More

    ‘ಕೈ’ಗೇ ಬಿಟ್ಟಿದ್ದರೆ ಅತಿಕ್ ಇಲ್ಲೂ ಇರುತ್ತಿದ್ದ!

    'ಕೈ'ಗೇ ಬಿಟ್ಟಿದ್ದರೆ ಅತಿಕ್ ಇಲ್ಲೂ ಇರುತ್ತಿದ್ದ!ಉತ್ತರ ಪ್ರದೇಶದಲ್ಲಿ ಅಸದ್ ಅಹ್ಮದ್ ಮತ್ತು ಗುಲಾಮ್ ಮೊಹಮ್ಮದ್ ಇವರಿಬ್ಬರ ಎನ್​ಕೌಂಟರ್ ಆಗುತ್ತಿದ್ದಂತೆ ದೇಶದೆಲ್ಲೆಡೆ ಸಂಚಲನ ಮೂಡಿತ್ತು. ಅದರ ಕುರಿತಂತೆ ಲೇಖನ ಬರೆಯಬೇಕು ಎನ್ನುವಷ್ಟರಲ್ಲಿ ಅಸದ್​ನ ಅಪ್ಪ ಅತೀಕ್ ಅಹ್ಮದ್​ನ ಹೆಣ ಬಿದ್ದಿದೆ. ಮೇಲ್ನೋಟಕ್ಕೆ ಇದು ಬಾಡಿಗೆ ಹಂತಕರು ಮಾಡಿರುವ ಹತ್ಯೆ ಎಂಬುದು ಗೋಚರವಾಗುತ್ತದಾದರೂ ಅನೇಕ ಮಾಧ್ಯಮಮಂದಿ ಮತ್ತು ಭಯೋತ್ಪಾದಕರ ಕುರಿತಂತೆ ಅನುಕಂಪ ಹೊಂದಿರುವ ಮಂದಿ ಯೋಗಿ ಆದಿತ್ಯನಾಥರ ಕೈವಾಡವೆಂದು ಶಂಕಿಸುತ್ತಿದ್ದಾರೆ. ಆದರೆ ಒಂದಂತೂ ನಿಜ. ಅತಿಕ್​ನ ಸಾವು ಬರಲಿರುವ ಘೊರ ವಿಪತ್ತಿನ ಸಣ್ಣ ಮುನ್ಸೂಚನೆ ಎಂದೆನಿಸುತ್ತದೆ. ಅದು ಹೇಗೆಂದು ವಿವರಿಸಲು ಯತ್ನಿಸುವೆ.

    ಹಾಗೆ ನೋಡಿದರೆ ಅತಿಕ್ ಸಂತನೇನಲ್ಲ. ಪಾಲ್ಘರ್​ನಲ್ಲಿ ಸಾಧುಗಳ ಹತ್ಯೆಯಾದಾಗ ಮಿಸುಕಾಡದ ಮಂದಿಯೆಲ್ಲ ಅತಿಕ್​ನ ಹತ್ಯೆ ಕುರಿತಂತೆ ವ್ಯಕ್ತಪಡಿಸುತ್ತಿರುವ ಅನುಕಂಪದ ಪ್ರಮಾಣ ನೋಡಿದರೆ, ಅವರೆಲ್ಲರ ಪಾಲಿಗೆ ಆತ ಮಹಾತ್ಮಾ ಗಾಂಧಿಯೇನೊ ಎನಿಸುತ್ತಿದೆ. 43 ವರ್ಷಗಳಲ್ಲಿ ಅತಿಕ್​ನ ಮೇಲೆ ನೂರಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಇದರಲ್ಲಿ ಅಪಹರಣ, ಮಾನಭಂಗ, ದರೋಡೆಯಂಥವಲ್ಲದೇ ಕೊಲೆ ಪ್ರಕರಣಗಳೂ ಇವೆ. ಈ 43 ವರ್ಷಗಳಲ್ಲಿ ಅವನನ್ನು ಒಂದೇ ಒಂದು ಕೇಸಿನಲ್ಲಿ ಜೈಲಿಗೆ ತಳ್ಳುವುದು ಸಾಧ್ಯವಾಗಿರಲಿಲ್ಲ. ಆತನ ಕೇಸನ್ನು ಕೈಗೆತ್ತಿಕೊಳ್ಳುವುದಿಲ್ಲವೆಂದು