Monday, 12th November 2018  

Vijayavani

ಕಳಚಿತು ರಾಜಕೀಯ ರಂಗದ ಮತ್ತೊಂದು ಕೊಂಡಿ- ಬಾರದ ಲೋಕಕ್ಕೆ ಅನಂತ್ ಕುಮಾರ್ ಪಯಣ - ಶೋಕದ ಕಡಲಲ್ಲಿ ಬಿಜೆಪಿ ಪಾಳಯ        ಅಗಲಿದ ನಾಯಕನ ಅಂತಿಮ ದರ್ಶನ- ಇನ್ನು ಕೆಲವೇ ಹೊತ್ತಲ್ಲಿ ಬೆಂಗಳೂರಿಗೆ ಪ್ರಧಾನಿ ಆಗಮನ- ಅದಮ್ಯ ಚೇತನ ನೇತಾರನ ಗುಣಗಾನ        ನಾಳೆ ವೈದಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ- ಬೆಳಗ್ಗೆ 8ಗಂಟೆಯಿಂದ ಸಾರ್ವಜನಿಕ ದರ್ಶನ - ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳೋರಿಗಾಗಿ ವಿಶೇಷ ರೈಲು        ಜೈಲು ಹಕ್ಕಿಯಾಗಿರೋ ರೆಡ್ಡಿಗೆ ಸಿಗುತ್ತಾ ಜಾಮೀನು- ನಾಳೆ ನಡೆಯಲಿದೆ ಅರ್ಜಿ ವಿಚಾರಣೆ- ಪರಪ್ಪರ ಅಗ್ರಹಾರದಲ್ಲಿ ದಿನಕಳೆದ ನಾಯಕ        ಸಿಲಿಕಾನ್ ಸಿಟಿಯಲ್ಲಿ ಎದೆ ಝಲ್ಲೆನಿಸುವ ಘಟನೆ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು- ಡೆತ್​ನೋಟ್ ಬರೆದಿಟ್ಟು ಸೂಸೈಡ್        ಕಾರ್ತಿಕ ಮಾಸದ ಮೊದಲ ಸೋಮವಾರ- ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿಮೂರ್ತಿಗೆ ರುದ್ರಾಭಿಷೇಕ       
Breaking News

ಕರ್ನಾಟಕ ನಂಟು

Friday, 17.08.2018, 3:04 AM       No Comments

| ಡಿ.ಎಚ್. ಶಂಕರಮೂರ್ತಿ

ನನ್ನ ಮತ್ತು ವಾಜಪೇಯಿ ಅವರದು ನಾಲ್ಕು ದಶಕಗಳ ಒಡನಾಟ. ವಾಜಪೇಯಿ ಶಿವಮೊಗ್ಗಕ್ಕೆ ಬಂದಾಗಲೆಲ್ಲಾ ಉಳಿದುಕೊಳ್ಳುತ್ತಿದ್ದುದು ನನ್ನ ಮನೆಯಲ್ಲೆ.

ಅಟಲ್​ಜೀ ಬೆಂಗಳೂರಿಗೆ ಬಂದರೆ ನಾನು ಪಕ್ಕದಲ್ಲೇ ಇರಬೇಕಿತ್ತು. ಅದೇ ರೀತಿ ಶಂಕರಮೂರ್ತಿ ದೆಹಲಿಗೆ ಹೋದರೆ ವಾಜಪೇಯಿ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸದೇ ಹಿಂದಿರುಗುತ್ತಿರಲಿಲ್ಲ. ನಮ್ಮಿಬ್ಬರ ನಡುವೆ ಮಧುರವಾದ ಸಂಬಂಧ ಏರ್ಪಟ್ಟಿತ್ತು. ಕೆಲವೊಮ್ಮೆ ವಾರಗಟ್ಟಲೇ ಇಬ್ಬರೂ ಒಟ್ಟಿಗೇ ರಾಜ್ಯ ಪ್ರವಾಸ ಮಾಡಿದ್ದುಂಟು.

ಅದು 1983ರ ಅವಧಿ. ಆಗಷ್ಟೇ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಘೊಷಣೆಯಾಗಿತ್ತು. ಆಗಿನ್ನೂ ಬಿಜೆಪಿ ಅಂಬೆಗಾಲಿಡುತ್ತಿದ್ದ ಹಸುಗೂಸು. ಏನಾದರೂ ಮಾಡಿ ಕರ್ನಾಟಕದಲ್ಲಿ ಬಿಜೆಪಿಯನ್ನು ಪ್ರವರ್ಧಮಾನಕ್ಕೆ ತರಬೇಕೆಂಬ ಹಠಕ್ಕೆ ನಾವುಗಳು ಬಿದ್ದ ಕಾಲವದು.

