ವಾಜಪೇಯಿ ಅಂತಿಮ ದರ್ಶನಕ್ಕೆ ಹೋದ ಸ್ವಾಮಿ ಅಗ್ನಿವೇಶ್​ ಮೇಲೆ ಹಲ್ಲೆ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಚೇರಿಯೆದುರು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್​ ಅವರ ಮೇಲೆ 2ನೇ ಬಾರಿಗೆ ಹಲ್ಲೆಯಾಗಿದೆ. ಅಟಲ್​ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನಕ್ಕೆ ಹೋದಾಗ ಗುಂಪೊಂದು ಹಲ್ಲೆ ಮಾಡಿದೆ. ಈ ಹಿಂದೆ ಅಗ್ನಿವೇಶ್​ಗೆ ಜಾರ್ಖಂಡ್​ನಲ್ಲಿ ಬಿಜೆಪಿ ಕಾರ್ಯಕರ್ತರು ಹೊಡೆದಿದ್ದರು.

ದೆಹಲಿ ಬಿಜೆಪಿ ಕಚೇರಿಯೊಳಗೆ ವಾಜಪೇಯಿ ಅಂತಿಮ ದರ್ಶನಕ್ಕೆ ಹೋಗಲು ಅಗ್ನಿವೇಶ್​ ಪ್ರಯತ್ನಿಸಿದಂತೆ ಕೆಲವು ಜನ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಲ್ಲದೆ ಹಲ್ಲೆಗೆ ಮುಂದಾಗಿದ್ದಾರೆ. ಅಗ್ನಿವೇಶ್​ ಅವರನ್ನು ತಳ್ಳಿದ್ದಾರೆ. ಅವರು ಓಡಿ ಹೋಗಲು ಪ್ರಯತ್ನಿಸಿದರೂ ಬೆನ್ನಟ್ಟಿ ಹೋಗಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಮಧ್ಯೆ ಒಬ್ಬನು ಅಗ್ನಿವೇಶ್​ ತಲೆಗೆ ಹೊಡೆದರೆ ಮತ್ತೊಬ್ಬ ಮಹಿಳೆ ಚಪ್ಪಲಿಯನ್ನು ಎತ್ತಿ ಎಸೆಯಲು ಮುಂದಾಗಿದ್ದಾಳೆ. ಇದನ್ನು ನೋಡಿದ ಪೊಲೀಸರು ಸ್ವಾಮಿ ಅಗ್ನಿವೇಶ ಅವರನ್ನು ತಮ್ಮ ವ್ಯಾನ್ ನಲ್ಲಿ ಕರೆದುಕೊಂಡು ಹೋಗಿ ರಕ್ಷಣೆ ಮಾಡಿದ್ದಾರೆ.

ನಾನು ಕೊನೇ ಬಾರಿ ವಾಜಪೇಯಿ ಅವರ ದರ್ಶನ ಪಡೆಯಲು ಹೋಗಿದ್ದೆ. ಅಲ್ಲಿ ಪೊಲೀಸರು ನಿರ್ಬಂಧ ಹೇರಿದ್ದರಿಂದ ಕಚೇರಿಯೊಳಗೆ ಪ್ರವೇಶಿಸಲು ನಡೆದುಕೊಂಡು ಹೋಗುತ್ತಿದ್ದಾಗ ಒಮ್ಮೆಲೇ ಬಂದ ಗುಂಪು ನನ್ನನ್ನು ತಳ್ಳಿ, ನನ್ನ ಮೇಲೆ ಹಲ್ಲೆ ನಡೆಸಿದೆ. ನನ್ನ ರುಮಾಲನ್ನೂ ಕಿತ್ತೆಸೆದಿದ್ದಾರೆ ಎಂದು ಅಗ್ನಿವೇಶ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.