ್ಟ್ ವಿನೂತನ ಕಾರ್ಯಕ್ರಮ ಸಂಘಟಿಸುತ್ತ ಬರುತ್ತಿದೆ. ಇದೀಗ ಕಲಬುರಗಿಯಲ್ಲಿ ಮೊದಲ ಸಲ ಅಟಲ್ಜಿ ಅವರು ಸಂಘ ಪರಿವಾರ ಹಾಗೂ ಜನಸಂಘದ ಜತೆಗಿನ ಕಪ್ಪು- ಬಿಳುಪಿನ ಚಿತ್ರಗಳನ್ನು ಪ್ರದರ್ಶಿಸಿದ್ದು ನೋಡುಗರ ಮನ ಸೆಳೆಯುತ್ತಿದೆ.
ರಾಜ್ಯದಲ್ಲಿ ಅಟಲ್ಜಿ ಭಾವಚಿತ್ರಗಳ ಎರಡನೇ ಪ್ರದರ್ಶನ ಇದಾಗಿದೆ. ಮೊದಲು ಬೆಂಗಳೂರಿನಲ್ಲಿ ನಡೆದಿದೆ. ಪ್ರದರ್ಶನದಲ್ಲಿ 110 ಭಾವಚಿತ್ರಗಳಲ್ಲಿ ವಾಜಪೇಯಿ ರಾರಾಜಿಸುತ್ತಿದ್ದಾರೆ. ಭಾಷಣಕಾರನಾಗಿ, ಸಭೆಗಳಲ್ಲಿ ಜನರೊಂದಿಗೆ ಮಾತನಾಡುತ್ತಿರುವ ಹಾಗೂ ಜನ ಸಂಘ ಮತ್ತು ಸಂಘ ಪರಿವಾರದ ಮುಖಂಡರ ಜತೆ ಸಮಾಲೋಚನೆ ನಡೆಸುತ್ತಿರುವುದು ಸೇರಿ ಹಲವು ಚಿತ್ರಗಳು ಹಿಂದಿನ ದಿನಗಳನ್ನು ಮೆಲಕು ಹಾಕುವಂತೆ ಮಾಡಿವೆ.
ಬೆಳಗ್ಗೆ 10ಕ್ಕೆ ಶುರುವಾದ ಪ್ರದರ್ಶನಕ್ಕೆ ಜನರು ತಂಡೋಪತಂಡವಾಗಿ ಆಗಮಿಸಿ ಅಜಾತಶತ್ರುವಿನ ವಿವಿಧ ಭಂಗಿಗಳನ್ನು ಕಣ್ತುಂಬಿಕೊಂಡರು. ಒಂದಿಷ್ಟು ಜನ ತಮ್ಮ ಮೊಬೈಲ್ಗಳಲ್ಲಿ ಭಾವಚಿತ್ರ ಸೆರೆಹಿಡಿದು ಸಂತೋಷ ಪಟ್ಟರು. ಪ್ರಯಾಸ್ ಟ್ರಸ್ಟ್ನ ಪ್ರಮುಖರು ಸಭಾಂಗಣದಲ್ಲಿದ್ದು, ಭಾವಚಿತ್ರಗಳ ಬಗ್ಗೆ ವಿವರಣೆ ನೀಡುತ್ತಿರುವುದು ಪ್ರದರ್ಶನಕ್ಕೆ ಮತ್ತಷ್ಟು ಅರ್ಥಪೂರ್ಣತೆ ತಂದುಕೊಟ್ಟಿತು.
ಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಅಟಲ್ಜಿ ಅವರ ಎಲ್ಲ ಭಾವಚಿತ್ರಗಳನ್ನು ಹಾಳೆ ಮೇಲೆ ಮುದ್ರಣ ಮಾಡಲಾಗಿತ್ತು. ಸಭಾಂಗಣದ ಸುತ್ತ ಬಟ್ಟೆ ಅಳವಡಿಸಿ, ಅದರ ಮೇಲೆ ಪಿನ್ಗಳ ಸಹಾಯದಿಂದ ಸುಂದರವಾಗಿ ಭಾವಚಿತ್ರಗಳನ್ನು ಜೋಡಿಸಿರುವುದು ಗಮನ ಸೆಳೆಯಿತು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮೇಲಿನ ಅಭಿಮಾನದಿಂದ ಪ್ರತಿವರ್ಷ ಪ್ರಯಾಸ್ ಟ್ರಸ್ಟ್ ವಿನೂತನ ಕಾರ್ಯಕ್ರಮ ಮಾಡುತ್ತಿದೆ. ಕಳೆದ ಸಲ ಸಂಗೀತ ಸಂಜೆ ಹಾಗೂ ಕವನ ಸ್ಪರ್ಧೆ ಆಯೋಜಿಸಿತ್ತು. ಈ ಬಾರಿ ಅಟಲ್​ಜಿ ಭಾವಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
| ವಿನಯ್ ಜಕಾತಿ ಪ್ರಧಾನ ಕಾರ್ಯದರ್ಶಿ, ಪ್ರಯಾಸ್ ಟ್ರಸ್ಟ್

