ಆಲೂರು: ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಸಿಕ್ಕಾಗ ಮಾತ್ರ ಅವರ ಸಾಮರ್ಥ್ಯ ಬೆಳಕಿಗೆ ಬರಲು ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಕೋಲಾರ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ಪ್ರತಿಭಾವಂತ ಕ್ರೀಡಾಪಟುಗಳನ್ನು ಪಟ್ಟಣದ ಶಾಸಕರ ಕಚೇರಿಯಲ್ಲಿ ಇತ್ತೀಚೆಗೆ ಅಭಿನಂದಿಸಿ ಮಾತನಾಡಿದರು.
ಕ್ರೀಡಾಪಟುಗಳಿಗೆ ಅತ್ಯುತ್ತಮ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕ್ರೀಡಾಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಕಾಣುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಭಾರತದಲ್ಲಿ ಉತ್ತಮ ಕ್ರೀಡಾಪಟುಗಳನ್ನು ತಯಾರಿಸುವ ಕೆಲಸ ನಡೆಯುತ್ತಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಆಲೂರು ತಾಲೂಕಿನ ಕುಂದೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿ.ಜೆ.ಭವ್ಯಾ ಭಾಗವಹಿಸಿ 40 ಮೀ. ದೂರ ಜಾವಲಿನ್ ಎಸೆದು ಪ್ರಥಮ ಸ್ಥಾನ ಪಡೆದು ಹೊಸ ರಾಜ್ಯ ದಾಖಲೆಯನ್ನು ಮಾಡಿ ಚಿನ್ನದ ಪದಕವನ್ನು ಪಡೆದರೆ, ಬಾಲಕರ ವಿಭಾಗದ ಗುಂಡು ಎಸೆತ ಸ್ಪರ್ಧೆಯಲ್ಲಿ ಆಲೂರು ತಾಲೂಕಿನ ಸರ್ಕಾರಿ ಪ್ರೌಢಶಾಲೆ ಶಾಲೆಯ ವಿದ್ಯಾರ್ಥಿ ಸಂತೋಷ್ ತೃತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ಶಾಸಕ ಸಿಮೆಂಟ್ ಮಂಜು, ಶಿಕ್ಷಣ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘ, ಸ್ಪೋರ್ಟ್ಸ್ ಕ್ಲಬ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ, ಲಯನ್ ಸೇವಾ ಸಂಸ್ಥೆ, ದಿ ಆಲೂರ್ ಕ್ಲಬ್, ರೆಡ್ ಕ್ರಾಸ್ ಸಂಸ್ಥೆ ಹಾಗೂ ಆಲೂರು ತಾಲೂಕು ದಲಿತ ಸಂಘ ಸಂಸ್ಥೆಗಳಿಂದ ಅಭಿನಂದಿಸಲಾಯಿತು.
ಬೈರಾಪುರ ಗ್ರಾಪಂ ಸದಸ್ಯ ರುದ್ರೇಗೌಡ, ಎಸ್ಸಿ ಮೋರ್ಚಾ ಅಧ್ಯಕ್ಷ ಬಾಲಲೋಚನ, ಬಿಜೆಪಿ ಮುಖಂಡರಾದ ಅಜಿತ್, ಲೋಕೇಶ್, ರವಿ, ಹನುಮಂತೇಗೌಡ ಕಿರಣ್, ಜಿ.ಕೆ.ವೆಂಕಟೇಶ್, ದೊರೆಗೌಡ ಇತರರು ಇದ್ದರು.