ಅಂದಿಗಾಗಲೇ ಬಿಜೆಪಿಯನ್ನು ಬೆಳೆಸುವ ಹೊಣೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಗಲೇರಿತ್ತು. ಜನ ಅವರೆಡೆಗೊಂದು ಆಕರ್ಷಣೆ ಬೆಳೆಸಿಕೊಂಡಿದ್ದರು. ಈ ಎಲ್ಲ ಕಾರಣಗಳಿಂದ ವಾಜಪೇಯಿ ಅವರು ಚುನಾವಣೆಯಲ್ಲಿ ರಾಜ್ಯದೆಲ್ಲೆಡೆ ಪ್ರವಾಸ ಮಾಡಬೇಕು. ಪಕ್ಷಕ್ಕೆ ಸದೃಢವಾದ ಬುನಾದಿ ಹಾಕಬೇಕೆಂದು ನಾವೆಲ್ಲಾ ಬಯಸಿದೆವು. ಇದನ್ನು ಅಟಲ್​ಜೀ ಅವಗಾಹನೆಗೆ ತಂದಾಗ ಅವರೂ ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಿದರು. ಚಲೋ ಕರ್ನಾಟಕ್ ದೇಖೇಂಗೆ ಎಂದು ಪ್ರಚಾರಕ್ಕೆ ಇಳಿದೇಬಿಟ್ಟರು. ಅವರೊಂದಿಗೆ ಇಡೀ ರಾಜ್ಯ ಸುತ್ತುವ ಅವಕಾಶ ಲಭಿಸಿತು. ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಹೊಣೆ ನನ್ನ ಹೆಗಲೇರಿತು.

ನಾನು ಆಡ್ವಾಣಿ ಹಾಗೂ ಅಟಲ್​ಜೀ ಇಬ್ಬರ ಭಾಷಣಗಳನ್ನೂ ತರ್ಜುಮೆ ಮಾಡಿದ್ದೇನೆ. ಅಡ್ವಾಣಿಯವರ ಭಾಷಣಗಳು ಹೆಚ್ಚು ಅಂಕಿ-ಅಂಶಗಳಿಂದ ಕೂಡಿರುತ್ತಿದ್ದವು. ಕೆಲವೊಮ್ಮೆ ಅದನ್ನು ಕನ್ನಡೀಕರಿಸುವಾಗ ನಾನು ಸಾಕಷ್ಟು ಶ್ರಮ ವಹಿಸಬೇಕಿತ್ತು. ಆದರೆ ಅಟಲ್​ಜೀ ಭಾವಜೀವಿ. ಅವರು ಭಾಷಣದ ಮೂಲಕ ಭಾವನಾತ್ಮಕ ಸಂಗತಿಗಳನ್ನೇ ಹೇಳುತ್ತಿದ್ದರು. ಅದನ್ನು ತರ್ಜುಮೆ ಮಾಡುವುದೇ ನನಗೊಂದು ರೋಚಕ ಸಂಗತಿಯಾಗಿತ್ತು.

ವಾಜಪೇಯಿ ದಣಿವರಿಯದ ನಾಯಕ. ಪಕ್ಷದ ಉನ್ನತ ಸ್ಥಾನದಲ್ಲಿದ್ದರೂ ಅಹಮಿಕೆ ಅವರ ಬಳಿ ಸುಳಿಯಲೇ ಇಲ್ಲ. ಚಿಕ್ಕಪುಟ್ಟ ಊರುಗಳಲ್ಲೂ ಅವರು ಚುನಾವಣಾ ಭಾಷಣ ಮಾಡಿದ್ದಿದೆ. ಜನ ಐವತ್ತೇ ಇರಲಿ, ಐದು ಸಾವಿರವೇ ಇರಲಿ, ಭಾಷಣದ ವಿಷಯದಲ್ಲಿ ಅವರೆಂದೂ ತಾರತಮ್ಯ ಮಾಡಿದವರಲ್ಲ.

ಒಂದೇ ದಿನ 18 ಸಭೆ: ಆಗ ಇಂದಿನಂತೆ ಎಸಿ ಕಾರುಗಳಿರಲಿಲ್ಲ. ಹೆಲಿಕಾಪ್ಟರ್ ಬಳಕೆ ದೂರದ ಮಾತೇ ಸರಿ. ಇನ್ನು ನಮ್ಮ ಕಾರ್ಯಕರ್ತರ ಪಡೆಯೂ ಇಂದಿನಂತೆ ಬೃಹತ್ ಪ್ರಮಾಣದಲ್ಲಿರಲಿಲ್ಲ. ಆದರೆ ಅಟಲ್​ಜೀ ಎಂದೂ ಬೇಸರಿಸಿಕೊಳ್ಳಲಿಲ್ಲ. ಕರೆದಲ್ಲೆಲ್ಲಾ ಹೋಗಿ ತಮ್ಮ ವಾಗ್ಝರಿ ಹರಿಸಿದರು.

ಆಗ ನನ್ನ ಬಳಿ ಅಂಬಾಸಿಡರ್ ಕಾರೊಂದಿತ್ತು. ಅದರಲ್ಲೇ ಅಟಲ್​ಜೀ ರಾಜ್ಯ ಸುತ್ತಿದರು. ಹದಗೆಟ್ಟ ರಸ್ತೆಗಳಲ್ಲಿ ಪಯಣಿಸಿ ತೀರಾ ಆಯಾಸವಾದಾಗ ಕಾರಿನ ಹಿಂದಿನ ಸೀಟಿನಲ್ಲಿ ಸ್ವಲ್ಪ ನಿದ್ರಿಸುತ್ತಿದ್ದರು. ಸಭೆ ಸ್ಥಳ ಸಮೀಪಿಸುತ್ತಿದ್ದಂತೆ ಮುಖ ತೊಳೆದು ಮತ್ತೊಂದು ಭಾಷಣಕ್ಕೆ ಸಿದ್ಧರಾಗಿಬಿಡುತ್ತಿದ್ದರು. ಹೀಗೆ ಒಂದೇ ದಿನ 18 ಸಭೆಗಳಲ್ಲಿ ಅಟಲ್​ಜೀ ಮಾತನಾಡಿದ್ದರು! ನಿನ್ನ ಜತೆಗಿದ್ದರೆ ನನ್ನನ್ನು ಸಾಯಿಸಿಯೇಬಿಡುತ್ತೀಯ ಎಂದು ವಾಜಪೇಯಿ ಅದೊಂದು ದಿನ ನನ್ನ ಮೇಲೆ ಹುಸಿಕೋಪ ತೋರಿದ್ದರು. ಅವತ್ತು ನಾವು ಶಿರಸಿ ತಲುಪಿದಾಗ ರಾತ್ರಿ 1 ಗಂಟೆ. ಅಲ್ಲಿ 50-60 ಕಾರ್ಯಕರ್ತರ ಗುಂಪು ನಮಗಾಗಿ ಕಾಯುತ್ತಿತ್ತು. ಇಲ್ಲ ಅವರು ಭಾಷಣ ಮಾಡುವುದಿಲ್ಲ, ಸಾಕಷ್ಟು ದಣಿದಿದ್ದಾರೆ ಎಂದು ಕಾರ್ಯಕರ್ತರಿಗೆ ಹೇಳಿದೆ. ಅದನ್ನು ಅರ್ಥ ಮಾಡಿಕೊಂಡ ಅಟಲ್​ಜೀ, ಕಾರ್ಯಕರ್ತರಿಗೆ ಹಾಗೆ ಹೇಳಬಾರದು. ಅವರು ಪ್ರೀತಿಯಿಂದ ನಮಗಾಗಿ ಈ ರಾತ್ರಿಯಲ್ಲೂ ಕಾದಿದ್ದಾರೆ. ಅವರಿಗೇಕೆ ನಿರಾಸೆ ಮಾಡಬೇಕು. ನಡೀ ಭಾಷಣ ಮಾಡಿಯೇಬಿಡೋಣ ಎಂದು ದಣಿವನ್ನೂ ಮರೆತು ಭಾಷಣ ಆರಂಭ ಮಾಡಿಯೇಬಿಟ್ಟರು.

ಹಾಸನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಇದ್ದದ್ದು ಒಂದೇ ಮೈಕ್. ಅದೂ ಹಳೆಯದು. ಅದರಲ್ಲೇ ಅಟಲ್​ಜೀ ಭಾಷಣ ಮಾಡಬೇಕಿತ್ತು. ಅದೇ ಮೈಕ್​ನಲ್ಲಿ ನಾನು ತರ್ಜುಮೆ ಮಾಡಬೇಕಿತ್ತು. ಇದನ್ನು ನೋಡಿದವನೇ ನಾನು ಕಾರ್ಯಕರ್ತರ ಮೇಲೆ ಸಿಟ್ಟು ಮಾಡಿಕೊಂಡು ಒಂದೇ ಮೈಕ್​ನಲ್ಲಿ ಇಬ್ಬರೂ ಭಾಷಣ ಮಾಡುವುದು ಹೇಗೆ ಎಂದು ರೇಗಿದೆ. ಇದನ್ನು ಅರ್ಥ ಮಾಡಿಕೊಂಡ ವಾಜಪೇಯಿ, ಕಾರ್ಯಕರ್ತರ ಮೇಲೆ ಹಾಗೆಲ್ಲಾ ಸಿಟ್ಟು ಮಾಡಿಕೊಳ್ಳಬಾರದು. ಹೆಚ್ಚು ವ್ಯವಸ್ಥೆ ಮಾಡಲು ಅವರಿಗೆ ಹಣ ಬೇಕಲ್ಲ. ಅವರ ಕಷ್ಟವನ್ನು ನಾವೇ ಅರಿಯದಿದ್ದರೆ ಹೇಗೆ ಎಂದು ಹೇಳುವ ಮೂಲಕ ಹೃದಯವೈಶಾಲ್ಯ ಮೆರೆದಿದ್ದರು

