ಬೆಂಗಳೂರು: ಗ್ಯಾಸ್ ಕಟರ್ನಿಂದ ಎಟಿಎಂ ಯಂತ್ರ ಕತ್ತರಿಸಿ 15 ಲಕ್ಷ ರೂ.ಗಳನ್ನು ಚೀಲಕ್ಕೆ ತುಂಬಿದ ಕಳ್ಳರು ಇನ್ನೇನು ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಖಾಕಿ ಪಡೆಗೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದಾರೆ.
ಎಟಿಎಂನಲ್ಲಿದ್ದ ಸ್ಮಾರ್ಟ್ ಅಲಾಮ್ರ್ ರವಾನಿಸಿದ ಮಾಹಿತಿಯಿಂದಾಗಿ ಕಳ್ಳರು ಕೃತ್ಯವೇಳೆಯೇ ಸಿಕ್ಕಿಬಿದ್ದಿದ್ದಾರೆ. ಪಂಜಾಬ್ ಮೂಲದವರಾದ ಕ್ಯಾಬ್ ಚಾಲಕ ಹರ್ಷ ಆರೂರ್ (36) ಮತ್ತು ಬಟ್ಟೆ ವ್ಯಾಪಾರಿ ಸಮರ್ಜೋತ್ ಸಿಂಗ್ (35) ಬಂಧಿತ ಕಳ್ಳರು. ಇಬ್ಬರೂ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಶೋಕಿ ಜೀವನ ಮಾಡುತ್ತಾ ಇದ್ದ ಹಣ ಖರ್ಚು ಮಾಡಿ ವಿಪರೀತ ಸಾಲ ಮಾಡಿಕೊಂಡಿದ್ದರು. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕಳ್ಳತನಕ್ಕಿಳಿದಿದ್ದರು. ಬಾಡಿಗೆ ಕಾರು ಪಡೆದು ನಗರದ ಎಲ್ಲೆಡೆ ಸುತ್ತಾಡಿ ರಾತ್ರಿ ವೇಳೆ ಹೆಚ್ಚು ಜನ ಸಂಚಾರವಿಲ್ಲದ ಸ್ಥಳಗಳಲ್ಲಿ ಎಟಿಎಂ ಕೇಂದ್ರಗಳನ್ನು ಗುರುತಿಸುತ್ತಿದ್ದರು. ರಾತ್ರಿ ಕಾರಿನಲ್ಲಿ ಬಂದು ಎಟಿಎಂನ ವಿದ್ಯುತ್ ಸಂಪರ್ಕ ಕಡಿತ ಮಾಡಿ ಗ್ಯಾಸ್ ಕಟರ್ ಬಳಸಿ ಹಣ ದೋಚುತ್ತಿದ್ದರು.
ಶನಿವಾರ (ಜ.25) ತಡರಾತ್ರಿ 1.20ರಲ್ಲಿ ಸ್ಕೋಡಾ ಕಾರಿನಲ್ಲಿ ಆರೋಪಿಗಳು ಮೈಸೂರು ರಸ್ತೆ ಬಿಎಚ್ಇಎಲ್ ಮುಂಭಾಗದ ಎಸ್ಬಿಐ ಎಟಿಎಂ ಎದುರು ಕಾರು ನಿಲ್ಲಿಸಿ ಒಳನುಗ್ಗಿ ಶಟರ್ ಹಾಕಿ ಲಾಕ್ ಮಾಡಿಕೊಂಡಿದ್ದರು. ಬೂತ್ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಮತ್ತು ಸೆನ್ಸರ್ ಮುಂಬೈನಲ್ಲಿನ ಸೆಕ್ಯೂರಿಟಿ ಏಜೆನ್ಸಿ ಮಾಸ್ಟರ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿತ್ತು. ಅಲ್ಲಿನ ಸಿಬ್ಬಂದಿ ಬೆಂಗಳೂರಿನ ತಮ್ಮ ಏಜೆನ್ಸಿಗೆ ಮಾಹಿತಿ ರವಾನಿಸಿದ್ದು, ಅವರು ಕೂಡಲೇ ‘ನಮ್ಮ-100’ ಗೆ ಕರೆ ಮಾಡಿದ್ದರು. ಕೆಂಗೇರಿ ಉಪವಿಭಾಗದಲ್ಲಿ ರಾತ್ರಿ ಗಸ್ತು ಜವಾಬ್ದಾರಿ ಹೊಂದಿದ್ದ ಚಂದ್ರಾ ಲೇಔಟ್ ಠಾಣಾಧಿಕಾರಿ ಬ್ರಿ್ರೇಶ್ ಮ್ಯಾಥ್ಯೂಗೆ ಪೊಲೀಸ್ ಕಂಟ್ರೋಲ್ ರೂಂನಿಂದ ಈ ಬಗ್ಗೆ ಮಾಹಿತಿ ಹೋಗಿತ್ತು. ಜಗಜೀವನ್ರಾಮನಗರ ಠಾಣೆ ಇನ್ಸ್ಪೆಕ್ಟರ್ ಕೂಡ ಸಿಬ್ಬಂದಿಗೆ ಅಲರ್ಟ್ ಮಾಡಿ ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆ ತೆರಳುತ್ತಿದ್ದಾಗ ಬಿಎಚ್ಇಎಲ್ ಮುಂಭಾಗದ ಎಟಿಎಂನಲ್ಲಿ ಕಳ್ಳತನ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.
