ಬೆಂಗಳೂರು: ತನ್ನ ಪತ್ನಿ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನನ್ನು ಬಾರ್‌ಗೆ ಕರೆದೊಯ್ದು ಮದ್ಯ ಕುಡಿಸಿ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಆರೋಪಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಾಣಿಗರಪಾಳ್ಯ ನಿವಾಸಿ ಅರ್ಜುನ್(೩೫) ಬಂಧಿತ. ಆರೋಪಿ, ಸ್ನೇಹಿತ ಕಿರಣ್‌ನನ್ನು ಬಾರ್‌ಗೆ ಕರೆದೊಯ್ದು ಮದ್ಯ ಕುಡಿಸಿ ಬಳಿಕ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾದ ಕಿರಣ್ ಖಾಸಗಿ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾನೆ. ಫೆ.೪ರಂದು ರಾತ್ರಿ ತಲಘಟ್ಟಪುರ ಠಾಣಾ ವ್ಯಾಪ್ತಿಯ ಗಾಣಿಗರಪಾಳ್ಯದ ಸರ್ಕಲ್ ಬಳಿ ಘಟನೆ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಅರ್ಜುನ್ ಕಾರು ಚಾಲಕನಾಗಿದ್ದು, ಹಲ್ಲೆಗೊಳಗಾದ ಕಿರಣ್ ಫ್ಯಾಬ್ರಿಕೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ. ಒಂದೂವರೆ ವರ್ಷದಿಂದ ಇಬ್ಬರು ಸ್ನೇಹಿತರಾಗಿದ್ದು, ಹೀಗಾಗಿ ಆಗಾಗ್ಗೆ ಅರ್ಜುನ್ ಮನೆಗೆ ಕಿರಣ್ ಬರುತ್ತಿದ್ದ. ಆಗ ಅರ್ಜುನ್ ಪತ್ನಿ ಕಂಡ ಕಿರಣ್, ಆಕೆಯನ್ನು ಸಂಪರ್ಕಿಸಲು ಯತ್ನಿಸಿದ್ದಾನೆ. ಆಕೆ ನಂಬರ್ ಪಡೆದು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸುತ್ತಿದ್ದ. ಕರೆ ಕೂಡ ಮಾಡುತ್ತಿದ್ದ. ಆದರೆ, ಆಕೆ ಅಷ್ಟಾಗಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಈ ಮಧ್ಯೆ ಕಿರಣ್, ಮದ್ಯದ ಅಮಲಿನಲ್ಲಿ ನಿನ್ನ ಪತ್ನಿ ಜತೆ ನಾನು ಖಾಸಗಿ ಸಮಯ ಕಳೆಯಬೇಕೆಂದು ಅರ್ಜುನ್ ಬಳಿಯೇ ಹೇಳಿಕೊಂಡಿದ್ದ ಎನ್ನಲಾಗಿದೆ. ಅದರಿಂದ ಕೋಪಗೊಂಡ ಅರ್ಜುನ್ ಆತನಿಗೆ ಎಚ್ಚರಿಕೆ ನೀಡಿ, ಹಲ್ಲೆ ಕೂಡ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೂ ಬುದ್ದಿ ಕಲಿಯದ ಕಿರಣ್, ಅರ್ಜುನ್ ಪತ್ನಿಗೆ ಕರೆ ಮಾಡುತ್ತಿದ್ದ. ಇದರಿಂದ ಮತ್ತಷ್ಟು ಕೆರಳಿದ ಆರೋಪಿ, ಸ್ನೇಹಿತನಿಗೆ ಬುದ್ಧಿ ಕಲಿಸಲು ಸಂಚು ರೂಪಿಸಿದ್ದ. ಫೆ.೪ರಂದು ಕಿರಣ್‌ನನ್ನು ಬಾರ್‌ಗೆ ಕರೆದೊಯ್ದು ಮದ್ಯ ಕುಡಿಸಿದ್ದ. ಮತ್ತೊಂದೆಡೆ ಸ್ನೇಹಿತನ ಮೇಲೆ ಹಲ್ಲೆಗೆ ಮೊದಲೇ ಸಿದ್ದತೆ ಮಾಡಿಕೊಂಡಿದ್ದ. ಮನೆಯಿಂದ ಹೊರಡುವಾಗಲೇ ಮಾರಕಾಸ್ತ್ರವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ. ಬಾರ್‌ನಲ್ಲಿ ಮದ್ಯ ಕುಡಿಸಿದ ಬಳಿಕ, ಗಾಣಿಗಾರಪಾಳ್ಯ ಸರ್ಕಲ್ ಬಳಿ ನಡೆದುಕೊಂಡು ಹೋಗುವಾಗ ಕಿರಣ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಅದರಿಂದ ಕಿರಣ್ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಬಳಿಕ ಸ್ಥಳೀಯರು ಕಿರಣ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಿರಣ್ ಸಹೋದರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.