ಮೋದಿಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ವಾಜಪೇಯಿ 2002ಲ್ಲಿ ಮುಂದಾಗಿದ್ದರು: ಯಶವಂತ್​ ಸಿನ್ಹಾ

ಭೋಪಾಲ್​: ಮಾಜಿ ಪ್ರಧಾನ ಮಂತ್ರಿ ಅಟಲ್​ ಬಿಹಾರಿ ವಾಜಪೇಯಿ ಅವರು 2002ರಲ್ಲಿ ಅಂದಿನ ಗುಜರಾತ್​ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ ರಾಜೀನಾಮೆ ಪಡೆಯಲು ಮುಂದಾಗಿದ್ದರು ಎಂದು ಮಾಜಿ ಕೇಂದ್ರ ಸಚಿವ ಯಶವಂತ್​ ಸಿನ್ಹಾ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ್​ನಲ್ಲಿ ಮಾತನಾಡಿದ ಯಶವಂತ್​ ಸಿನ್ಹಾ ಅವರು 2002ರಲ್ಲಿ ಗುಜರಾತ್​ನ ಗೋಧ್ರಾದಲ್ಲಿ ನಡೆದ ಕೋಮುಗಲಭೆಯ ನಂತರ ಅಂದಿನ ಗುಜರಾತ್​ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ ರಾಜೀನಾಮೆ ಪಡೆಯಲು ವಾಜಪೇಯಿ ನಿರ್ಧರಿಸಿದ್ದರು. ಮೋದಿ ರಾಜೀನಾಮೆ ನೀಡಲು ನಿರಾಕರಿಸಿದರೆ ಗುಜರಾತ್​ ಸರ್ಕಾರವನ್ನು ವಜಾಗೊಳಿಸಲು ವಾಜಪೇಯಿ ನಿರ್ಧರಿಸಿದ್ದರು. ಆ ನಂತರ ಪಕ್ಷದ ಪ್ರಮುಖ ಮುಖಂಡರು ಸಭೆ ನಡೆಸಿದ್ದರು. ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್​.ಕೆ. ಆಡ್ವಾಣಿ ಅವರು ವಾಜಪೇಯಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಒತ್ತಡ ಹೇರಿದ್ದರು. ಆಡ್ವಾಣಿ ಒತ್ತಡಕ್ಕೆ ಮಣಿದ ವಾಜಪೇಯಿ ತಮ್ಮ ನಿರ್ಧಾರವನ್ನು ಬದಲಿಸಿದ್ದರು ಎಂದು ತಿಳಿಸಿದರು.

ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರು ಐಎನ್​ಎಸ್​ ವಿರಾಟ್​ ಅನ್ನು ತಮ್ಮ ಕುಟುಂಬದ ವಿಹಾರಕ್ಕೆ ಬಳಸಿಲ್ಲ ಎಂದು ನೌಕಾಪಡೆಯ ಮಾಜಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೂ ಮೋದಿ ಅವರು ಸುಳ್ಳನ್ನು ಹೇಳುತ್ತಿದ್ದಾರೆ. ಇದು ಪ್ರಧಾನಿ ಹುದ್ದೆಗೆ ಗೌರವ ತರುವಂತಹುದ್ದಲ್ಲ ಎಂದು ಪ್ರಧಾನಿಯನ್ನು ಸಿನ್ಹಾ ಟೀಕಿಸಿದರು.

ಮೋದಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಪಾಕಿಸ್ತಾನದ ಹೆಸರನ್ನು ಹೆಚ್ಚಾಗಿ ಪ್ರಸ್ತಾಪಿಸುತ್ತಿದ್ದಾರೆ. ಚೀನಾ ಕುರಿತು ಒಂದು ಮಾತನ್ನೂ ಆಡುತ್ತಿಲ್ಲ. ಚೀನಾ ಹೆಸರಿನಲ್ಲಿ ಮತಗಳನ್ನು ಸೆಳೆಯಲು ಸಾಧ್ಯವಿಲ್ಲ. ಪಾಕಿಸ್ತಾನದ ಹೆಸರನ್ನು ಅಧಾರವಾಗಿಟ್ಟುಕೊಂಡು ಹೆಚ್ಚು ಮತ ಗಳಿಸಬಹುದು ಎಂದು ಅವರಿಗೆ ಗೊತ್ತಿದೆ ಎಂದು ಮೋದಿ ವಿರುದ್ಧ ಸಿನ್ಹಾ ಕಿಡಿ ಕಾರಿದರು. (ಏಜೆನ್ಸೀಸ್​)