ಮತ್ತೊಂದೆಡೆ ಬ್ಯಾಟರಾಯನಪುರ ಗಸ್ತು ಹೊಯ್ಸಳ ಸಿಬ್ಬಂದಿ ಸಹ ಎಸ್ಬಿಎಂ ಎಟಿಎಂ ಬಳಿಗೆ ಬಂದಾಗಶಟರ್ ಲಾಕ್ ಆಗಿದ್ದು, ಸುಟ್ಟ ವಾಸನೆ ಬರುತ್ತಿತ್ತು. ಒಳಗೆ ಕಳ್ಳರು ಇರುವ ಶಂಕೆ ಮೇಲೆ ಶಟರ್ ತೆರೆೆಯಲು ಗಸ್ತು ಸಿಬ್ಬಂದಿ ಮುಂದಾದಾಗ ಕಳ್ಳರು ರಾಡ್ನಿಂದ ಪೇದೆಗಳ ಕಾಲಿಗೆ ಹಲ್ಲೆ ನಡೆಸಿದ್ದಾರೆ. ಆಗ ಎಚ್ಚರಿಕೆ ವಹಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೂಟ್ಯೂಬ್ನಲ್ಲಿ ಕಳ್ಳತನ ಕಲಿತ!
ಚಿಕ್ಕ ವಯಸ್ಸಿಗೆ ಓದು ಮೊಟಕುಗೊಳಿಸಿದ್ದ ಆರೋಪಿ ಹರ್ಷ ಅರೂರ್, ಸ್ಥಳೀಯವಾಗಿ ಕುಸ್ತಿಪಟುವಾಗಿ ಖ್ಯಾತಿ ಗಳಿಸಿದ್ದ. ಬಳಿಕ ಸಮರ್ಜೋತ್ ಜತೆ ಬೆಂಗಳೂರಿಗೆ ಬಂದು ದರೋಡೆಗೆ ಪ್ಲಾ್ಯನ್ ಮಾಡಿದ್ದ. ಆರೋಪಿಗಳು ಎಟಿಎಂ ಲೂಟಿ ಮಾಡುವುದು ಹೇಗೆಂದು ಯೂಟ್ಯೂಬ್ನಲ್ಲಿ ಕಲಿತು ಕೃತ್ಯ ನಡೆಸುತ್ತಿದ್ದರು. ಬಹುತೇಕ ವಿಡಿಯೋಗಳಲ್ಲಿ ಗ್ಯಾಸ್ ಕಟರ್ ಬಳಸಿದ್ದ ಕಾರಣ ಈ ಆರೋಪಿಗಳು ಗ್ಯಾಸ್ ಕಟರ್ ಉಪಯೋಗಿಸುತ್ತಿದ್ದರು. ಜತೆಗೆ ಮುಖಕ್ಕೆ ಮಾಸ್ಕ್, ಕೈಚೀಲ ಧರಿಸುತ್ತಿದ್ದರು. ಎಟಿಎಂ ವಿದ್ಯುತ್ ಸಂಪರ್ಕ ಕಡಿತ ಮಾಡಿ ಸಿಸಿ ಕ್ಯಾಮರಾಗೆ ಪೆಪ್ಪರ್ ಸ್ಪ್ರೇ, ಡೋರ್ ಲಾಕ್ಗ್ ಚುಯಿಂಗ್ ಗಮ್ ಅಂಟಿಸಿ ಸೆಕ್ಯೂಟಿರಿ ಏಜೆನ್ಸಿಗೆ ಮಾಹಿತಿ ಹೋಗದಂತೆ ಮಾಡುತ್ತಿದ್ದರು.