ವಾಜಪೇಯಿ 1977-79ರಲ್ಲಿ ವಿದೇಶಾಂಗ ಸಚಿವರಾಗಿದ್ದಾಗಲೂ ಶಿವಮೊಗ್ಗಕ್ಕೆ ಬಂದಿದ್ದರು. ಶಿಷ್ಟಾಚಾರದ ಪ್ರಕಾರ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಅವರು ಉಳಿಯಬೇಕಿತ್ತು. ಆದರೆ ಅವರು ಬಂದಿದ್ದು ನಮ್ಮ ಮನೆಗೆ. ಆಗ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದ ಸಾಂಗ್ಲಿಯಾನ ವಿದೇಶಾಂಗ ಸಚಿವರ ಭದ್ರತೆಗೆ ವಿಶೇಷ ಕ್ರಮ ತೆಗೆದುಕೊಂಡಿದ್ದರು. ಅಟಲ್​ಜೀ ನಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತಾರೆ ಎಂದು ಸಾಂಗ್ಲಿಯಾನ ಅವರಿಗೆ ನಾನು ತಿಳಿಸಿದೆ. ಆದರೆ ಅದಕ್ಕೆ ಅವರು ಒಪ್ಪಲಿಲ್ಲ. ಶಿಷ್ಟಾಚಾರದ ಪ್ರಕಾರ ಅದು ಸಾಧ್ಯವಿಲ್ಲ ಎಂದರು. ಆದರೆ, ವಾಜಪೇಯಿ ಅವರೇ ನಾನಿದ್ದಲ್ಲಿಗೇ ಬಂದು ಘರ್ ಚಲೇಂಗೇ ಎಂದು ಕಾರಿನಲ್ಲಿ ಕುಳಿತೇಬಿಟ್ಟರು. ಸಾಂಗ್ಲಿಯಾನ ದಿಕ್ಕು ತೋಚದೆ ನಮ್ಮನ್ನು ಹಿಂಬಾಲಿಸಿದ್ದರು.

ಟೀ ಮಾಡಿದ್ದರು: ಬೆಳಗ್ಗೆ ತಾವೇ ಅಡುಗೆ ಮನೆಗೆ ಹೋಗಿ ಚಹಾ ಸಿದ್ಧಪಡಿಸಿಕೊಳ್ಳು ತ್ತಿದ್ದರು. ನನ್ನ ಶ್ರೀಮತಿ ಟೀ ಮಾಡಿಕೊಡಲು ಮುಂದಾದರೆ ನೀವು ಹೆಂಗಸರು ಸರಿಯಾಗಿ ಚಹಾ ಮಾಡುವುದಿಲ್ಲ, ಅದು ರುಚಿಯಾಗಿರುವುದಿಲ್ಲ. ಇವತ್ತು ನಿಮ್ಮ ಮನೆಯ ಎಲ್ಲರಿಗೂ ನಾನೇ ಚಹಾ ಮಾಡಿ ಕೊಡುತ್ತೇನೆ ಎಂದು ಸ್ಟೌ ಹಚ್ಚಿಯೇಬಿಟ್ಟರು. ಅವತ್ತು ಬೆಳಗ್ಗೆ ನಮಗೆಲ್ಲಾ ಟೀ ಮಾಡಿಕೊಟ್ಟದ್ದೇ ಅಟಲ್​ಜೀ.

(ಲೇಖಕರು ಬಿಜೆಪಿ ಹಿರಿಯ ನಾಯಕ)


