ಭಟ್ಕಳ: ಶಂಸುದ್ದೀನ್ ಸರ್ಕಲ್ ಸಮೀಪ ರಸ್ತೆ ದಾಟುತ್ತಿದ್ದ ಬಿಜೆಪಿ ಮುಖಂಡನ ಮೇಲೆ ಕಾಲೇಜು ವಾಹನ ಚಾಲಕನೋರ್ವ ಅನಾವಶ್ಯಕವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಕುರಿತು ನಗರಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದ್ದು, ಅಂಜುಮನ್ ಕಾಲೇಜ್ ಬಸ್ ಚಾಲಕನ ಇರ್ಷಾದ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮುಚ್ಚಳ್ಳಿ ಮೂಡ ಭಟ್ಕಳ ನಿವಾಸಿ ರಾಘವೇಂದ್ರ ರಾಮಚಂದ್ರ ನಾಯ್ಕ ಹಲ್ಲೆಗೊಳಗಾದ ವ್ಯಕ್ತಿ.
ಭಟ್ಕಳ ಶಂಸುದ್ದೀನ್ ಸರ್ಕಲ್ ಬಳಿ ಇಳಿದು ಕೋಲಾ ಪ್ಯಾರಡೈಸ್ ಸಮೀಪವಿದ್ದ ಕೇಬಲ್ ಕಚೇರಿಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಕೋಲಾ ಪ್ಯಾರಡೈಸ್ ರಸ್ತೆಯಿಂದ ಅತಿವೇಗದಿಂದ ಬಂದ ಕಾಲೇಜಿನ ವಾಹನ ಅತಿವೇಗವಾಗಿ ಬಂದ ಪರಿಣಾಮ ರಾಘವೇಂದ್ರ ಅವರು ರಸ್ತೆ ಪಕ್ಕದಲ್ಲಿ ಬಿದ್ದಿದ್ದಾರೆ.
ಈ ವೇಳೆ ವಾಹನ ಚಾಲಕ ಹಾಗೂ ರಾಘವೇಂದ್ರ ಅವರ ನಡುವೆ ವಾಗ್ವಾದ ನಡೆದಿದೆ. ಬಳಿಕ ವಾಹನ ಚಾಲಕ ಬಸ್ ಅನ್ನು ಅಲ್ಲೇ ಮುಂದೆ ನಿಲ್ಲಿಸಿ ಬಂದು ಅಡ್ಡಗಟ್ಟಿ ಅವಾಚ್ಯ ಶಬ್ದದಿಂದ ನಿಂದಿಸಿ, ರಸ್ತೆ ಮೇಲೆ ಕೆಡವಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ. ರಾಘವೇಂದ್ರ ಅವರನ್ನು ಸ್ನೇಹಿತರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಕಾಲೇಜು ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.