ಮತ್ತೆ ಕರೆನ್ಸಿ ಎಮರ್ಜೆನ್ಸಿ!

ನೋಟು ಅಮಾನ್ಯೀಕರಣದ ಆರಂಭಿಕ ದಿನಗಳಲ್ಲಾದಂತೆ ಈಗ ಮತ್ತೆ ಹಲವು ರಾಜ್ಯಗಳಲ್ಲಿ ನಗದು ಕೊರತೆ ಎದುರಾಗಿದೆ. ವಿಧಾನಸಭೆ ಚುನಾವಣೆಗೆ ಸಜ್ಜಾಗಿರುವ ಕರ್ನಾಟಕ ಸೇರಿ 9ಕ್ಕೂ ಹೆಚ್ಚು ರಾಜ್ಯಗಳ ಎಟಿಎಂಗಳು ಖಾಲಿಯಾಗಿದ್ದು, ಹಣವಿಲ್ಲ ಎಂಬ ಬೋರ್ಡ್​ಗಳು ರಾರಾಜಿಸುತ್ತಿವೆ. ಕೇಂದ್ರ ಸರ್ಕಾರದ ಆರ್ಥಿಕ ಅವ್ಯವಸ್ಥೆಯೇ ಈ ಸ್ಥಿತಿಗೆ ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿದ್ದರೆ, ಇದು ತಾತ್ಕಾಲಿಕ ಸಮಸ್ಯೆ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.

ಯಾವ್ಯಾವ ರಾಜ್ಯಗಳಲ್ಲಿ ಸಮಸ್ಯೆ

ಕರ್ನಾಟಕ, ಗುಜರಾತ್, ಪೂರ್ವ ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಮಣಿಪುರ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ.

500 ರೂ. ಮುದ್ರಣ ಹೆಚ್ಚಳ

ನೋಟುಕೊರತೆ ಹಿನ್ನೆಲೆಯಲ್ಲಿ 500 ರೂ. ನೋಟಿನ ಮುದ್ರಣವನ್ನು 5 ಪಟ್ಟು ಹೆಚ್ಚಿಸಲು ಆರ್​ಬಿಐ ನಿರ್ಧರಿಸಿದೆ. ಪ್ರತಿ ದಿನ 500 ಕೋಟಿ ರೂ. ಮುದ್ರಿಸುತ್ತಿರುವುದನ್ನು 2,500 ಕೋಟಿ ರೂ.ಗಳಿಗೆ ಏರಿಸಲಾಗುವುದು. ಮುಂದಿನ 1 ತಿಂಗಳಲ್ಲಿ 75 ಸಾವಿರ ಕೋಟಿ ರೂ. ಮೊತ್ತದ ಹೊಸ ನೋಟು ಮಾರುಕಟ್ಟೆಗೆ ಬರಲಿದೆ ಎಂದು ಆರ್​ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ವಾರಾಂತ್ಯದೊಳಗೆ ಪರಿಹಾರ

ದೇಶಾದ್ಯಂತ ಎಟಿಎಂ, ಬ್ಯಾಂಕ್​ಗಳಲ್ಲಿನ ನಗದು ಸಮಸ್ಯೆಗೆ ವಾರಾಂತ್ಯದೊಳಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಕೇಂದ್ರ ಆರ್ಥಿಕ ಇಲಾಖೆ ಸ್ಪಷ್ಟನೆ ನೀಡಿದೆ.

ಆರ್​ಬಿಐ ಕ್ರಮ

ಪ್ರತಿ ರಾಜ್ಯದ ನಗದು ಲಭ್ಯತೆ ಕುರಿತಂತೆ ಆರ್​ಬಿಐ ಪ್ರತ್ಯೇಕ ಮಾಹಿತಿ ಸಂಗ್ರಹಿಸುತ್ತಿದೆ. ನಗದು ಕೊರತೆ ಇರುವ ರಾಜ್ಯಗಳಿಗೆ ಕೂಡಲೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

2 ಸಾವಿರ ರೂ. ಸಂಗ್ರಹ?

ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ದೇಶಾದ್ಯಂತ 17.74 ಲಕ್ಷ ಕೋಟಿ ರೂ. ನಗದು ಲಭ್ಯವಿತ್ತು. ಸದ್ಯ ಈ ಪ್ರಮಾಣ 18.26 ಲಕ್ಷ ಕೋಟಿ ರೂ.ಗೆ ಏರಿಕೆ ಆಗಿದೆ. ಆದರೂ ನಗದು ಕೊರತೆ ಎದುರಾಗಲು 2 ಸಾವಿರ ರೂ. ನೋಟುಗಳ ಅಧಿಕ ಸಂಗ್ರಹವೇ ಕಾರಣ ಎನ್ನಲಾಗುತ್ತಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಅಂಶವನ್ನು ಬಹಿರಂಗವಾಗಿಯೇ ಹೇಳಿದ್ದು, ಆರ್​ಬಿಐ ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜನರಿಗೆ ಬುರೇ ದಿನ್

ನೋಟು ಅಮಾನ್ಯೀಕರಣದ ಮೂಲಕ ಜನರ ಬಳಿಯಿದ್ದ 500 ಹಾಗೂ 1 ಸಾವಿರ ರೂ. ನೋಟನ್ನು ಪ್ರಧಾನಿ ಮೋದಿ ಕಸಿದುಕೊಂಡು, ನೀರವ್ ಮೋದಿ ಜೇಬಿಗೆ 30 ಸಾವಿರ ಕೋಟಿ ರೂ. ತುಂಬಿದ್ದಾರೆ. ಆದರೆ ಈ ಬಗ್ಗೆ ಮಾತನಾಡಲು ಸಂಸತ್​ನಲ್ಲಿ ಅವಕಾಶವನ್ನೇ ನೀಡುವುದಿಲ್ಲ. ನೀರವ್ ಮೋದಿ ಸೇರಿ ಕೇವಲ 15 ಜನರಿಗಷ್ಟೇ ಅಚ್ಛೇ ದಿನ್ ಬಂದಿದೆ. ಸಾಮಾನ್ಯ ಜನತೆ ಹಾಗೂ ರೈತರಿಗೆ ಬುರೇ ದಿನ್ ಬಂದಿದೆ

ರಾಹುಲ್ ಗಾಂಧಿ ಟ್ವೀಟ್

ಬ್ಯಾಂಕ್​ಗಳಿಂದ ನೋಟು ಹಿಂತೆಗೆತದ ಅಭಿಯಾನ ಮಾಡುವಂತೆ ಬೆಂಗಳೂರು ಸಮಾವೇಶದಲ್ಲಿ ರಾಹುಲ್ ಕರೆ ನೀಡಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ಬಹುಮಾನ ನೀಡುವ ಸಲುವಾಗಿ ಇಂತಹ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಈ ಹಿಂದೆ ದೇಶದ ಆರ್ಥಿಕ ವ್ಯವಸ್ಥೆ ಹಾಳು ಮಾಡಿದ್ದ ಕಾಂಗ್ರೆಸ್, ಈಗ ದೇಶವನ್ನೇ ಹಾಳುಮಾಡಲು ಹೊರಟಿದೆ. ಇದು ಕಾಂಗ್ರೆಸ್​ನ ಕೀಳು ಸಂಸ್ಕೃತಿಯನ್ನು ಸೂಚಿಸುತ್ತದೆ.

ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ

ಕಾರಣವೇನು?

ಸರಣಿ ಹಬ್ಬ, ಕೃಷಿ ಉತ್ಪಾದನೆಗಳು ಮಾರುಕಟ್ಟೆಗೆ ಬಂದಿದ್ದು, ಠೇವಣಿ ಪ್ರಮಾಣದಲ್ಲಿ ಇಳಿಕೆ.

