ಅಬ್ಬನ ಗ್ರಾಮದಲ್ಲಿ ಕಾಡಾನೆಗಳ ದಾಳಿ

ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಬ್ಬನ ಗ್ರಾಮದಲ್ಲಿ ಬುಧವಾರ ಮುಂಜಾನೆ 25ಕ್ಕೂ ಹೆಚ್ಚು ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.

ಶ್ರೀನಿವಾಸಯ್ಯ, ದಿನೇಶ್, ಶ್ರೀನಿವಾಸ್ ಎ.ಸಿ.ನಾಗರಾಜು, ವಂಸತಶೆಟ್ಟಿ, ಮೋಹನ, ಮಣ್ಣಶೆಟ್ಟಿ, ಲೋಲಾಕ್ಷಿಶೆಟ್ಟಿ, ಚನ್ನಮ್ಮ, ಸುಂದರಮ್ಮ, ಚೂಡಾಮಣಿ ಎಂಬುವರ ಕಾಫಿ ತೋಟಗಳಿಗೆ 25 ಆನೆಗಳು ಹಾಗೂ ನಾಲ್ಕು ಮರಿಗಳಿರುವ ಹಿಂಡು ಲಗ್ಗೆ ಇಟ್ಟಿದ್ದು, ಮೆಣಸಿನ ಬಳ್ಳಿ, ಸಿಲ್ವರ್ ಓಕ್ ಗಿಡ, ಬಾಳೆ ಹಾಗೂ ಕಾಫಿ ಗಿಡಗಳನ್ನು ತುಳಿದು ನಾಶಗೊಳಿಸಿವೆ.

ಕಣ್ಣೀರಿಟ್ಟ ಬೆಳೆಗಾರ: ಮೂರು ವರ್ಷಗಳ ಹಿಂದೆ ಹೊಸದಾಗಿ ತೋಟ ಮಾಡಿದ್ದ ಯುವ ರೈತ ಆನಂದ್ ಅವರು ಮೊದಲ ವರ್ಷದ ಫಸಲಿನ ನಿರೀಕ್ಷೆಯಲ್ಲಿದ್ದರು. ಕಾಫಿ ಫಸಲು ಕೊಯ್ಯುವ ಹಂತ ತಲುಪಲು ಲಕ್ಷಾಂತರ ರೂ. ವ್ಯಯಿಸಿದ್ದರು. ಆದರೆ ಒಂದೇ ರಾತ್ರಿಯಲ್ಲಿ ಕಾಡಾನೆಗಳ ಹಿಂಡು ಇಡಿ ತೋಟವನ್ನೇ ನಾಶಗೊಳಿಸಿವೆ.

ಬೆಳಗ್ಗೆ ಆನೆಗಳು ಬಂದಿವೆ ಎಂದು ತಿಳಿಯಿತು. ಬಂದು ನೋಡಿದಾಗ ಮರಿಯಾನೆಗಳ ಜತೆಗೆ ಸುಮಾರು 25 ಆನೆಗಳು ಮನಸೋಇಚ್ಛೆ ಓಡಾಡುತ್ತಿದ್ದವು. ನಾವು ಅಸಹಾಯಕರಾಗಿ ನಿಲ್ಲಬೇಕಾಯಿತು. ಎಲ್ಲರೂ ಅವರ ತೋಟಗಳನ್ನು ಕಾಪಾಡಿಕೊಳ್ಳಲು ನಮ್ಮ ಜಮೀನಿನತ್ತ ಆನೆಗಳನ್ನು ಓಡಿಸಿದ್ದಾರೆ. ಜೀವನ ರೂಪಿಸಿಕೊಳ್ಳಲು ನಿರ್ಮಿಸಿದ ತೋಟ ನಾಶವಾಗಿದೆ. ಈಗ ನಾನು ಜೀವನಕ್ಕೆ ಏನು ಮಾಡಬೇಕು ಎಂದು ಆನಂದ್ ಕಣ್ಣೀರಿಟ್ಟರು.
ಆನೆ ಓಡಿಸಿ: ಕಾಡಾನೆಗಳ ಹಿಂಡು ಸಂಚರಿಸುತ್ತಿರುವುದರಿಂದ ಬೆಳೆದ ಬೆಳೆ ಕೈಸೇರದಂತಾಗಿದೆ. ಇನ್ನೊಂದು ತಿಂಗಳಿನಲ್ಲಿ ಕೊಯ್ಲಿಗೆ ಬರುವ ಕಾಫಿ, ಮೆಣಸು ಮತ್ತು ಬಾಳೆ ಬೆಳೆಗೆ ಆನೆ ದಾಳಿಯಿಂದ ಅಪಾರ ನಷ್ಟ ಉಂಟಾಗಿದೆ. ರಾತ್ರಿ ವೇಳೆ ಮನೆಯಿಂದ ಹೊರಬರಲಾರದ ಪರಿಸ್ಥಿತಿ ತಲೆದೋರಿ ಜನರು ಜೀವ ಭಯದಿಂದ ಬದುಕಬೇಕಾಗಿದೆ. ಆನೆಗಳನ್ನು ಅರಣ್ಯ ಇಲಾಖೆ ಕೂಡಲೇ ಕಾಡಿಗೆ ಓಡಿಸಲು ಕ್ರಮ ಕೈಗೊಳ್ಳಬೇಕು. ನಷ್ಟಭರ್ತಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದರು.

ಅರಣ್ಯಾಧಿಕಾರಿಗಳ ಭೇಟಿ: ಕಾಡಾನೆಗಳು ದಾಂಗುಡಿ ಇಟ್ಟಿರುವ ಅಬ್ಬನ ಗ್ರಾಮದ ಕಾಫಿ ತೋಟಗಳಿಗೆ ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್‌ಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸಕಲೇಶಪುರ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಿಂದ ಹೊರಬರುವ ಕಾಡಾನೆಗಳು ರಾತ್ರಿಯಿಡೀ ಆಹಾರಕ್ಕಾಗಿ ಅಲೆದು ಸಿಕ್ಕ ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿವೆ. ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಕೆ. ಹೊಸಕೋಟೆ ಭಾಗದಲ್ಲೇ ಹೆಚ್ಚು ಕಾಫಿ, ಮೆಣಸು ತೋಟಗಳಿರುವುದರಿಂದ ಅವುಗಳು ಇಲ್ಲಿಯೇ ಹೆಚ್ಚು ಓಡಾಡುತ್ತಿವೆ. ಈ ಭಾಗದ ಸಾರ್ವಜನಿಕರು ಎಚ್ಚರದಿಂದ ಇರಬೇಕು. ಅರಣ್ಯ ಇಲಾಖೆ ಸಿಬ್ಬಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

 

Leave a Reply

Your email address will not be published. Required fields are marked *