ಅಥಣಿ: ಶರಣರ ಮಾತಿಗೂ ಮೀರಿದ್ದೂ ಹೆಣ್ಣಿನ ಸೇವೆ

ಅಥಣಿ: ಹೆಣ್ಣು ಹುಣ್ಣಲ್ಲ. ಜಗದ ಕಣ್ಣು. ತಾಯಿಯಾಗಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ದೇವರ ಇನ್ನೊಂದು ಅವತಾರ ಆಕೆ. ಅವಳ ಸೇವೆ ಶರಣರ ಮಾತಿಗೂ ಮೀರಿದ್ದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ ಹಿರೇಮಠ ಹೇಳಿದ್ದಾರೆ.

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಶ್ರೀಮತಿ ಸಿ.ಬಿ.ರಣಮೋಡೆ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಚಾರ್ಯ ಎಂ.ಎಸ್ ಹಿರೇಮಠ, ಮಹಿಳೆ ತನ್ನೆಲ್ಲ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಅವಳಿಂದಲೇ ಎಲ್ಲವೂ ಸಾಧ್ಯ ಎಂದು ಸ್ತ್ರೀ ಸಾಮರ್ಥ್ಯವನ್ನು ವರ್ಣಿಸಿದರು.

ಶಾಲೆಯ ಬೋಧಕ, ಬೋಧಕೇತರ ಮಹಿಳಾ ಸಿಬ್ಬಂದಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಸಂಗೀತ ಶಿಕ್ಷಕರಾದ ಸಂಜೀವ ಕಾಂಬಳೆ ಅವರು ತಮ್ಮದೇ ಸಾಹಿತ್ಯದಲ್ಲಿ ರಚನೆಯಾದ ತಾಯಿ ಕುರಿತಾದ ಗೀತೆಯೊಂದನ್ನು ಹಾಡಿ ಸ್ತ್ರೀ ಗೌರವವನ್ನು ದ್ವಿಗುಣಗೊಳಿಸಿದರು. ಅಡಿವಯ್ಯ ಹಿರೇಮಠ ಸ್ವಾಗತಿಸಿದರು. ಭಜರಂಗ ಸೂರ್ಯವಂಶಿ ನಿರೂಪಿಸಿ, ವಂದಿಸಿದರು.