ಅನೇಕ ಬಾರಿ ನ್ಯಾಯಾಧೀಶರುಗಳೇ ಕೈಚೆಲ್ಲಿ ಎದ್ದುಹೋದ ಉದಾಹರಣೆಯಿದೆ. ಯಾವುದಾದರೂ ನ್ಯಾಯಾಧೀಶರು ಧೈರ್ಯ ಮಾಡಿ ವಿಚಾರಣೆಗೆ ನಿಂತರೆ ಅವನಿಗೆ ಜಾಮೀನು ಕೊಟ್ಟು ಮನೆಗೆ ಕಳಿಸುವುದಲ್ಲದೇ ಬೇರೇನೂ ಮಾಡುತ್ತಿರಲಿಲ್ಲ. ನಿಮಗೆ ಅಚ್ಚರಿಯಾಗಬಹುದು. ಈ ಕೊಲೆಗಡುಕ ಐದು ಬಾರಿ ಶಾಸಕನಾಗಿದ್ದ! ಮೂರು ಬಾರಿ ಪಕ್ಷೇತರನಾಗಿ, ಒಮ್ಮೆ ಸಮಾಜವಾದಿ ಪಾರ್ಟಿಯಿಂದ, ಮತ್ತೊಮ್ಮೆ ಅಪ್ನಾದಲ್ ಪಾರ್ಟಿಯಿಂದ ಆಯ್ಕೆಯಾಗಿದ್ದ. 2004ರಲ್ಲಿ ಸಮಾಜವಾದಿ ಪಕ್ಷದಿಂದಲೇ ಸಂಸತ್ ಸದಸ್ಯನಾಗಿದ್ದ ಈತ ಪಾರ್ಟಿ ಹೊರಹಾಕಿದ ಮೇಲೆ 2009ರಲ್ಲಿ ಅಪ್ನಾದಲ್​ನಿಂದ ಆಯ್ಕೆಯಾಗಿದ್ದ. 2012ರಲ್ಲಿ ಜೈಲಿನಿಂದಲೇ ಸ್ಪರ್ಧಿಸಿ 2005ರಲ್ಲಿ ತಾನೇ ಕೊಂದಿದ್ದ ರಾಜು ಪಾಲ್​ನ ಪತ್ನಿಯ ಎದುರು ಸೋತಿದ್ದ. 2014ರಲ್ಲಿ ಸಮಾಜವಾದಿ ಪಕ್ಷ ಇಂತಹ ಕೊಲೆಗಡುಕ ಕ್ರಿಮಿನಲ್​ನನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಸಂಸತ್ ಸದಸ್ಯನನ್ನಾಗಿಸುವ ಪ್ರಯತ್ನ ಮಾಡಿತ್ತು. ಮೋದಿ ಸುನಾಮಿಯಲ್ಲಿ ಅನೇಕ ಅತಿಕ್​ಗಳು ಕೊಚ್ಚಿಹೋದರು.

    ಈಗ ಅತಿಕ್ ಸುದ್ದಿಯಾಗುತ್ತಿರುವುದೇಕೆಂದರೆ 2005ರಲ್ಲಿ ತನ್ನ ತಮ್ಮನ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದ ರಾಜು ಪಾಲ್​ನನ್ನು ಈತ ಶೂಟೌಟ್​ನಲ್ಲಿ ಕೊಂದಿದ್ದ. ಪ್ರತ್ಯಕ್ಷವಾಗಿ ಇದನ್ನು ನೋಡಿದ್ದ ಉಮೇಶ್ ಪಾಲ್ ಪೊಲೀಸರಿಗೆ ಎಲ್ಲ ವಿವರಗಳನ್ನೂ ಕೊಟ್ಟಮೇಲೆ, ಅಂದಿನ ಡಿಜಿಪಿ ಓ.ಪಿ.