ಪೊಲೀಸರ ಮೇಲೆ ಹಲ್ಲೆ ಯತ್ನ
ಎಟಿಎಂನಲ್ಲಿ ಕಳ್ಳರು ಇರುವ ಬಗ್ಗೆ ಖಚಿತವಾದ ಮೇಲೆ ಹೊಯ್ಸಳ ಸಿಬ್ಬಂದಿ ಶಟರ್ ತೆಗೆಯುತ್ತಿದ್ದಾಗ ಒಳಗಿಂದ ರಾಡ್ನಿಂದ ಹಲ್ಲೆ ನಡೆಸಿದಾಗ ಮುಖ್ಯ ಪೇದೆ ಬಸವರಾಜ್ ಕಾಲಿಗೆ ಗಾಯವಾಯಿತು. ಶಟರ್ ತೆಗೆದು ವಶಕ್ಕೆ ಪಡೆಯುವಾಗ ಮತ್ತೊಬ್ಬ ಆರೋಪಿ ರಾಡ್ನಿಂದ ಮುಖ್ಯಪೇದೆ ಪ್ರಕಾಶ್ ತಲೆಗೆ ಹೊಡೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಕೊನೆಗೆ ಪೊಲೀಸರು ಸುತ್ತುವರಿದು ಬಂಧಿಸಿದ್ದಾರೆ.
2 ಸಫಲ, ಎರಡು ಬಾರಿ ವಿಫಲ
ಶೋಕಿ ಜೀವನಕ್ಕೆ ಹಣವನ್ನು ಸುಲಭವಾಗಿ ಸಂಪಾದನೆ ಮಾಡುವ ಉದ್ದೇಶದಿಂದ ಎಟಿಎಂ ಕಳ್ಳತನಕ್ಕೆ ಆರೋಪಿಗಳು ಕೈ ಹಾಕಿದ್ದರು. ಕೆಲವೇ ತಿಂಗಳಲ್ಲಿ ಜೆ.ಪಿ. ನಗರ ಮತ್ತು ಮೈಕೋ ಲೇಔಟ್ನಲ್ಲಿ ಎಟಿಎಂ ಹಣ ದೋಚಲು ಯತ್ನಿಸಿ ವಿಫಲರಾಗಿದ್ದರು. ಇದರ ಬೆನ್ನಲ್ಲೆ ಪರಪ್ಪನ ಅಗ್ರಹಾರದಲ್ಲಿ ಕೆನರಾ ಬ್ಯಾಂಕ್ ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್ನಿಂದ ಕತ್ತರಿಸಿ 23 ಲಕ್ಷ ರೂ. ದೋಚಿದ್ದರು. ಬ್ಯಾಟರಾಯನಪುರ ಎಸ್ಬಿಐ ಎಟಿಎಂ ಕತ್ತರಿಸಿ 15 ಲಕ್ಷ ರೂ. ಚೀಲಕ್ಕೆ ತುಂಬಿದ್ದರು. ಇನ್ನೇನು ಹೊರ ಬರಬೇಕೆನ್ನುವಷ್ಟರಲ್ಲಿ ಸಿಕ್ಕಿಬಿದ್ದಿದ್ದಾರೆ.
ಅನುಮಾನ ಹುಟ್ಟಿದ್ದು ಎಲ್ಲಿ
ಮೈಸೂರು ರಸ್ತೆ ಬಿಎಚ್ಇಎಲ್ ಮುಂಭಾಗ ಎಸ್ಬಿಐ ಎಟಿಎಂನ ಸಿಸಿ ಕ್ಯಾಮರಾಕ್ಕೆ ಆರೋಪಿಗಳು ಚ್ಯೂಯಿಂಗ್ ಗಮ್ ಅಂಟಿಸಿದ್ದರು. ಆಗ ಕ್ಯಾಮರಾ ದೃಶ್ಯ ಅಸ್ಪಷ್ಟವಾದ ಕೂಡಲೇ ಮುಂಬೈನಲ್ಲಿ ಪಹರೆಯಲ್ಲಿದ್ದ ಸೆಕ್ಯೂರಿಟಿ ಸಿಬ್ಬಂದಿಗೆ ಅನುಮಾನ ಬಂದು ಬೆಂಗಳೂರಿನ ಸಂಸ್ಥೆಗೆ ಅಲರ್ಟ್ ಮಾಡಿದ್ದರು.