ಜೋಗ ನೋಡಿ ಮಂತ್ರಮುಗ್ಧರಾಗಿದ್ದ ಅಟಲ್​ಜಿ

ಅದು 1968ರ ಅವಧಿ. ಆಗ ಶಿವಮೊಗ್ಗೆಗೆ ಬಂದಿದ್ದ ವಾಜಪೇಯಿ ಅವರನ್ನು ಜೋಗ ನೋಡಲೆಂದು ಕರೆದುಕೊಂಡು ಹೋಗಿದ್ದೆ. ನನ್ನ ಕಾರಿಗೆ ನಾನೇ ಚಾಲಕ. ಬೆಳಗ್ಗೆ 10ಕ್ಕೆ ಜೋಗ ಜಲಪಾತದ ಕೆಳಗೆ ತಲುಪಿದೆವು. ಅಟಲ್ ಜೀ ಮಂತ್ರ ಮುಗ್ಧರಾದರು. ಕೆಲ ಕಾಲ ನನ್ನೊಂದಿಗೆ ಮಾತನಾಡಬೇಡ ಎಂದವರೇ ಜಲಪಾತದ ನೀರಿನ ಸಿಂಚನವಾಗುವ ಬಂಡೆಯಲ್ಲಿ ಮಲಗಿಯೇ ಬಿಟ್ಟರು. ಅರ್ಧ ಗಂಟೆ ನಂತರ ಮೇಲೆದ್ದು ಸ್ನಾನ ಮಾಡಿದರು. ಯಾವುದೋ ಹಾಡು ಹೇಳಿಕೊಂಡು ಪುಟ್ಟ ಮಗುವಿನಂತೆ ಕುಣಿದಾಡಿಬಿಟ್ಟರು. ಮನ ತುಂಬಿ ಪ್ರಕೃತಿ ಸೌಂದರ್ಯ ಆರಾಧಿಸಿದರು. ನನಗೋ ಇಂಗ್ಲೀಷ್ ಬರುವುದಿಲ್ಲ. ಹರುಕು-ಮುರುಕು ಹಿಂದಿ ಮಾತಾಡುತ್ತಿದ್ದನಷ್ಟೇ. ವಾಜಪೇಯಿ ಜೋಗದ ಗುಂಡಿಗೆ ಇಳಿದು ಏನೇನೋ ಹೇಳುತ್ತಿದ್ದರು. ನಾನು ಅರ್ಥವಾಗದಿದ್ದರೂ ಜೊತೆ ನೀಡಿದೆ. ಆದರೆ ಮಧ್ಯಾಹ್ನದ ಬಿಸಿಲು ಏರತೊಡಗಿತು. ಜೋಗದ ಗುಂಡಿಯಿಂದ ಮೇಲೆ ಬರತೊಡಗಿದೆವು. ಇಬ್ಬರೂ ದೈತ್ಯದೇಹಿಗಳು, ತಲೆ ಮೇಲೆ ಸುಡುವ ಸೂರ್ಯ. ವಾಜಪೇಯಿ ಸಹ ಸಾಕಷ್ಟು ಬಳಲಿಬಿಟ್ಟರು. ಏಕ್, ದೋ, ತೀನ್,……ದಸ್, ಅಬ್ ಬಸ್ ಅಂತ ಹೇಳುತ್ತಾ ಪ್ರತಿ ಹತ್ತು ಮೆಟ್ಟಿಲೇರಿದ ನಂತರ ಕುಳಿತುಬಿಡುತ್ತಿದ್ದರು. ಸೆಕೆ ಹೆಚ್ಚಿದಂತೆ ಮೊದಲು ಅಂಗಿ, ನಂತರ ದೋತಿ ತೆಗೆದು ಬಿಟ್ಟರು. ನಾನೂ ಅವರನ್ನು ಅನುಕರಿಸ ತೊಡಗಿದೆ. ಸುಮಾರು ಒಂದೂವರೆ ಗಂಟೆ ನಂತರ ನಾವು ಮೇಲೇರಿದ್ದೆವು. ಆದರೆ ಆಗ ನಮ್ಮಿಬ್ಬರ ಮೈ ಮೇಲೆ ಇದ್ದ ವಸ್ತ್ರವೆಂದರೆ ಚಡ್ಡಿ ಮಾತ್ರ. ಆಗಿನ ಸಂದರ್ಭದಲ್ಲಿ ವಾಜಪೇಯಿ ಸಂಸದರಾಗಿದ್ದರು. ಆದರೆ ಸಾಮಾನ್ಯ ವ್ಯಕ್ತಿಯಂತೆ ಅವರು ನಡೆದುಕೊಂಡ ರೀತಿ ಇಂದಿಗೂ ಅವಿಸ್ಮರಣೀಯ.

| ಡಿ. ಎಚ್. ಸುಬ್ಬಣ್ಣ (ಡಿ. ಎಚ್. ಶಂಕರಮೂರ್ತಿ ಅವರ ಸಹೋದರ)

ಕೊಳ್ಳೆಗಾಲಕ್ಕೂ ಬಂದಿದ್ದರು

ಮಾಜಿ ಪ್ರಧಾನಿ ವಾಜಪೇಯಿ ಅವರ ಸ್ನೇಹದ ಬಳ್ಳಿ ಕೊಳ್ಳೇಗಾಲದವರೆಗೂ ಹಬ್ಬಿತ್ತು. ರಾಷ್ಟ್ರಮಟ್ಟದಲ್ಲಿ ಜನಸಂಘ, ನಂತರ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ವಾಜಪೇಯಿ ಅವರು, 1980-81ರಲ್ಲಿ ಪ್ರಚಾರಕ್ಕೆಂದು (ಅಂದಿನ) ಮೈಸೂರು ಜಿಲ್ಲೆಯ ಕೊಳ್ಳೇಗಾಲಕ್ಕೆ ಆಗಮಿಸಿದ್ದರು. ಪಟ್ಟಣದ ಕೇಶವ ತಂಪು ಪಾನೀಯ ಅಂಗಡಿ ಮಾಲೀಕ ಇನ್ನಾ ಶ್ರೀನಿವಾಸ್​ರಾವ್ ಮನೆಯಲ್ಲಿ ಊಟ ಮಾಡಿದ್ದರು. ಪ್ರಧಾನಿಯಾಗಿದ್ದಾಗ ತಮ್ಮಲ್ಲಿಗೆ ರಾವ್ ಅವರನ್ನು ಅಟಲ್ ಕರೆಸಿಕೊಂಡಿದ್ದರು. ರಾವ್ ಮನೆಯಲ್ಲಿರುವ ಹತ್ತಾರು ಫೋಟೋಗಳು ಅಟಲ್ ಅವರ ಸ್ನೇಹಪರತೆ, ಸರಳತೆಗೆ ಸಾಕ್ಷಿ.

ಚಪಾತಿ, ಲಿಮ್ಕಾ ಇಷ್ಟ

ಕೊಳ್ಳೇಗಾಲದ ಮಕ್ಕಳ ಮೈದಾನದ ಎದುರಿನ ಸುಬ್ಬು ಹೋಟೆಲ್ ಮಹಡಿ ಮೇಲೆ ನಿಂತು ರಾತ್ರಿ ಪ್ರಚಾರ ಭಾಷಣ ಮಾಡಿದ್ದರು. ನಂತರ ಶ್ರೀನಿವಾಸ್​ರಾವ್ ಅವರ ಮನೆಯಲ್ಲಿ ಚಪಾತಿ ಸೇವಿಸಿ ಒತ್ತಾಯದ ಮೇಲೆ ಸ್ವಲ್ಪವೇ ಅನ್ನ, ಸಾಂಬಾರು ಸೇವಿಸಿದ್ದರು. ಬಳಿಕ ತುಂಬ ಇಷ್ಟದ ಲಿಮ್ಕಾ ತಂಪು ಪಾನೀಯ ಕುಡಿದಿದ್ದರು.