ಸಿಂಗ್ ಇವನ ಠಾಣ್ಯವನ್ನು ಹುಡುಕಿ ತನ್ನ ಪಡೆಯೊಂದಿಗೆ ಸುತ್ತುವರೆದು ನಿಂತಿದ್ದರು. ಕೆಲವೇ ನಿಮಿಷಗಳಲ್ಲಿ ಪೊಲೀಸರ ಸುತ್ತಲೂ ಅತಿಕ್​ನ ಪಡೆ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ತೊಡೆ ತಟ್ಟಿಕೊಂಡು ನಿಂತುಬಿಟ್ಟಿತು. ಓ.ಪಿ.ಸಿಂಗ್ ನೇರವಾಗಿ ಅತಿಕ್​ನನ್ನೇ ಹಿಡಿದು, ಪೊಲೀಸರ ಮೈಗೆ ಕೆರೆದ ಗಾಯವಾದರೂ ಇವನನ್ನು ಉಡಾಯಿಸಿಬಿಡುತ್ತೇನೆ ಎಂದಿದ್ದರು. ಎಲ್ಲವೂ ಥೇಟು ಸಿನಿಮಾದಂತೆಯೇ. ಆತನನ್ನು ಬಂಧಿಸಿ ಎಳೆದು ತರಬೇಕೆನ್ನುವಷ್ಟರಲ್ಲಿ ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವ ಮಂದಿ ಒತ್ತಡ ತಂದು ಅತಿಕ್​ನನ್ನು ಬಿಡಿಸಿಕೊಂಡರು! ಇತ್ತೀಚೆಗೆ ಓ.ಪಿ.ಸಿಂಗ್ ಇವೆಲ್ಲವನ್ನೂ ವಿವರವಾಗಿ ಹೇಳಿದ್ದಾರೆ. ತನ್ನ ವಿರುದ್ಧ ಇರಬಹುದಾಗಿದ್ದ ಸಾಕ್ಷಿ ಉಮೇಶ್ ಪಾಲ್​ನನ್ನು ಮರುಕ್ಷಣವೇ ಅಪಹರಿಸಿ ತಂದ ಅತಿಕ್ ಹೊಡೆದು-ಬಡಿದು ಪೊಲೀಸರಿಗೆ ಆತ ಕೊಟ್ಟ ಹೇಳಿಕೆಗೆ ವಿರುದ್ಧವಾದ ಹೇಳಿಕೆಯನ್ನು ಬರೆಸಿಕೊಂಡ. ಉಮೇಶ್ ಪಾಲ್ ಕೂಡ ಕಡಿಮೆ ಆಸಾಮಿಯಲ್ಲ. ಅವರಿಂದ ಬಿಡುಗಡೆಯಾಗಿ ಬಂದವನೇ ನೇರ ಪೊಲೀಸರ ಬಳಿಸಾರಿ ನಡೆದುದೆಲ್ಲವನ್ನೂ ಹೇಳಿ ಅತಿಕ್​ನ ಕೊರಳಿಗೆ ಉರುಳನ್ನು ಗಟ್ಟಿಯಾಗಿಯೇ ಬಿಗಿದ.

    ಉಮೇಶ್ ಪಾಲ್​ನ ಹೇಳಿಕೆಯಿಂದಾಗಿ ಕಳೆದ ಫೆಬ್ರವರಿ ತಿಂಗಳಲ್ಲಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗಿರುವ ಅತಿಕ್​ನ ಇಂದಿನ ಪರಿಸ್ಥಿತಿಗೆ ಪ್ರತೀಕಾರವಾಗಿ ಅವನ ಮಗ ಅಸದ್ ಉಮೇಶ್​ನನ್ನು ಮುಗಿಸುವ ಸಂಚು ರೂಪಿಸಿದ. ಪೊಲೀಸರು ಆನಂತರ ಇವರೆಲ್ಲರನ್ನೂ ಬಂಧಿಸಿದಾಗ ಇವರ ಯೋಜನೆಯ ಒಟ್ಟಾರೆ ರೂಪುರೇಷೆಗಳು ಹೊರಬಂದಿದೆ. ಅತಿಕ್​ನ ಹೆಂಡತಿ 12 ಐಫೋನ್​ಗಳನ್ನು ಯೋಜನೆಯಲ್ಲಿ ಭಾಗಿಯಾದವರಿಗೆಲ್ಲ ಕೊಡಿಸಿದ್ದಳು. ಪ್ರತಿಯೊಬ್ಬರೂ ತಮಗೆ ಪ್ರತ್ಯೇಕ ಗುಪ್ತನಾಮ ಕೊಟ್ಟುಕೊಂಡಿದ್ದರು. ನಟ ಸಲ್ಮಾನ್ ಖಾನರನ್ನು ಆರಾಧಿಸುತ್ತಿದ್ದ ಅಸದ್ ತನ್ನ ಹೆಸರನ್ನು ‘ರಾಧೆ’ ಎಂದಿಟ್ಟುಕೊಂಡಿದ್ದನಂತೆ. ಸಲ್ಮಾನನ ಇತ್ತೀಚಿನ ಸಿನಿಮಾದ ಹೆಸರು ಅದು. ಇವರೆಲ್ಲರೂ ಐ ಮೆಸೇಜ್​ಗಳ ಮೂಲಕ ಮಾತ್ರ ಚರ್ಚೆ ನಡೆಸುತ್ತಿದ್ದರು. ಗುಂಡು ಹೊಡೆಯುವವ, ಬಾಂಬ್ ಎಸೆಯುವವ, ಚಲನ-ವಲನಗಳ ಮಾಹಿತಿ ನೀಡುವವ, ಹೀಗೆ ಎಲ್ಲರಿಗೂ ಪ್ರತ್ಯೇಕವಾದ ಜವಾಬ್ದಾರಿ ನೀಡಲಾಗಿತ್ತು. ಉಮೇಶ್ ಪಾಲ್ ಮೇಲೆ ದಾಳಿಮಾಡುವಾಗ ಇವರು ಎಲ್ಲ ಎಚ್ಚರಿಕೆಯನ್ನೂ ಇಟ್ಟುಕೊಂಡಿದ್ದರಾದರೂ ಸಿಕ್ಕ ಸಿಸಿಟಿವಿ ಕಡತಗಳ ಆಧಾರದ ಮೇಲೆ ಪೊಲೀಸರು ಬಲೆ ಬೀಸಿದರು. ಸದನದಲ್ಲಿ ಈ ಕುರಿತಂತೆ ಕೋಲಾಹಲವೆದ್ದಿತು. ಮಾಫಿಯಾ ಡಾನ್​ಗಳನ್ನು ಸಾಕಿ ಸಲಹಿದ ಸಮಾಜವಾದಿ ಪಕ್ಷಕ್ಕೆ ಸರಿಯಾಗಿಯೇ ತಪರಾಕಿ ಕೊಟ್ಟ ಸಿಎಂ ಯೋಗಿ, ‘ಪ್ರತಿಯೊಬ್ಬ ಗೂಂಡಾನನ್ನು ಹುಡುಹುಡುಕಿ ಕೊಲ್ಲಲಾಗುವುದು’ ಎಂದಿದ್ದರು. ಆದಷ್ಟು ಬೇಗ ಈ ಸಾವಿಗೆ ಕಾರಣರಾದ ಗೂಂಡಾಗಳನ್ನು ಹಿಡಿಯುವುದು, ಅಗತ್ಯವಿದ್ದರೆ ಮುಗಿಸಿಬಿಡುವುದು ಅತ್ಯವಶ್ಯಕವಾಗಿತ್ತು. ಪೊಲೀಸರು ಚುರುಕಾದರು. ಭಿನ್ನ-ಭಿನ್ನ ತಂಡಗಳನ್ನು ರಚಿಸಿಕೊಂಡು 40 ದಿನಗಳ ಕಾಲ ಈ ಗೂಂಡಾಗಳನ್ನು ಅಟ್ಟಿಸಿಕೊಂಡು ಹೋದರು. ಇತರರನ್ನು ಕೊಲ್ಲುವಾಗ ಮೆರೆದಾಡುತ್ತಿದ್ದ ಅಸದ್ ಮತ್ತವನ ಸಹಚರರು ಪೊಲೀಸರು ಅಟ್ಟಿಸಿಕೊಂಡು ಬಂದಾಗ ನೀರಲ್ಲದ್ದಿದ ಬೆಕ್ಕಿನಂತಾಗಿಬಿಟ್ಟಿದ್ದರು. ಈ ತಂಡದ ಸದಸ್ಯರನೇಕರ ಮನೆಗಳನ್ನು ಬುಲ್ಡೋಜ್ ಮಾಡಿದ ಬಾಬಾ ಗೂಂಡಾಗಳ ಎದೆಯಲ್ಲಿ ಭಯ ಅವತರಿಸುವಂತೆ ಮಾಡಿಬಿಟ್ಟರು. ಈ ವೇಳೆಗಾಗಲೇ ಅತಿಕ್​ನ ಅನೇಕ ಸೋದರ ಸಂಬಂಧಿಗಳು ಜೈಲು ಸೇರಿಯಾಗಿತ್ತು. ಅತಿಕ್​ನ ಹೆಂಡತಿ ಮತ್ತು ತಮ್ಮನ ಹೆಂಡತಿಯರು ಉಟ್ಟಬಟ್ಟೆಯಲ್ಲಿ ಊರುಬಿಟ್ಟು ಓಡಿ ಹೋಗಿದ್ದರು. ಒಂದು ಕಾಲದಲ್ಲಿ ಉತ್ತರಪ್ರದೇಶವೇ ತಮ್ಮದೆಂದು ಮೆರೆದಾಡುತ್ತಿದ್ದವರೆಲ್ಲ ಈಗ ಬದುಕಿದೆಯಾ ಬಡಜೀವವೇ ಎಂಬಂತಾಗಿದ್ದರು. ಇಂತಹ ಒಂದು ಹೊತ್ತಲ್ಲಿಯೇ ಪೊಲೀಸರ ಕೈಗೆ ಸಿಕ್ಕುಬಿದ್ದ ಅಸದ್ ಎರ್ರಾಬಿರ್ರಿ ಗುಂಡು ಹಾರಿಸತೊಡಗಿದ. ಪೊಲೀಸರು ಮುಲಾಜು ನೋಡದೇ ಅಸದ್ ಮತ್ತು ಗುಲಾಮ್ ಇಬ್ಬರನ್ನೂ ನಡುರಸ್ತೆಯಲ್ಲಿಯೇ ಹೆಣವಾಗಿಸಿಬಿಟ್ಟರು! ಇತ್ತ ಜೈಲಿನಲ್ಲಿದ್ದ ಅತಿಕ್, ‘ಈ ಕೃತ್ಯದಲ್ಲಿ ಭಾಗಿಯಾದ ಪೊಲೀಸರನ್ನು ನಾನು ಬಿಡುವುದಿಲ್ಲ. ಒಮ್ಮೆ ಜೈಲಿನಿಂದ ಹೊರಬಂದಮೇಲೆ ಗದ್ದಿಜಾತಿಯ ತಾಕತ್ತನ್ನು ತೋರಿಸುತ್ತೇನೆ’ ಎಂದಿದ್ದ. ಗಮನಿಸಬೇಕಾದ ಸಂಗತಿ ಇದು. ‘ವೈರ್’ನ ಸಂಪಾದಕಿ ಅರ್ಫಾ ಖನ್ನುಂ ಅವರು ಅತಿಕ್ ಅಹ್ಮದ್​ನನ್ನು ನಡೆಸಿಕೊಳ್ಳುತ್ತಿರುವ ರೀತಿ ಮುಸಲ್ಮಾನರಲ್ಲಿಯೇ ಹಿಂದುಳಿದ ಜಾತಿಯಾದ ಗದ್ದಿ ಜನಾಂಗದವರಿಗೆ ಮಾಡುತ್ತಿರುವ ಅವಮಾನ ಎಂದಿದ್ದರು. ನಾವೆಲ್ಲ ಒಂದೇ ಜಾತಿ, ಒಂದೇ ಕುಲ ಎನ್ನುವ ಮುಸಲ್ಮಾನರು ಇಂತಹ ಸಂದರ್ಭಗಳಲ್ಲಿ ಜಾತಿಯ ಕಾರ್ಡ್ ಬಳಸಲು ಹಿಂದೆ-ಮುಂದೆ ನೋಡುವುದಿಲ್ಲ. ಪತ್ರಕರ್ತ ರಾಜ್​ದೀಪ್ ಸರ್​ದೇಸಾಯಿ ಅಂತೂ ಲಲ್ಲನ್​ಟಾಪ್​ನ ಸಂದರ್ಶನವೊಂದರಲ್ಲಿ ಅತಿಕ್ ಮನೆಯಲ್ಲಿ ತಿಂದ ತಂದೂರಿ ಎಷ್ಟು ಚೆನ್ನಾಗಿತ್ತು ಎಂದು ವರ್ಣಿಸಿದ್ದರು. ಮಾಫಿಯಾ ಡಾನ್​ನಿಗೂ ಒಂದೊಳ್ಳೆ ಮುಖವಿದೆ ಎಂದು ಹೇಳುವ ಪ್ರಯತ್ನ ಅದು.