ದೇಶದಲ್ಲಿ ಸಾಕಷ್ಟು ಕರೆನ್ಸಿ ಚಲಾವಣೆ ಯಲ್ಲಿದೆ. ಕೆಲವು ಪ್ರದೇಶಗಳಲ್ಲಿ ಹಠಾತ್ ಮತ್ತು ಅಸಾಮಾನ್ಯ(ಹೆಚ್ಚಳ)ಬೇಡಿಕೆ ಉಂಟಾದ ಹಿನ್ನೆಲೆಯಲ್ಲಿ ನಗದು ಕೊರತೆ ಎದುರಾಗಿದೆ. ಶೀಘ್ರ ಈ ತಾತ್ಕಾಲಿಕ ಕೊರತೆ ನಿಭಾಯಿಸಲಾಗುವುದು.

| ಅರುಣ್ ಜೇಟ್ಲಿ ಕೇಂದ್ರ ವಿತ್ತ ಸಚಿವ

ಕೊರತೆಗೆ 200 ರೂ. ಕಾರಣ!

ಎಟಿಎಂ ಯಂತ್ರಕ್ಕೆ 200 ರೂ. ಸೇರಿಸುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ದೇಶಾದ್ಯಂತ ಹಣದ ಕೊರತೆ ಎದುರಾಗಿದೆ. ಶೀಘ್ರದಲ್ಲೇ ಈ ಪ್ರಕ್ರಿಯೆ ಅಂತ್ಯವಾಗಲಿದ್ದು, ನಗದು ಕೊರೆತೆ ನೀಗಲಿದೆ ಎಂದು ಆರ್​ಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ 2 ಸಾವಿರ ರೂ. ಮೌಲ್ಯದ ನೋಟುಗಳ ಮುದ್ರಣ ಮತ್ತೆ ಮಾಡುವುದಿಲ್ಲ, ಈಗಾಗಲೇ 7 ಲಕ್ಷ ರೂ.ಮೌಲ್ಯದ 2 ಸಾವಿರ ರೂ. ನೋಟುಗಳಿವೆ ಎಂದು ಆರ್​ಬಿಐ ಹೇಳಿದೆ.

ರಾಜ್ಯದಲ್ಲೂ ನೋ ಕ್ಯಾಷ್

ಬೆಂಗಳೂರು: ‘ತುರ್ತ ಹಣದ ಅಗತ್ಯವಿದೆ. ಬ್ಯಾಂಕ್ ಖಾತೆಯಲ್ಲಿ ದುಡ್ಡಿದ್ದರೂ ಕೈಗೆ ಸಿಗುತ್ತಿಲ್ಲ. ಯಾವ ಎಟಿಎಂ ನೋಡಿದರೂ ನೋ ಕ್ಯಾಷ್/ ಔಟ್ ಆಫ್ ಸರ್ವೀಸ್ ಬೋರ್ಡ್. ಕಿಲೋಮೀಟರ್​ಗಟ್ಟಲೆ ಸುತ್ತಾಡಿದರೂ ಪ್ರಯೋಜನವಾಗುತ್ತಿಲ್ಲ..’ ಇದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೇಳಿಬರುತ್ತಿರುವ ಗ್ರಾಹಕರ ದೂರು. ಗ್ರಾಹಕರಿಗೆ ಸೇವೆ ಒದಗಿಸಲು ಪ್ರತಿಯೊಂದಕ್ಕೂ ಶುಲ್ಕ ವಿಧಿಸುವ ಬ್ಯಾಂಕ್​ಗಳು ಅದೇ ಗ್ರಾಹಕರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡುವಲ್ಲಿಯೂ ವಿಫಲವಾಗಿವೆ. ಬಹುತೇಕ ಎಟಿಎಂಗಳಲ್ಲಿ ನೋ ಕ್ಯಾಷ್ ಫಲಕ ಕಾಣುತ್ತಿದೆ. ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಬ್ಯಾಂಕ್​ಗಳು ರಾಜಕಾರಣಿಗಳ ಜತೆ ಕೈಜೋಡಿಸಿ ಹಣ ಅಭಾವ ಸೃಷ್ಟಿಸುತ್ತಿರುವ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಕಾಟನ್​ಪೇಟೆ, ಚಿಕ್ಕಪೇಟೆ, ಜಯನಗರ, ಬಸವನಗುಡಿ, ಮೆಜೆಸ್ಟಿಕ್, ಚಾಮರಾಜಪೇಟೆ, ವಿಜಯನಗರ, ರಾಜಾಜಿನಗರ, ಮಲ್ಲೇಶ್ವರ, ಹೆಬ್ಬಾಳ ಸೇರಿ ಹಲವು ಪ್ರದೇಶಗಳ ಎಟಿಎಂಗಳಲ್ಲಿ ಹಣವಿಲ್ಲದೇ ಜನ ಪರದಾಡುತ್ತಿರುವ ಸ್ಥಿತಿ ನಿರ್ವಣವಾಗಿರುವುದು ‘ವಿಜಯವಾಣಿ’ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಕಂಡು ಬಂದಿದೆ.

ಈ ಸ್ಥಿತಿ ಈಗಿನದ್ದಲ್ಲ

ಎಟಿಎಂಗಳಲ್ಲಿ ದುಡ್ಡಿಲ್ಲದ ಸ್ಥಿತಿ ಫೆಬ್ರವರಿಯಿಂದಲೇ ತಲೆದೋರಿದೆ. ಬ್ಯಾಂಕ್​ಗಳಲ್ಲಿ ಹಣ ದೊರೆತರೂ ಕೇವಲ 2 ಸಾವಿರ ಮುಖಬೆಲೆಯ ನೋಟುಗಳು ಲಭ್ಯವಾಗುತ್ತಿವೆ. ಚಿಲ್ಲರೆ ಸಮಸ್ಯೆಯೂ ಕಾಡುತ್ತಿದೆ. ಕಳೆದೊಂದು ವಾರದಿಂದ ಸಮಸ್ಯೆ ುತಿ ಮೀರಿದೆ.

ಫಲಕ ಹಾಕಬಾರದಂತೆ

ಎಟಿಎಂಗಳ ಮುಂದೆ ನೋ ಕ್ಯಾಷ್ ಫಲಕ ಅಳವಡಿಸಬೇಡಿ…! ಇದು ಬ್ಯಾಂಕ್​ಗಳು ಹೊರಡಿಸಿರುವ ಅಲಿಖಿತ ಆದೇಶ. ಅನೇಕ ಎಟಿಎಂಗಳಲ್ಲಿ ಹಣವಿಲ್ಲದಿದ್ದರೂ ಏಕೆ ಮಾಹಿತಿಫಲಕ ಹಾಕಿಲ್ಲ ಎಂದು ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಬ್ಯಾಂಕ್​ನವರೇ ಅಳವಡಿಸದಂತೆ ಸೂಚಿಸಿದ್ದಾರೆ ಎಂಬ ಸಿದ್ಧ ಉತ್ತರವನ್ನು ನೀಡುತ್ತಿದ್ದಾರೆ.

ಬ್ಯಾಂಕ್​ಗಳ ಸೇವಾ ನ್ಯೂನತೆಗೆ ಅಗತ್ಯ ಸಾಕ್ಷ್ಯಾಧಾರ ಸಂಗ್ರಹಿಸಿಟ್ಟುಕೊಂಡು ಗ್ರಾಹಕ ರಕ್ಷಣೆ ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದು.

– ಎಸ್.ಎಸ್. ನಾಗಾನಂದ್, ಹಿರಿಯ ವಕೀಲರು

ಆರ್​ಬಿಐಗೆ ದೂರು

* ಬ್ಯಾಂಕಿಂಗ್ ನಿಷ್ಕ್ರಿಯತೆ ಬಗ್ಗೆ ಅಸಮಾಧಾನ

ಎಟಿಎಂಗಳಲ್ಲಿ ಹಣ ಲಭ್ಯವಿಲ್ಲದಂತೆ ಮಾಡುವುದರ ಮೂಲಕ ಗ್ರಾಹಕರ ಹಕ್ಕುಗಳನ್ನು ವಂಚಿಸುತ್ತಿರುವ ಬಗ್ಗೆ ಹಲವು ಬಾರಿ ಭಾರತೀಯ ರಿಸರ್ವ್ ಬ್ಯಾಂಕ್​ಗೆ ತಿಳಿಸಲಾಗಿದ್ದು, ಈಗ ತಲೆದೋರಿರುವ ಸಮಸ್ಯೆ ಸಂಬಂಧವೂ ಆರ್​ಬಿಐಗೆ ದೂರು ನೀಡಲಾಗುತ್ತದೆ ಎಂದು ಗ್ರಾಹಕಶಕ್ತಿ ಸಂಘಟನೆಯ ಸೋಮಶೇಖರ್ ವಿಜಯವಾಣಿಗೆ ತಿಳಿಸಿದ್ದಾರೆ.

ಚುನಾವಣೆ ಸಮಯ ಆಗಿರುವುದರಿಂದ ಹಣಪೂರೈಕೆ ಸ್ಥಗಿತವಾಗಿದೆ. ಈ ಸಮಸ್ಯೆ ಹೆಚ್ಚು ದಿನ ಇರುವುದಿಲ್ಲವಾದರೂ ಇದರಿಂದ ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅವರು ತಿಳಿಸಿದರು.

ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಬಹುದು!

  1. ಬ್ಯಾಂಕ್ ಸೇವೆಯಲ್ಲಿ ಲೋಪವಾದರೆ ಖಾತೆದಾರರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಬಹುದು.
  2. ದೂರು ದಾಖಲಿಸಲು ಬ್ಯಾಂಕ್​ಗಳ ಸೇವಾ ನ್ಯೂನತೆ ಪುಷ್ಟೀಕರಿಸುವ ಸಾಕ್ಷ್ಯಾಧಾರ ಇರಬೇಕು.
  3. ಎಟಿಎಂಗಳ ಮುಂದೆ ತೂಗು ಹಾಕಿರುವ ‘ನೋ ಕ್ಯಾಷ್’ ಬೋರ್ಡ್ ಫೋಟೋ ತೆಗೆದುಕೊಳ್ಳಿ.
  4. ಹಣ ಇಲ್ಲದ ಕಾರಣಕ್ಕೆ ಸಿಗುವ ವಹಿವಾಟು ನಿರಾಕರಣೆ ರಸೀದಿ ಸಂಗ್ರಹಿಸಿಟ್ಟುಕೊಳ್ಳಿ.
  5. ಬ್ಯಾಂಕ್ ಖಾತೆ ಹೊಂದಿರುವ ಶಾಖೆಗೆ ತೆರಳಿ ಎಟಿಎಂಗಳಲ್ಲಿ ಹಣ ಸಿಗದ ಬಗ್ಗೆ ದೂರು ನೀಡಿ. ದೂರಿನ ನಕಲು ಪ್ರತಿಯನ್ನು ಬ್ಯಾಂಕ್ ಅಧಿಕಾರಿಗಳಿಂದ ಪಡೆದು ಇಟ್ಟುಕೊಳ್ಳಿ
  6. ಈ ದೂರಿನ ಆಧಾರದ ಮೇಲೆ ಬ್ಯಾಂಕ್​ಗಳು ಕ್ರಮ ಕೈಗೊಳ್ಳದಿದ್ದರೆ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದು.

Leave a Reply

Your email address will not be published. Required fields are marked *