ಗುರು ಅಟಲ್​ ಜೀ ಸಮಾಧಿಗೆ ಮೋದಿ ನಮನ: ವಾಜಪೇಯಿ ಕನಸಿನ ಭಾರತ ನಿರ್ಮಾಣಕ್ಕೆ ಬದ್ಧವೆಂದ ಪ್ರಧಾನಿ

ನವದೆಹಲಿ: ಇಂದು ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಇಂದಿನ ದಿನವನ್ನು ದೇಶಾದ್ಯಂತ ಉತ್ತಮ ಆಡಳಿತ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಅಜಾತಶತ್ರುವಿನ ಹುಟ್ಟುಹಬ್ಬದ ನಿಮಿತ್ತ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ವಾಜಪೇಯಿ ಜನ್ಮದಿನದ ನಿಮಿತ್ತ ಪ್ರಧಾನಿ ಮೋದಿಯವರು ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಅಟಲ್​ ಸಮಾಧಿಯ ಬಳಿ ತೆರಳಿ ನಮನ ಸಲ್ಲಿಸಿದರು.

ರಾಷ್ಟ್ರಪತಿ ರಾಮನಾಥ ಕೋವಿಂದ್​, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು ಕೂಡ ಸ್ಮೃತಿ ಸ್ಥಳಕ್ಕೆ ತೆರಳಿ ಸಮಾಧಿಗೆ ಗೌರವ ಸಲ್ಲಿಸಿದರು.

ಮೋದಿ ಟ್ವೀಟ್
ತಮ್ಮ ಗುರು ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರಿಗೆ ಟ್ವಿಟರ್​ನಲ್ಲೂ ಮೋದಿ ನಮನ ಸಲ್ಲಿಸಿದ್ದಾರೆ. ಅಟಲ್​ ಜೀ ಕನಸಿನ ಭಾರತ ನಿರ್ಮಾಣಕ್ಕೆ ನಾವು ಬದ್ಧ. ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಅಟಲ್​ ಸ್ಮಾರಕ ಲೋಕಾರ್ಪಣೆ
ವಾಜಪೇಯಿ ಜನ್ಮದಿನದಂದೇ ಅವರ ಸ್ಮಾರಕವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ಪ್ರಧಾನಿ ಮೋದಿ ಸೇರಿ ಇಂದು ಲೋಕಾರ್ಪಣೆಗೊಳಿಸಿದರು.

‘ಸದೈವ ಅಟಲ್​’ ಸ್ಮಾರಕವನ್ನು ಕೇಂದ್ರ ಲೋಕೋಪಯೋಗಿ ಇಲಾಖೆ 10.51 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸುಮಾರು 1.5 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿದೆ. ಇದರ ವೆಚ್ಚವನ್ನು ಅಟಲ್​ ಮೆಮೋರಿಯಲ್​ ಟ್ರಸ್ಟ್​ ಭರಿಸಿದೆ.

ಬಿಜೆಪಿ ಹಿರಿಯರಾದ ಎಲ್​.ಕೆ.ಆಡ್ವಾಣಿ, ರವಿ ಶಂಕರ್​ ಪ್ರಸಾದ್​, ಜೆಪಿ ನಡ್ಡಾ, ಲೋಕಸಭಾ ಸ್ಪೀಕರ್​ ಸುಮಿತ್ರಾ ಮಹಾಜ್​ ಮತ್ತಿತರರು ಅಟಲ್​ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳಕ್ಕೆ ಆಗಮಿಸಿ ಗೌರವ ಸಲ್ಲಿಸಿದ್ದಾರೆ.

ವಾಜಪೇಯಿ ಅವರು ಆ.16ರಂದು ನಿಧನರಾಗಿದ್ದಾರೆ. ಅವರ ಸ್ಮಾರಕ ಸದೈವ ಅಟಲ್​ ನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿಸಿದ್ದು ವಿಶೇಷವೆನಿಸಿದೆ.