ಇಲ್ಲ ಎಟಿಎಂ; ಗ್ರಾಹಕ ಗರಂ

ಹುಬ್ಬಳ್ಳಿ: ಹು-ಧಾ ಅವಳಿ ನಗರದಲ್ಲಿ ಕೆನರಾ ಬ್ಯಾಂಕ್​ನ ಎಟಿಎಂಗಳು ಬಂದ್ ಆಗಿದ್ದು, ಗ್ರಾಹಕರು ಹಣ ಪಡೆಯಲು ಅತ್ತಿಂದಿತ್ತ ಅಲೆದಾಡುವ ಪರಿಸ್ಥಿತಿ ನಿರ್ವಣವಾಗಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವಿವಿಧ ಬ್ಯಾಂಕ್​ಗಳ ಸುಮಾರು 380 ಎಟಿಎಂಗಳಿವೆ. ಇದರಲ್ಲಿ ಬಹಳಷ್ಟು ಬ್ಯಾಂಕ್​ಗಳ ಎಟಿಎಂ ಕಾರ್ಯನಿರ್ವಹಿಸುತ್ತಿದ್ದು, ಕೆನರಾ ಬ್ಯಾಂಕ್​ನ ಸುಮಾರು 25 ಎಟಿಎಂಗಳು ಬಂದ್ ಆಗಿವೆ. 15 ಎಟಿಎಂಗಳು ಬಳಕೆಗೆ ಮಾತ್ರ ಇರುವುದರಿಂದ ಗ್ರಾಹಕರು ಹಣ ವಿತ್​ಡ್ರಾ ಮಾಡಿಕೊಳ್ಳಲು ಪರದಾಡುವಂತಾಗಿದೆ.

ಅವಳಿ ನಗರದಲ್ಲಿ ಎಟಿಎಂ ಕಳ್ಳತನ, ದರೋಡೆ ಪ್ರಕರಣಗಳು ಇತ್ತೀಚೆಗೆ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಹು-ಧಾ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು. ಭದ್ರತಾ ಸಿಬ್ಬಂದಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಕೆಲ ಬ್ಯಾಂಕ್​ಗಳು ತಮ್ಮ ಎಟಿಎಂಗಳ ಸೇವೆಯನ್ನು ಸ್ಥಗಿತಗೊಳಿಸಿವೆ. ತಮ್ಮಲ್ಲಿರುವ ಭದ್ರತಾ ಸಿಬ್ಬಂದಿಯನ್ನು ಬಳಸಿಕೊಂಡು ಎಟಿಎಂಗಳ ಬಾಗಿಲು ತೆರೆದಿವೆ. ಅದರಲ್ಲೂ ಕೆನರಾ ಬ್ಯಾಂಕ್​ನಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ.

ಬ್ಯಾಂಕ್ ಅಧಿಕಾರಿಗಳು ಏಜೆನ್ಸಿ ಮೂಲಕವೇ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಬೇಕಿದೆ. ಇದನ್ನು ಗಮನಕ್ಕೆ ತಂದರೂ ಹಿರಿಯ ಅಧಿಕಾರಿಗಳು ಒಪ್ಪುತ್ತಿಲ್ಲ. ಒಂದು ಎಟಿಎಂ ನಿರ್ವಹಣೆಗೆ ಏನಿಲ್ಲವೆಂದರೂ ತಿಂಗಳಿಗೆ 36 ಸಾವಿರ ರೂ. ವೆಚ್ಚ ಭರಿಸಬೇಕಿದೆ. ಇದರ ಬದಲು ಇರುವ ಎಟಿಎಂಗಳನ್ನೇ ಗ್ರಾಹಕರಿಗೆ ಲಭ್ಯವಾಗುವಂತೆ ಇಡಿ ಎಂದು ಹೇಳುತ್ತಿದ್ದಾರಂತೆ. ಹಾಗಾಗಿ ಬ್ಯಾಂಕ್​ನ ಕೆಲ ಅಧಿಕಾರಿಗಳು ಇತ್ತ ಕಡೆ ದೃಷ್ಟಿಯೇ ಹರಿಸಿಲ್ಲ.

ಗ್ರಾಹಕರು ಒಂದು ಎಟಿಎಂ ತಲುಪಬೇಕೆಂದರೆ ಬಹಳಷ್ಟು ಶ್ರಮವಹಿಸಬೇಕು. ಅಲ್ಲದೆ, ಸಮಯವೂ ವ್ಯರ್ಥವಾಗುತ್ತಿದೆ. ಎಟಿಎಂನಲ್ಲಿ ಹಣವಿಲ್ಲವೆಂದರೆ ಮತ್ತೆ ಬೇರೆ ಎಟಿಎಂಗೆ ತಲುಪಬೇಕು. ಇಲ್ಲವೇ ಬ್ಯಾಂಕ್​ಗೆ ತೆರಳಿ ವೋಚರ್ ಬರೆದುಕೊಟ್ಟು ಹಣ ಪಡೆಯಬೇಕಿದೆ. ಆನ್​ಲೈನ್ ಬ್ಯಾಂಕಿಂಗ್ ವ್ಯವಸ್ಥೆಯ ಮೊರೆ ಹೋದರೂ ವಿತ್​ಡ್ರಾ ವ್ಯವಸ್ಥೆ ಇಲ್ಲ. ತಮ್ಮ ಹಣ ತಾವು ಪಡೆಯಲೂ ಗ್ರಾಹಕರು ಇಷ್ಟೊಂದು ಕಷ್ಟಪಡಬೇಕಿದೆ.

ಲೀಡ್ ಬ್ಯಾಂಕ್ ಮ್ಯಾನೇಜರ್ ಈಶ್ವರ ಮಾತನಾಡಿ, ಹು-ಧಾ ಅವಳಿ ನಗರದಲ್ಲಿ ವಿವಿಧ ಬ್ಯಾಂಕ್​ಗಳ ಸುಮಾರು 380 ಎಟಿಎಂಗಳಿವೆ. ಇದರಲ್ಲಿ ಕೆನರಾ ಬ್ಯಾಂಕ್​ನ 15 ಎಟಿಎಂಗಳು ತೆರೆದಿವೆ. ಭದ್ರತಾ ಸಿಬ್ಬಂದಿ ನೇಮಕವಾದ ವಾರದಲ್ಲಿ ಇನ್ನೂ 17 ಎಟಿಎಂಗಳು ಓಪನ್ ಆಗಲಿವೆ. ಹಗಲು ವೇಳೆ ಮಾತ್ರ ಎಟಿಎಂಗಳು ತೆರೆದಿತ್ತಿರುತ್ತವೆ ಎಂದು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *