ಅಥಣಿ ಪೊಲೀಸರ ಭರ್ಜರಿ ಭೇಟೆ

ಅಥಣಿ: ಬೈಕ್ ಹಾಗೂ ಸರಗಳ್ಳತನ ಮಾಡುವ ಮೂಲಕ ಅಥಣಿ ತಾಲೂಕಿನ ಜನರ ನಿದ್ದೆಗೆಡಿಸಿದ್ದ ನಾಲ್ವರು ಕಳ್ಳರನ್ನು ಶುಕ್ರವಾರ ಅಥಣಿ ಮತ್ತು ಕಾಗವಾಡ ಪೊಲೀಸರು ಬಂಧಿಸಿದ್ದಾರೆ.

ಅಥಣಿ ತಾಲೂಕಿನ ಮೋಳೆ ಗ್ರಾಮದ ಸಿದ್ದಪ್ಪ ಸೋಮನಿಂಗ ಹಾಲ್ಲೋಳ್ಳಿ(34), ಸಿದ್ದಪ್ಪ ಯಮನಪ್ಪ ತೇಲಿ(26), ಐನಾಪುರ ಪಟ್ಟಣದ ರಾಜು ಕಲ್ಲಪ್ಪ ಮುಚ್ಚಂಡಿ(28) ಮತ್ತು ಗಣಪತಿ ಸಹದೇವ ವಂಡಿಮಾಳಿ(26) ಬಂಧಿತ ಆರೋಪಿಗಳು. ಅಥಣಿ ಪಟ್ಟಣ ಮತ್ತು ಹೊರವಲಯದಲ್ಲಿ ಕಳ್ಳತನ ಮಾಡಿದ್ದ 4 ಚಿನ್ನದ ಸರ (3.93 ಲಕ್ಷ ರೂ.) ಮತ್ತು 6 ಬೈಕ್ (2.40 ಲಕ್ಷ ರೂ.)ಸೇರಿ ಒಟ್ಟು 6.33 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ.

ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ಹೆಚ್ಚುವರಿ ವರಿಷ್ಠಾಧಿಕಾರಿ ರವೀಂದ್ರ ಗದಾಡೆ, ಅಥಣಿ ಉಪವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಅಥಣಿ ಸಿಪಿಐ ಎಚ್.ಶೇಖರಪ್ಪ ಮತ್ತು ಕಾಗವಾಡ ಪಿಎಸ್‌ಐ ಎಸ್.ಡಿ.ಮುಲ್ಲಾ ನೇತೃತ್ವದಲ್ಲಿ ಸಿಬ್ಬಂದಿ ಎಂ.ಬಿ.ದೊಡಮನಿ, ಎಸ್.ಜಿ.ಗಡಾದ ಇತರರು ಕಾರ್ಯಾಚರಣೆಯಲ್ಲಿದ್ದರು.