ಅಟಲ್ಜಿ ಭಾವಚಿತ್ರಗಳ ಪ್ರದರ್ಶನ ಒಳ್ಳೆಯ ಕಾರ್ಯಕ್ರಮ. ಈ ಮೂಲಕ ಅವರ ಜೀವನ ಸಾಧನೆಯನ್ನು ಕಣ್ತುಂಬಿಕೊಂಡಂತಾಗಿದೆ. ಮುಂದಿನ ದಿನಗಳಲ್ಲಿ ಮಹಾನ್ ವ್ಯಕ್ತಿಗಳ ಪುಸ್ತಕಗಳ ಪ್ರದರ್ಶನವೂ ನಡೆಯಲಿ.

| ಭಾರತಿ ಕುಲಕರ್ಣಿ, ಕಲಬುರಗಿ

ಹಳೆಯ ಕಪ್ಪು ಬಿಳುಪಿನ ಭಾವಚಿತ್ರಗಳನ್ನು ವೀಕ್ಷಿಸಲು ತುಂಬ ಖುಷಿ ಅನಿಸುತ್ತದೆ. ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ನಡೆಯಬೇಕಿದೆ. ಈ ಮೂಲಕ ಮುಂದಿನ ತಲೆಮಾರಿಗೆ ಮಹಾನ್ ವ್ಯಕ್ತಿಗಳ ಜೀವನ ಹಾಗೂ ಸಾಧನೆಗಳನ್ನು ತಿಳಿಸುವ ಕಾರ್ಯ ನಡೆಯುತ್ತಿರಲಿ.
|ದಯಾಘನ್ ಧಾರವಾಡಕರ್, ಬಿಜೆಪಿ ಹಿರಿಯ ಮುಖಂಡ

ಖರೀದಿಗೂ ಅವಕಾಶ: ಅಟಲ್ಜಿ ಅವರ ಒಂದೇ ದಶಕದ ಚಿತ್ರಗಳು ಕಂಡು ಬರುತ್ತಿವೆ ಎಂಬ ಕೊರಗು ನೋಡುಗರಲ್ಲಿ ಕಂಡಿತು. ಆದರೆ ಅಂತರ್ಜಾಲದಲ್ಲಿಲ್ಲದ ಪ್ರಮುಖ ಚಿತ್ರಗಳನ್ನು ಸಂಗ್ರಹಿಸಿ ಪ್ರಯಾಸ್ ಟ್ರಸ್ಟ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಹಿಂದೆ ಬೆಂಗಳೂರಿನ ರಾಜಾಜಿನಗರ ರಾಮ ಮಂದಿರ ಮೈದಾನದಲ್ಲಿ ಅಟಲ್ ಭಾವಚಿತ್ರ ಪ್ರದರ್ಶನ ಜರುಗಿತ್ತು. ಇದೀಗ ಕಲಬುರಗಿಯಲ್ಲಿ ನಡೆದಿದೆ. ವೀಕ್ಷಕರಿಗೆ ಇಷ್ಟವಾದರೆ ಸ್ಥಳದಲ್ಲೇ ಅಟಲ್ಜಿ ಅವರ ಅಪರೂಪದ ಭಾವಚಿತ್ರ ಖರೀದಿಯ ಅವಕಾಶವನ್ನು ಟ್ರಸ್ಟ್ ಕಲ್ಪಿಸಿತ್ತು.