ಅತಿಥಿ ಉಪನ್ಯಾಸಕರ ಸೇವೆ ವಿಲೀನಗೊಳಿಸಿ

ಧಾರವಾಡ: ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಸೇವಾ ವಿಲೀನತೆಗಾಗಿ ವಿಶೇಷ ನಿಯಮಾವಳಿ ರಚನೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಉಪನ್ಯಾಸಕರು, ಹಿಂದಿನ ಸರ್ಕಾರದ ಮುಖ್ಯಮಂತ್ರಿ, ಶಾಸಕರು, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಹಾಗೂ ಸೇವಾ ವಿಲೀನಕ್ಕೆ ಭರವಸೆ ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಳ್ಳಲ್ಲ ಎಂದು ದೂರಿದರು.

412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೇ. 75ರಷ್ಟು ಸರ್ಕಾರಿ ಉಪನ್ಯಾಸಕರಿದ್ದು, 2000ನೇ ಇಸ್ವಿಯಿಂದ 2018ರವರೆಗೆ ಕನಿಷ್ಟ ಗೌರವ ಧನ ಆಧಾರದ ಮೇರೆಗೆ ನಿಯಮಾನುಸಾರ ಸೇವೆ ಸಲ್ಲಿಸಿದ್ದಾರೆ. ಇದೀಗ ಸರ್ಕಾರ 3,800 ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಮುಂದಾಗಿದ್ದರಿಂದ 13 ಸಾವಿರ ಅತಿಥಿ ಉಪನ್ಯಾಸಕ ಕುಟುಂಬ ಬೀದಿಗೆ ಬರುತ್ತವೆ. ಹೀಗಾಗಿ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರ ವಿಲೀನ ಪ್ರಕ್ರಿಯೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಮೂರು ದಿನದೊಳಗೆ ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಸೂಕ್ತ ನಿರ್ಧಾರ ಪ್ರಕಟಿಸದಿದ್ದಲ್ಲಿ ಡಿ. 17ರಂದು ಸಾವಿರಾರು ಅತಿಥಿ ಉಪನ್ಯಾಸಕರು ಕುಟುಂಬ ಸಮೇತ ಬೆಳಗಾವಿ ಚಲೋ ನಡೆಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ರವಾನಿಸಿದರು.

ಸಮಿತಿ ರಾಜ್ಯ ಜಂಟಿ ಕಾರ್ಯದರ್ಶಿ ಸಿ.ಕೆ. ಪಾಟೀಲ, ಮುಖಂಡರಾದ ಸಿ.ಎಸ್. ಪಾಟೀಲ, ವಸಂತಗೌಡ ಪಾಟೀಲ, ಉಮೇಶ ಭಾಂಡಗೆ, ದಾನೇಶ್ವರಿ ಗುಡ್ಡದ, ಜಗದೀಶ ರ್ಬಾ, ಎಸ್.ಎನ್. ಪಾಟೀಲ, ಪ್ರಶಾಂತಕುಮಾರ ಬಳ್ಳಾರಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.

2ನೇ ದಿನಕ್ಕೆ ಕಾಲಿಟ್ಟ ಕಾರ್ವಿುಕರ ಪ್ರತಿಭಟನೆ: ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರ ಕಾರ್ವಿುಕರ ಮತ್ತು ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಪೌರ ಕಾರ್ವಿುಕರು ರಕ್ತದಿಂದ ಬರೆದ ಪತ್ರಗಳನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ರವಾನಿಸಿ ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆ ಪೌರ ಕಾರ್ವಿುಕರಿಗೆ ನೇರ ವೇತನ ಪಾವತಿ ಮಾಡುವಂತೆ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದ್ದರೂ ಪಾಲಿಕೆ ಆಯುಕ್ತರು ನ್ಯಾಯಾಲಯ ಆದೇಶ ಉಲ್ಲಂಘಿಸಿದ್ದಾರೆ. ಹೀಗಾಗಿ ಸರ್ಕಾರದ ಆದೇಶದಂತೆ ಗುತ್ತಿಗೆ ಪೌರ ಕಾರ್ವಿುಕರಿಗೆ ವಿಶೇಷ ನೇರ ನೇಮಕಾತಿ, ನೇರ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಮುಖಂಡರಾದ ನಾಗರಾಜ ಸನ್ಮನಿ, ಕೃಷ್ಣ ಗುಮ್ಮಗೋಳ, ಮಂಜುನಾಥ ಚವ್ಹಾಣ, ದಿಲಾನ್ ಬಳ್ಳಾರಿ, ನಾಗಮ್ಮ ಗೊಲ್ಲರ, ಗಂಗಮ್ಮ ಸುರಪೂರ, ಕಸ್ತೂರಿ ಬೆಳಗುಂದಿ ಇದ್ದರು.