ಬಿಬಿ ಶಿವಪ್ಪ ಕಾರಿನಲ್ಲಿ ರಾಜ್ಯ ಸುತ್ತಿದ್ದ ವಾಜಪೇಯಿ

ಬಿಜೆಪಿಯ ಹಿರಿಯ ನಾಯಕರಾಗಿದ್ದ ಬಿ.ಬಿ.ಶಿವಪ್ಪ ಅವರೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವಿನಾವಭಾವ ಸಂಬಂಧ ಹೊಂದಿದ್ದರು. ಎಂಬತ್ತರ ದಶಕದ ಕಾಲ ಘಟ್ಟ. ಆಗಿನ್ನು ಬಿಜೆಪಿ ಬಲಿಷ್ಠವಾಗಿರಲಿಲ್ಲ. ರಾಜ್ಯದಲ್ಲಿ ಬೇರೂರುವ ಸಮಯ. ಗ್ರಾಮ ಮಟ್ಟದಲ್ಲಿಯೂ ಪಕ್ಷವನ್ನು ಸಂಘಟನೆ ಮಾಡಬೇಕು ಎಂದು ಪಣ ತೊಟ್ಟು ಹೊರಟ ಶಿವಪ್ಪ ಅವರಿಗೆ ಅಂದು ಬೆನ್ನು ತಟ್ಟಿ ಸಾಥ್ ನೀಡಿದ್ದು ಒಬ್ಬರು ವಾಜಪೇಯಿ ಮತ್ತೊಬ್ಬರು ಎಲ್.ಕೆ.ಅಡ್ವಾಣಿ. ಪಕ್ಷಕ್ಕೆ ಆಗ ಕಾರಿನ ಸೌಕರ್ಯವೂ ಇರಲಿಲ್ಲ. ಕಾಫಿ ಎಸ್ಟೇಟ್ ಮಾಲೀಕರಾಗಿದ್ದ ಬಿ.ಬಿ.ಶಿವಪ್ಪ ಅವರು ತಮ್ಮ ಸ್ವಂತ ಕಾರಿನಲ್ಲಿಯೇ ಪಕ್ಷ ಸಂಘಟನೆಗಾಗಿ ಸುತ್ತಾಟ ನಡೆಸುತ್ತಿದ್ದರು. ವಾಜಪೇಯಿ ಮತ್ತು ಅಡ್ವಾಣಿ ಅವರು ರಾಜ್ಯಕ್ಕೆ ಬಂದಾಗ ಎಷ್ಟೋ ಬಾರಿ ಶಿವಪ್ಪನವರೇ ಅವರಿಗೆ ಸಾರಥಿ. ಶಿವಪ್ಪ ಕಾರಿನಲ್ಲಿಯೇ ರಾಜ್ಯದಲ್ಲಿ ಆಗ ಪ್ರವಾಸ ಮಾಡಿದ್ದು ವಿಶೇಷ. ವಾಜಪೇಯಿ ಮತ್ತು ಅಡ್ವಾಣಿ ಅವರಂತ ಮೇರು ವ್ಯಕ್ತಿತ್ವದ ನಾಯಕರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಪ್ರವಾಸ ಮಾಡಿದ್ದು ನನ್ನ ಪಾಲಿನ ಸೌಭಾಗ್ಯ ಎಂದು ಬಿಬಿ ಶಿವಪ್ಪ ಅವರು ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು. ಕಾಕತಾಳೀಯ ಎಂದರೆ, ಬಿಬಿ ಶಿವಪ್ಪ ಅವರು ನಿಧನರಾಗಿ ವರ್ಷ ತುಂಬಿದ ಹೊತ್ತಿನಲ್ಲಿಯೇ ವಾಜಪೇಯಿ ನಿಧನವಾಗಿದ್ದಾರೆ.

ವಾಜಪೇಯಿ ಸೋಲಿಗೆ ಆತ್ಮಹತ್ಯೆ

1984ರ ಚುನಾವಣೆಯಲ್ಲಿ ಅಟಲ್​ಜೀ ಸೋಲು ಅನುಭವಿಸಿದ್ದರು. ಆ ನೋವಿನಿಂದ ಭದ್ರಾವತಿಯ ಲಕ್ಷ್ಮೀನಾರಾಯಣ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದ. ಈ ವಿಷಯ ಅಟಲ್​ಜೀಗೆ ತಿಳಿಯುತ್ತಿದ್ದಂತೆ ಭದ್ರಾವತಿಗೆ ಧಾವಿಸಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಲಕ್ಷ್ಮೀನಾರಾಯಣನ ತಂದೆಯನ್ನು ತಬ್ಬಿಕೊಂಡು ಅತ್ತುಬಿಟ್ಟರು. ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ತಮ್ಮ ಬಳಿಯಿದ್ದ ಹಣವನ್ನೂ ಸೇರಿಸಿ ಬ್ಯಾಂಕ್​ನಲ್ಲಿ ಡಿಪಾಸಿಟ್ ಮಾಡಿ ನಿಶ್ಚಿತ ರೂಪದ ಬಡ್ಡಿ ಹಣ ಬರುವ ವ್ಯವಸ್ಥೆ ಮಾಡಿಯೇ ಅವರು ಭದ್ರಾವತಿಯಿಂದ ತೆರಳಿದ್ದರು.