    ಇಲ್ಲಿಯವರೆಗೂ ಎಲ್ಲವೂ ಸರಿಯೇ. ಆದರೆ ಅತಿಕ್​ನ ಹತ್ಯೆಯಾದದ್ದು ಮಾತ್ರ ಗಾಬರಿ ಹುಟ್ಟಿಸುವಂಥದ್ದು. ಮಾಧ್ಯಮದ ಎದುರಿಗೆ, ಪೊಲೀಸರ ನಡುವೆಯೇ ಅತ್ಯಾಧುನಿಕ ಶಸ್ತ್ರ ಹಿಡಿದುಬಂದು ಆಕ್ರಮಣ ಮಾಡುತ್ತಾರೆಂದರೆ ಇದರ ಹಿಂದೆ ದೊಡ್ಡದೊಂದು ಪಿತೂರಿ ಇರಲೇಬೇಕು. ಇಷ್ಟಕ್ಕೂ ಭಾರತದಲ್ಲಿ ನಾಯಕತ್ವ ಬದಲಾವಣೆಗೆ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಪೂರ್ವಭಾವಿಯಾಗಿ ಅಮೆರಿಕಾ ಎರಿಕ್ ಗಾರ್​ಸಿಟಿಯನ್ನು ರಾಯಭಾರಿಯಾಗಿ ಭಾರತಕ್ಕೆ ಕಳಿಸಿತು. ಅವರಿಗೆ ಈ ಹುದ್ದೆನೀಡಿ ಕಳಿಸಬೇಕೆಂದು 2021ರ ಮಧ್ಯಭಾಗದಲ್ಲಿಯೇ ನಿಶ್ಚಯಿಸಲಾಗಿತ್ತು. ಆದರೆ ಅಮೆರಿಕಾದ ಸೆನೆಟ್​ನಲ್ಲಿ ಬಹುಮತವಿರದಿದ್ದುದರಿಂದ ಅಧ್ಯಕ್ಷ ಬೈಡೆನ್ ತಡೆ ಹಿಡಿದಿದ್ದರು. ಬಹುಮತ ಖಾತ್ರಿಯಾದೊಡನೆ ಭಾರತಕ್ಕೆ ಕಳಿಸುವ ನಿಶ್ಚಯ ಮಾಡಿದರು. ಈ ಎರಿಕ್ ಲಾಸ್ ಏಂಜಲೀಸ್​ನ ಮೇಯರ್ ಆಗಿದ್ದವರು ಮತ್ತು ಅಲ್ಲಿನ ಬುದ್ಧಿಜೀವಿಗಳ ಕಣ್ಮಣಿ. ಪತ್ನಿಯೊಂದಿಗೆ ಸೇರಿ ಅನೇಕ ಪ್ರತಿಭಟನೆಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. ಸಿಎಎ ವಿರುದ್ಧ ಭಾರತದಲ್ಲಿ ಪ್ರತಿಭಟನೆ ನಡೆಯುವಾಗ ಗಂಡ-ಹೆಂಡತಿ ಇಬ್ಬರೂ ಪ್ರತ್ಯಕ್ಷ-ಪರೋಕ್ಷವಾಗಿ ಅದರಲ್ಲಿ ಭಾಗಿಯಾಗಿದ್ದರು. ರಾಯಭಾರಿ ಎಂದು ಘೊಷಿಸಿದೊಡನೆ ಎರಿಕ್ ಹೇಳಿದ್ದೇನು ಗೊತ್ತೇ? ‘ನನ್ನ ಅತ್ಯಂತ ಪ್ರಮುಖವಾದ ಕೆಲಸವೇ ಸಿಎಎ ಬಗೆಯ ಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ಮಾನವ ಹಕ್ಕುಗಳ ಸ್ಥಾಪನೆ ಮಾಡುವುದು. ಯಾರು ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೋ ಅಂಥವರೊಡನೆ ನೇರವಾಗಿ ಮಾತುಕತೆಯಲ್ಲಿ ತೊಡಗುವುದು’ ಎಂದು. ಇದರರ್ಥ ನೇರವಾಗಿ ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಮತ್ತು ಮೋದಿ-ವಿರೋಧಿಗಳನ್ನೆಲ್ಲ ತನ್ನ ದೂತಾವಾಸದ ಛತ್ರಛಾಯೆಯಲ್ಲಿ ಒಂದುಗೂಡಿಸುವುದು ಅಂತ! ಯೂಕ್ರೇನ್​ನಲ್ಲಿ ಅಮೆರಿಕಾ ತನ್ನ ಪ್ರಭಾವ ಬಳಸಿ ಅಲ್ಲಿನ ರಾಷ್ಟ್ರೀಯವಾದಿ ಅಧ್ಯಕ್ಷನನ್ನು ಅಧಿಕಾರದಿಂದ ಕೆಳಗಿಳಿಸಿ ಕೈಗೊಂಬೆಯಾಗಿರುವ ಶತಮೂರ್ಖ ಝೆಲೆನ್​ಸ್ಕಿಯನ್ನು ಕೂರಿಸಿತಲ್ಲ, ಭಾರತದಲ್ಲೂ ಹಾಗೆ ಮಾಡುವ ಯೋಜನೆ ಅದರದ್ದು. ಮೋದಿಯನ್ನು ಕೆಳಗಿಳಿಸಿದ ನಂತರ ಝೆಲೆನ್​ಸ್ಕಿಯಷ್ಟೇ ಮೂರ್ಖನೂ ಮತ್ತು ಕೈಗೊಂಬೆಯೂ ಆಗಬಲ್ಲ ನಾಯಕ ಯಾರಿರಬಹುದು ಹೇಳಿ?

