ಪುತ್ತೂರು: ಬನ್ನೂರು ಕಂಜೂರಿನಲ್ಲಿ ಗಲಾಟೆ ನಡೆಯುತ್ತಿದ್ದಲ್ಲಿಗೆ ಹೋದ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ, ಸಿಬ್ಬಂದಿಗೆ ಹಲ್ಲೆ ನಡೆಸಿದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನೂರು ಗ್ರಾಮದ ಕಂಜೂರು ನಿವಾಸಿ ತೇಜಸ್ ಬಂಧಿತ ಆರೋಪಿ. ಜು.26ರಂದು ರಾತ್ರಿ ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದ ಬಗ್ಗೆ ಜಿಲ್ಲಾ ಕಂಟ್ರೋಲ್ ರೂಮ್‌ನಿಂದ ಬಂದಿರುವ ಮಾಹಿತಿಯಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ತುರ್ತುಸ್ಪಂದನಾ ವಾಹನದಲ್ಲಿ ಸ್ಥಳಕ್ಕೆ ತೆರಳಿದ್ದು, ತೇಜಸ್ ತಾಯಿ ಚಂದ್ರಾವತಿ ಅವರನ್ನು ಪೊಲೀಸ್ ಸಿಬ್ಬಂದಿ ಶೀನಪ್ಪ ಗೌಡ ವಿಚಾರಿಸಿದ್ದಾರೆ.
ಮನೆಗೆ ಪೊಲೀಸರು ಯಾಕೆ ಬಂದಿರುವುದು ಎಂದು ಪ್ರಶ್ನಿಸಿ ತನ್ನ ಕಾರನ್ನು ತುರ್ತು ಸ್ಪಂದನಾ ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿದಲ್ಲದೆ ಕಾರನ್ನು ತೆರವು ಮಾಡದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ನಗರ ಪೊಲೀಸ್ ಠಾಣೆಯಿಂದ ಎಎಸ್‌ಐ ಮೋನಪ್ಪ ಮತ್ತು ಸಿಬ್ಬಂದಿ ಆಗಮಿಸಿ ವಾಹನ ತೆರವು ಮಾಡಲು ಸೂಚಿಸಿದಾಗ ಸ್ಟೀಲ್ ರಾಡ್ ಹಿಡಿದುಕೊಂಡು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಪೊಲೀಸ್ ವಾಹನ ಚಾಲಕರಾದ ವಿನಾಯಕ ಮತ್ತು ಸಂತೋಷ್ ಧಂದರಗಿ ಗಾಯಗೊಂಡಿದ್ದಾರೆ.