ನಾಡಿನ ಮಠಗಳೊಂದಿಗೆ ನಂಟು

ನಾಡಿನ ಮಠಗಳ ಜೊತೆಗೂ ಅಟಲ್​ಜೀ ಅವರಿಗೆ ಭಾವನಾತ್ಮಕ ನಂಟು. ಉಡುಪಿ ಶ್ರೀಕೃಷ್ಣ ಮಠ, ಶೃಂಗೇರಿ ಮಠಕ್ಕೆ ಬಹಳ ಹಿಂದೆಯೇ ಭೇಟಿ ನೀಡಿ ಭಕ್ತಿಯಿಂದ ಪೂಜೆ ಸಲ್ಲಿಸಿ, ಸ್ವಾಮೀಜಿ ಆಶೀರ್ವಾದ ಪಡೆದುಕೊಂಡಿದ್ದರು. ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮೈಸೂರಿನ ಸುತ್ತೂರು ಮಠಕ್ಕೂ ಭೇಟಿ ನೀಡಿದ್ದ ವಾಜಪೇಯಿ ಅವರು, ಸ್ವಾಮೀಜಿಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. 1999ರ ಜ.3ರಂದು ತುಮಕೂರು ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ವೇದ ಮತ್ತು ಸಂಸ್ಕೃತ ಪಾಠಶಾಲೆಯ 83ನೇ ಸಂಸ್ಕೃತೋತ್ಸವದಲ್ಲಿ ಭಾಗಿಯಾಗಿದ್ದ ವಾಜಪೇಯಿಯವರು, ಡಾ. ಶಿವಕುಮಾರ ಸ್ವಾಮೀಜಿ ಅವರ ಉತ್ಸಾಹವನ್ನು ಕಂಡು ಮೂಕವಿಸ್ಮಿತರಾಗಿದ್ದರು. ಡಾ.ಶಿವಕುಮಾರ ಸ್ವಾಮೀಜಿ ಅವರಲ್ಲಿ ಅಜಾತಶತ್ರು, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಅಪಾರ ಭಕ್ತಿ, ಗೌರವ ಹೊಂದಿದ್ದರು. ಅಲ್ಲದೆ ಮಠದೊಂದಿಗೆ ಉತ್ತಮ ಬಾಂಧವ್ಯವಿತ್ತು.

ಶಿರಸಿ ಮೆಚ್ಚಿದ್ದರು ಅಟಲ್

ಶಿರಸಿಯ ಹಸಿರ ಬಗ್ಗೆ ವಾಜಪೇಯಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. 1972ರ ಅವಧಿಯಲ್ಲಿ ಸ್ವರ್ಣವಲ್ಲೀ ಸಂಸ್ಥಾನಕ್ಕೆ ಭೇಟಿ ನೀಡಿದ್ದ ವಾಜಪೇಯಿ, ಸ್ವಾತಂತ್ರ್ಯ ಹೋರಾಟಗಾರ ಕಾಶೀನಾಥ ಮೂಡಿ ಅವರ ಮನೆಗೆ ಭೇಟಿ ನೀಡಿದ್ದರು. ಜನನಾಯಕನಾಗಿ ಸ್ವಲ್ಪವೂ ಗರ್ವ ತೋರದೆ ಮನೆಯ ನೆಂಟನಂತೆ ಸರಳತೆಯಿಂದಲೇ ವಾಜಪೇಯಿ ಅವರು ಉಪಾಹಾರ ಸೇವಿಸಿದ್ದರು ಎನ್ನುತ್ತಾರೆ ಕಾಶೀನಾಥ ಮೂಡಿ. ಆರ್​ಎಸ್​ಎಸ್ ನೇತಾರ ಮಾಧವರಾವ ಸದಾಶಿವರಾವ್ ಗೋಳವಲ್ಕರ್ (ಗುರೂಜಿ) ಆಯುರ್ವೆದ ಚಿಕಿತ್ಸೆಗಾಗಿ ಶಿರಸಿಗೆ ಬಂದಿದ್ದ ವೇಳೆಯಲ್ಲಿ ಸತತ 37 ದಿನ ಕಾಶೀನಾಥರ ಮನೆಯಲ್ಲಿಯೇ ವಾಸ್ತವ್ಯ ಮಾಡಿದ್ದನ್ನು ತಿಳಿದುಕೊಂಡ ವಾಜಪೇಯಿ ‘ಯೇ ಪವಿತ್ರ ಘರ್ ಹೈ. ಆಜ್ ಹಮ್ ಕೋಭೀ ಮೌಕಾ ಮಿಲಾ’ ಎಂದು ಹೇಳಿದ್ದನ್ನು ಕಾಶೀನಾಥ ಮೂಡಿ ನೆನಪಿಸಿಕೊಳ್ಳುತ್ತಾರೆ.

