ಮಾಲೀಕರಿದ್ದಾಗಲೇ ಮನೆಗೆ ನುಗ್ಗಿದ ಕಳ್ಳ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ!

ಬೆಂಗಳೂರು: ಮಾಲೀಕರಿದ್ದಾಗಲೇ ಮನೆಗೆ ನುಗ್ಗಿದ ಕಳ್ಳ ಎಟಿಎಂ ಕಾರ್ಡ್ ಕದ್ದು ಪರಾರಿಯಾಗಿ, ಬ್ಯಾಂಕ್ ಖಾತೆಯಿಂದ 30 ಸಾವಿರ ರೂ. ಡ್ರಾ ಮಾಡಿಕೊಂಡಿದ್ದಾನೆ.

ಸದಾಶಿವನಗರದ ನಿವಾಸಿ ರಾಧಾ ಯಾದವ್ (45) ಹಣ ಕಳೆದುಕೊಂಡವರು. ಉದ್ಯಮಿ ರಾಧಾ, ಶುಕ್ರವಾರ ರಾತ್ರಿ ಮನೆಯ ಮುಂಬಾಗಿಲಿನ ಚಿಲಕ ಹಾಕಲು ಮರೆತು ನಿದ್ದೆಗೆ ಜಾರಿದ್ದರು. ಮನೆಯ ಮುಂಬಾಗಿಲು ತೆರೆದಿರುವುದನ್ನು ಕಂಡ ಕಳ್ಳ ತಡರಾತ್ರಿ 2 ಗಂಟೆಗೆ ಮನೆಗೆ ನುಗ್ಗಿ ಹಾಲ್​ನಲ್ಲಿ ಇಟ್ಟಿದ್ದ ಎಟಿಎಂ ಕಾರ್ಡ್ ಕದ್ದು ಪರಾರಿಯಾಗಿದ್ದ. ಎಟಿಎಂ ಕಾರ್ಡ್​ನ ಹಿಂಭಾಗದಲ್ಲಿಯೇ ರಹಸ್ಯ ಸಂಖ್ಯೆ ಬರೆದಿರುವುದನ್ನು ಗಮನಿಸಿದ ಕಳ್ಳ, ಹತ್ತಿರದ ಎಟಿಎಂನಲ್ಲಿ ಮೂರು ಬಾರಿ ತಲಾ 10 ಸಾವಿರ ರೂ. ಡ್ರಾ ಮಾಡಿದ್ದಾನೆ.

ಹಣ ಡ್ರಾ ಮಾಡಿದ ಕೂಡಲೇ ರಾಧಾ ಯಾದವ್ ಮೊಬೈಲ್​ಗೆ ಸಂದೇಶ ಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ರಾಧಾ ಮನೆಯಲ್ಲಿ ಎಟಿಎಂ ಕಾರ್ಡ್ ಹುಡುಕಾಡಿದಾಗ ಇರಲಿಲ್ಲ. ಮನೆ ಮುಂಬಾಗಿಲಿನ ಚಿಲಕ ಹಾಕಲು ಮರೆತ ಹಿನ್ನೆಲೆಯಲ್ಲಿ ಕಳ್ಳ ಮನೆಗೆ ಬಂದು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯ ಹೊರ ಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಿರದ ಹಿನ್ನೆಲೆಯಲ್ಲಿ ಕಳ್ಳನ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.