ಜಾರಕಿಹೊಳಿ ಒಳಗೊಂಡು ನಾವ್ಯಾರೂ ಕಾಂಗ್ರೆಸ್ ಬಿಡುವುದಿಲ್ಲ -ಶಾಸಕ ಮಹೇಶ ಕುಮಠಳ್ಳಿ

ಬೆಳಗಾವಿ: ಕಾಂಗ್ರೆಸ್ ಪಕ್ಷ ಬಿಡುವ ಇಲ್ಲವೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯವಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಯಾರೊಂದಿಗೂ ಚರ್ಚಿಸಿಲ್ಲ ಎಂದು ಅಥಣಿ ಕ್ಷೇತ್ರದ ಶಾಸಕ ಮಹೇಶ ಕುಮಠಳ್ಳಿ ಸ್ಪಷ್ಟಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ನಾಲ್ಕೈದು ದಿನಗಳಿಂದ ಶಾಸಕ ರಮೇಶ ಜಾರಕಿಹೊಳಿ ಕುರಿತು ಕೆಲ ಮಾಧ್ಯಮಗಳಲ್ಲಿ ಆಧಾರ ರಹಿತ ಸುದ್ದಿಗಳನ್ನು ಬಿತ್ತರಿಸುತ್ತಿರುವುದು ಸರಿಯಾದುದಲ್ಲ. ರಾಜಕೀಯ ಬೆಳವಣಿಗೆ ಕುರಿತು ಊಹಾಪೋಹದ ಸುದ್ದಿಗಳಿಗೆ ಮಹತ್ವ ನೀಡಬಾರದು ಎಂದು ವಿನಂತಿಸಿದರು.

ಕಾಂಗ್ರೆಸ್‌ನಲ್ಲಿ ಶಾಸಕ ರಮೇಶ ಜಾರಕಿಹೊಳಿ ಮತ್ತು ನಾನು 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಗೋಕಾಕ ವಿಧಾನಸಭಾ ಕ್ಷೇತ್ರದಿಂದ 20 ವರ್ಷಗಳಿಂದ ರಮೇಶ ಜಾರಕಿಹೊಳಿ ನಿರಂತರವಾಗಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಇದೀಗ ಏಕಾಏಕಿ ನಾವೆಲ್ಲಾ ಕಾಂಗ್ರೆಸ್ ಬಿಡುತ್ತಿದ್ದೇವೆ ಎಂದು ಸುದ್ದಿ ಹಬ್ಬಿಸುತ್ತಿರುವುದು ಸರಿಯಲ್ಲ ಎಂದರು.

ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಸಲುವಾಗಿ ಅಥಣಿ ಕ್ಷೇತ್ರದಲ್ಲಿ 1 ತಿಂಗಳುಗಳಿಂದ ಕೆಲಸ ಮಾಡುತ್ತಿದ್ದೇನೆ. ಪಕ್ಷದ ನಾಯಕರಿಗೂ ಎಲ್ಲ ವಿಷಯ ಗೊತ್ತಿದೆ. ಚುನಾವಣೆ ಪ್ರಚಾರದಲ್ಲಿ ತೊಡಗಿದ್ದರಿಂದ ರಮೇಶ ಜಾರಕಿಹೊಳಿ ಅವರ ಯಾವುದೇ ವಿಷಯಗಳು ನನಗೆ ಗೊತ್ತಿಲ್ಲ. ನಮ್ಮೊಂದಿಗೆ ಯಾವುದೇ ವಿಷಯಗಳನ್ನು ಚರ್ಚಿಸಿಲ್ಲ ಎಂದು ಸ್ಪಷ್ಪಡಿಸಿದರು.

ರಮೇಶ ಜಾರಕಿಹೊಳಿ ಹಾಗೂ ನಾವ್ಯಾರೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ನಿಂದಲೇ ಬೆಳೆದಿದ್ದೇವೆ. ಕಾಂಗ್ರೆಸ್‌ನಲ್ಲಿಯೇ ಮುಂದುವರಿಯುತ್ತೇವೆ. ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.
|ಮಹೇಶ ಕುಮಠಳ್ಳಿ, ಶಾಸಕ