ತ್ರಿಮೂರ್ತಿಗಳ ಸ್ನೇಹಜೀವ

ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿಯ ಉಕ್ಕಿನ ಮನುಷ್ಯ ಎಲ್.ಕೆ. ಅಡ್ವಾಣಿ ಮತ್ತು ಭೈರೋನ್ ಸಿಂಗ್ ಶೆಖಾವತ್ ನಡುವಿನ ಗೆಳೆತನದ ನಂಟು ನಿಜಕ್ಕೂ ಎಲ್ಲರಿಗೂ ಮಾದರಿ. 50 ವರ್ಷಗಳಿಗಿಂತಲೂ ಹೆಚ್ಚಾಗಿ ಈ ಮೂವರೂ ಆತ್ಮೀಯರಾಗಿದ್ದರು. ಮೂವರೂ ಸಾರ್ವಜನಿಕ ಬದುಕಿನಲ್ಲಿದ್ದರೂ, ರಾಜಕೀಯವಾಗಿ ಸಾಕಷ್ಟು ಮೇಲ್ಮಟ್ಟಕ್ಕೇರಿದ್ದರೂ ಎಂದಿಗೂ ಒಬ್ಬರ ಕಾಲನ್ನೊಬ್ಬರು ಎಳೆಯಲು ಪ್ರಯತ್ನಿಸಲಿಲ್ಲ. ಬದಲಿಗೆ ಪರಸ್ಪರ ಹೆಗಲು ಕೊಟ್ಟು ತಮ್ಮ ಸ್ನೇಹವೇ ಸತ್ಯ, ಉಳಿದದ್ದೆಲ್ಲ ಮಿಥ್ಯ ಎಂಬುದನ್ನು ಸಾಬೀತುಪಡಿಸಿದ್ದರು. ಈ ಮೂವರ ಗೆಳೆತನಕ್ಕೆ ಪೂರಕವಾಗಿರುವಂಥ ಎರಡು ಭಾವಚಿತ್ರ ಇಂದಿಗೂ ಇತಿಹಾಸದಲ್ಲಿ ದಾಖಲಾಗಿವೆೆ. ಐವತ್ತು ವರ್ಷಗಳ ಹಿಂದಿನ ಹಾಗೂ ಐವತ್ತು ವರ್ಷದ ನಂತರ ತೆಗೆಸಿಕೊಂಡ ಚಿತ್ರಕ್ಕೆ ಎಲ್ಲಿಲ್ಲದ ಮಹತ್ವವಿದೆ. ಈ ಚಿತ್ರವನ್ನು ಆಡ್ವಾಣಿಯವರು ತಮ್ಮ ಆತ್ಮಕಥೆಯ ಪುಸ್ತಕದಲ್ಲಿಯೂ ಪ್ರಕಟಿಸಿದ್ದಾರೆ. ಇದಕ್ಕಾಗಿಯೇ ಪ್ರತ್ಯೇಕ ಅಧ್ಯಾಯವೊಂದನ್ನೂ ಮೀಸಲಿಟ್ಟಿದ್ದಾರೆ.

ಅಂಬಾಸಿಡರ್ ಕಾರು ಫೇವರಿಟ್

1983ರ ಸಮಯ. ವಾಜಪೇಯಿ ಅವರನ್ನು ತಮ್ಮ ಹೊಸ ಮಾರುತಿ ಕಾರಲ್ಲೇ ಕರೆದೊಯ್ಯಬೇಕೆಂಬ ಹಂಬಲ ವಿ.ಎಸ್. ಆಚಾರ್ಯ ಅವರಿಗೆ. ಆದರೆ, ತಾನು ಈ ಕಾರಲ್ಲಿ ಪ್ರಯಾಣಿಸುವುದು ಹೇಗೆಂಬ ಚಿಂತೆ ಅಟಲ್​ಜೀ ಅವರದ್ದು. ಕೊನೆಗೆ ಶಿವಮೊಗ್ಗದಿಂದ ತೀರ್ಥಹಳ್ಳಿವರೆಗೆ ಆಚಾರ್ಯರ ಜತೆ ಪಯಣಿಸಿದ ಅಟಲ್, ನಂತರ ಅಂಬಾಸಿಡರ್ ಕಾರಿನಲ್ಲೇ ಉಡುಪಿವರೆಗೂ ಬಂದರು. ಆಚಾರ್ಯರ ಮನೆಯಲ್ಲಿ ವಾಜಪೇಯಿ ಪಯಣಿಸಿದ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ‘ವಾಜಪೇಯಿ ಕಾರು’ ಎಂದೇ ಪ್ರಸಿದ್ಧ ಎಂದು ಸ್ಮರಿಸಿದರು ಶಂಕರಮೂರ್ತಿ.

Leave a Reply

Your email address will not be published. Required fields are marked *

Back To Top