    ಅಮೆರಿಕಾ ಭಾರತದಲ್ಲಿ ದೊಡ್ಡ ತಳಮಳವನ್ನು ಸೃಷ್ಟಿಸುವ ಧಾವಂತದಲ್ಲಿದೆ. ಸಿಎಎ ವಿರುದ್ಧದ ಹೋರಾಟ ಅದಕ್ಕೊಂದು ಅಸ್ತ್ರವಾಗಿ ದೊರಕಿತ್ತು. ಸರ್ಕಾರ ಅದನ್ನು ನಿಭಾಯಿಸಿದ ರೀತಿ ಮತ್ತು ಅದನ್ನು ಜಾರಿಗೆ ತರುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿಯಿಂದಾಗಿ ಅಮೆರಿಕಾ ಪತರಗುಟ್ಟಿದೆ. ಹೀಗಾಗಿಯೇ ಅನವಶ್ಯಕವಾಗಿ ರಾಮನವಮಿಯ ಮೆರವಣಿಗೆಯ ಮೇಲೆ ಕಲ್ಲೆಸೆದು ಹಿಂದೂಗಳನ್ನು ಭಡಕಾಯಿಸುವ ಯೋಜನೆ ರೂಪಿಸುತ್ತಿರೋದು. ಪಿಎಫ್​ಐ ನಿಷೇಧದ ನಂತರ ಈ ಯೋಜನೆಗಳನ್ನೆಲ್ಲ ನೇರವಾಗಿ ಕಾರ್ಯರೂಪಕ್ಕೆ ತರುವ ಒಂದು ಸಂಸ್ಥೆ ಇಲ್ಲವಾಗಿ ಅಮೆರಿಕಾ ಚಡಪಡಿಸುತ್ತಿದೆ. ಹೀಗಾಗಿಯೇ ಮೂರ್ಖರಂತಿರುವ ಈ ಮಂದಿಯನ್ನು ಭಡಕಾಯಿಸಲು ಭಿನ್ನ-ಭಿನ್ನ ಪ್ರಯತ್ನಗಳನ್ನು ಮಾಡುತ್ತಿರೋದು. ಅದರ ಒಂದು ಭಾಗವೇ ಅತಿಕ್​ನ ಹತ್ಯೆ!

    ಅದಾಗಲೇ ಓವೈಸಿ, ಸರ್ಕಾರ ಬೇಕಂತಲೇ ಈ ಕೆಲಸ ಮಾಡಿಸಿದೆ ಎಂದು ಹೇಳಿದ್ದಾರೆ. ಮುಸಲ್ಮಾನರ ಪರವಾಗಿ ಸದಾ ನಿಲ್ಲುತ್ತಿದ್ದ ಅತಿಕ್​ನಂಥವನನ್ನು ಪರಿವಾರ ಸಮೇತವಾಗಿಯೇ ಮುಗಿಸುತ್ತಾರೆಂದರೆ ಇನ್ನು ಸಾಮಾನ್ಯ ಮುಸಲ್ಮಾನನ ಕಥೆಯೇನು? ಎಂಬ ಪ್ರಶ್ನೆಯನ್ನು ಮಸೀದಿಗಳಲ್ಲಿ ಕೇಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಈ ಕೋಮು ಶಾಂತಿಯಿಂದ ಕೂಡಿರಬಹುದೇನೊ. ಆದರೆ ಇತರೆ ರಾಜ್ಯಗಳಲ್ಲಿ ಇದು ತೀವ್ರಸ್ವರೂಪ ಪಡೆದುಕೊಳ್ಳುತ್ತದೆ, 2024ರ ವೇಳೆಗೆ ಸಾಕಪ್ಪ, ಸಾಕು ಎನಿಸುವಷ್ಟರಮಟ್ಟಿಗೆ. ಇದಕ್ಕೆ ಪೂರಕವಾಗಿ ನ್ಯಾಯ ವ್ಯವಸ್ಥೆಯನ್ನೂ ಇವರು ಬಳಸಿಕೊಳ್ಳುತ್ತಿದ್ದಾರೆ. ಮುಸಲ್ಮಾನರನ್ನೇ ಮುಂದಿಟ್ಟುಕೊಂಡರೆ ಹಿಂದೂಗಳು ಒಟ್ಟಾಗಿ ನರೇಂದ್ರ ಮೋದಿಗೆ ವೋಟು ಹಾಕುವ ಸಂಭವವಿರುವುದರಿಂದ ಖಲಿಸ್ತಾನಿಗಳಿಗೆ ವಿಶೇಷ ಬೆಂಬಲ ಕೊಟ್ಟಿದ್ದು ಅಮೆರಿಕಾ-ಯುರೋಪುಗಳು. ಆದರೆ ಸರ್ಕಾರ ಅದನ್ನು ಸಂಭಾಳಿಸಿದ ರೀತಿ ಮಾತ್ರ ಮೆಚ್ಚಬೇಕಾದ್ದು. ಓಡಿ ಹೋದ ಖಲಿಸ್ತಾನೀ ನಾಯಕ ಅಮೃತ್​ಪಾಲ್ ಸಿಂಗ್ ತಾನು ಜನರ ನಡುವಿನ ಶ್ರೇಷ್ಠ ನಾಯಕ ಎಂದು ಬೊಗಳೆ ಕೊಚ್ಚಿಕೊಳ್ಳುತ್ತಿದ್ದ. ಅವನು ಕಾಣೆಯಾಗಿ ಇಷ್ಟು ದಿನ ಕಳೆದರೂ ಪಂಜಾಬಿನಲ್ಲಿ ಆತನ ಕುರಿತಂತೆ ನಯಾಪೈಸೆ ಚರ್ಚೆಯಿಲ್ಲ ಎಂದಾಗಲೇ ಇವನ ಯೋಗ್ಯತೆ ಅರಿವಾಗಿರಬೇಕು.

    ಅತಿಕ್ ಅಹ್ಮದ್ ತನ್ನ ಬಳಿ ಆಯುಧಗಳಿಗೆ ಬರವಿಲ್ಲವೆಂದೂ ಪಾಕಿಸ್ತಾನ ಡ್ರೋನ್ ಮೂಲಕ ಪಂಜಾಬ್ ಗಡಿಗೆ ಅದನ್ನು ತಲುಪಿಸುವುದೆಂದೂ, ಕಾಶ್ಮೀರಿಗಳು ಅದನ್ನೇ ಬಳಸುತ್ತಾರೆ ಎಂದೂ ಹೇಳಿದ್ದ. ಶತಾಯ-ಗತಾಯ ಪಂಜಾಬಿನಲ್ಲಿ ಅಧಿಕಾರ ನಡೆಸಬೇಕೆಂದು ಕೇಜ್ರಿವಾಲ್ ಪಣತೊಟ್ಟಿದ್ದೇಕೆಂದು ಅರ್ಥವಾಯ್ತೇನು? ಇನ್ನು ಕರ್ನಾಟಕದಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿಯಲು ಹಾತೊರೆಯುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಿದ್ದರಾಮಯ್ಯನವರ ಐದು ವರ್ಷದ ಸರ್ಕಾರದ ನಂತರ ಭಾಜಪ ಅಧಿಕಾರಕ್ಕೆ ಬರದೇ ಹೋಗಿದ್ದರೆ, ಸಿದ್ದರಾಮಯ್ಯನವರೇ ಮತ್ತೊಮ್ಮೆ ಕುರ್ಚಿಯ ಮೇಲೆ ಕುಳಿತಿದ್ದರೆ, ಪಿಎಫ್​ಐ ಇಲ್ಲೂ ಕೆಲವು ಅತಿಕ್ ಅಹ್ಮದ್​ರನ್ನು ಸೃಷ್ಟಿಸುತ್ತಿತ್ತು!

    ಮತದಾನ ಮಾಡುವ ಮುನ್ನ ಇಡೀ ರಾಷ್ಟ್ರವನ್ನು ಕಣ್ಮುಂದೆ ತಂದುಕೊಳ್ಳಿ.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    2023ರ ಅಂತಿಮ ಮತದಾರರ ಪಟ್ಟಿ: ಇಲ್ಲಿದೆ ಜಿಲ್ಲಾವಾರು, ಕ್ಷೇತ್ರವಾರು ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts