ಅಥಣಿಯಲ್ಲಿ ಬರ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಕರವೇ ಆಗ್ರಹ

ಅಥಣಿ: ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ತಿಂಗಳುಗಳೇ ಗತಿಸಿದರೂ, ರಾಜಕೀಯ ಡೊಂಬರಾಟದಲ್ಲಿ ತೊಡಗಿರುವ ನಾಯಕರು ಬರ ಪರಿಹಾರ ಕಾಮಗಾರಿ ಬಗ್ಗೆ ಕಿಂಚಿತ್ತೂ ಲಕ್ಷ ವಹಿಸದೆ ಇರುವುದು ದುರದೃಷ್ಟಕರ ಸಂಗತಿ ಎಂದು ಕರವೇ ತಾಲೂಕಾಧ್ಯಕ್ಷ ಬಸನಗೌಡ ಪಾಟೀಲ (ಬಮ್ನಾಳ) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ತಹಸೀಲ್ದಾರ್ ಎಂ.ಎನ್.ಬಳಿಗಾರ ಅವರಿಗೆ ಶನಿವಾರ ಮನವಿ ಸಲ್ಲಿಸಿ ಮಾತನಾಡಿ, ಬರಗಾಲ ಪೀಡಿತ ಪ್ರದೇಶವೆಂಬ ಹಣೆಪಟ್ಟೆ ಕಟ್ಟಿಕೊಂಡಿರುವ ತಾಲೂಕಿನ ಪೂರ್ವ ಮತ್ತು ಉತ್ತರ ಭಾಗದ ಬಹುತೇಕ ಹಳ್ಳಿಗಳಲ್ಲಿ ದನಕರುಗಳಿಗೆ ಕುಡಿಯಲು ನೀರು, ಮೇವಿಲ್ಲ. ಕೂಡಲೇ ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಪಿಐ ಎಚ್. ಶೇಖರಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ, ಪಿಎಸ್‌ಐ ಉಸ್ಮಾನ್ ಅವಟಿ, ಕರವೇ ಕಾರ್ಯಕರ್ತರಾದ ಸುಂದರ ಸೌದಾಗರ, ಮಂಜು ಹೋಳಿಕಟ್ಟಿ, ಅನಿಲ ಸೌದಾಗರ, ಸಚಿನ ಪಾಟೀಲ, ಅಪ್ಪು ಪಾಟೀಲ, ಓಂಕಾರ ಇಂಗೋಲೆ ಇದ್ದರು.