ಅಥಣಿ ತಾಲೂಕಿನಲ್ಲಿ ಶಾಂತಿಯುತ ಮತದಾನ

ಅಥಣಿ: ಅಥಣಿ ತಾಲೂಕಿನಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆದಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಹಿರಿಯರು, ವಿಕಲಚೇತನರಿಗೆ ವಾಹನ ವ್ಯವಸ್ಥೆ ಮಾಡಲಾಗಿತ್ತು.
ಮೋಡ ಕವಿದ ವಾತಾವರಣ ಇತ್ತು. ಬಿಸಿಲಿನ ತಾಪ ಕಡಿಮೆಯಾದ ಮೇಲೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಬೆಳಗ್ಗೆ 7 ಗಂಟೆಗೆ ಇಲ್ಲಿಯ ವಿದ್ಯಾಪೀಠ ಶಾಲೆಯಲ್ಲಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮತದಾನ ಮಾಡಿದರು. ಶಾಸಕ ಮಹೇಶ ಕುಮಠಳ್ಳಿ ಅವರು ವಿಕ್ರಂಪುರ ಬಡಾವಣೆಯ ಸರ್ಕಾರಿ ಶಾಲೆಯ ನಂ.16ರ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮಾಜಿ ಶಾಸಕ ಲಕ್ಷ್ಮಣ ಸವದಿ ಸ್ವಗ್ರಾಮ ನಾಗನೂರ ಪಿ.ಕೆಯಲ್ಲಿ ಮತದಾನ ಮಾಡಿದರು.

ಅಬ್ದುಲ ಕಲಾಂ ಶಾಲೆಯ ವ್ಯಾಪ್ತಿಯಲ್ಲಿ ವಿಶೇಷ ವೈದ್ಯರ ತಂಡ ಎಲ್ಲ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮಾಡಿ ಮತದಾನಕ್ಕೆ ಕಳುಹಿಸಿದರು. ಹೆಚ್ಚು ಮಹಿಳಾ ಮತದಾರರಿರುವ ಮತಗಟ್ಟೆಯಾಗಿರುವುದರಿಂದ ಇಲ್ಲಿ ಪಿಂಕ್ ಮತಗಟ್ಟೆ ನಿರ್ಮಿಸಲಾಗಿತ್ತು.

ತಾಲೂಕಿನ ವಿವಿಧ ಗ್ರಾಮಗಳಾದ ಶಂಕರಹಟ್ಟಿ, ಶಿರಹಟ್ಟಿ, ಸಂಕೋನಟ್ಟಿ, ಐಗಳಿ, ಬಾಡಗಿ ಸೇರಿದಂತೆ ಅಥಣಿ ಕೆಲ ಬೂತ್‌ಗಳಲ್ಲಿ ವಿವಿ ಪ್ಯಾಡ್ ಕೈಕೊಟ್ಟ ಕಾರಣ ಕೆಲಕಾಲ ತೊಂದರೆ ಉಂಟಾಗಿತ್ತು. ನಂತರ ಚುನಾವಣಾ ಮೆಲ್ವಿಚಾರಕರು ಕೂಡಲೆ ಬೇರೆ ವಿವಿ ಪ್ಯಾಡ್ ನೀಡಿ ಸಮಸ್ಯೆ ಪರಿಹರಿಸಿದ್ದಾರೆ.

ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಕಾಶವ್ವಾ ಮಾಳಿ (102) ಉತ್ಸಾಹದಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಅವರಿಗೆ ತಾಲೂಕು ಪಂಚಾಯಿತಿ ಸ್ವೀಪ್ ಸಮಿತಿ ಅಧ್ಯಕ್ಷ ಆರ್.ಎನ.ಬಂಗಾರೆಪ್ಪನವರ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಸತ್ಕರಿಸಿ ಪ್ರಮಾಣಪತ್ರ ವಿತರಿಸಲಾಯಿತು.

Leave a Reply

Your email address will not be published. Required fields are marked *