Friday, 16th November 2018  

Vijayavani

Breaking News

ಸಂಕೇಶ್ವರ ಪರ ಪ್ರಚಾರ ಮಾಡಿದ್ದ ವಾಜಪೇಯಿ

Friday, 17.08.2018, 3:04 AM       No Comments

ಧಾರವಾಡ ಲೋಕಸಭೆ ಕ್ಷೇತ್ರ ಕಾಂಗ್ರೆಸ್​ನ ಭದ್ರ ಕೋಟೆಯಾಗಿತ್ತು. 1996ರ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಡಾ. ವಿಜಯ ಸಂಕೇಶ್ವರ ಅವರಿಗೆ ಟಿಕೆಟ್ ನೀಡಿದ್ದರು. ಸಂಕೇಶ್ವರ ಅವರ ಪರವಾಗಿ ಪ್ರಚಾರಕ್ಕೆ ಸ್ವತಃ ವಾಜಪೇಯಿ ಅವರು ಆಗಮಿಸಿದ್ದರು.

ಹುಬ್ಬಳ್ಳಿ ನೆಹರು ಮೈದಾನದಲ್ಲಿ ಬೃಹತ್ ಪ್ರಚಾರ ಸಭೆ ಏರ್ಪಾಟಾಗಿತ್ತು. ಲಕ್ಷಗಟ್ಟಲೇ ಜನ ಸೇರಿದ್ದರು. ಮೈದಾನ ಸಾಲದೇ ಸುತ್ತಲಿನ ರಸ್ತೆ, ಕಟ್ಟಡಗಳ ಮೇಲೆಲ್ಲ ಜನರು ನಿಂತು ವಾಜಪೇಯಿ ಅವರ ಭಾಷಣ ಕೇಳಿದ್ದರು. ಎಂದಿನಂತೆಯೇ ತಮ್ಮ ಭಾಷಣದಲ್ಲಿ, ದೇಶದಲ್ಲಿ ಸರ್ಕಾರ ಬದಲಿಸುವ ಅನಿವಾರ್ಯತೆ ಇದೆ ಎನ್ನುವುದನ್ನು ಮನ ಮುಟ್ಟುವಂತೆ ವಿವರಿಸಿದ್ದರು. ಧಾರವಾಡ ಲೋಕಸಭೆ ಕ್ಷೇತ್ರದ ಕುರಿತು ವಿಶೇಷವಾಗಿ ಪ್ರಸ್ತಾಪಿಸಿದ್ದರು. ನಿಮ್ಮ ಧ್ವನಿ ಇದುವರೆಗೆ ಸಂಸತ್ತಿನಲ್ಲಿ ಕೇಳಿದ್ದೇ ಇಲ್ಲ. ಇನ್ನು ಹೀಗಾಗಬಾರದು. ಕೈ-ಬಾಯಿ ಸ್ವಚ್ಛ ಇಟ್ಟುಕೊಂಡವರು ಜನಪ್ರತಿನಿಧಿಯಾಗಬೇಕು. ಅಂಥ ವ್ಯಕ್ತಿತ್ವದ ವಿಜಯ ಸಂಕೇಶ್ವರ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ. ನಿಮ್ಮ ಧ್ವನಿ ಸಂಸತ್ತಿನಲ್ಲಿ ಕೇಳಬೇಕೆಂದರೆ ಅವರನ್ನು ಬಹುಮತದಿಂದ ಗೆಲ್ಲಿಸಿ ಎಂದು ಪಕ್ಕದಲ್ಲೇ ಆಸೀನರಾಗಿದ್ದ ಅಭ್ಯರ್ಥಿ ವಿಜಯ ಸಂಕೇಶ್ವರ ಅವರನ್ನು ತೋರಿಸಿ ಹೇಳಿದ್ದರು. ಇವರನ್ನು ಸಂಸತ್ತಿಗೆ ಕಳುಹಿಸಿಕೊಡಿ, ಕಾಂಗ್ರೆಸ್ ಕೋಟೆ ಛಿದ್ರಗೊಳಿಸಿ ಎಂದು ಕರೆ ನೀಡಿದ್ದರು. ಕಿವಿಗಡಚಿಕ್ಕುವಂಥ ಕರತಾಡನದ ಮೂಲಕ ಬೃಹತ್ ಸಭೆ ಅವರ ಕರೆಗೆ ಸ್ಪಂದಿಸಿತ್ತು.

ಅದುವರೆಗೆ ಪ್ರತಿ ಸಲವೂ ಗೆಲ್ಲುತ್ತ ಧಾರವಾಡ ಕ್ಷೇತ್ರವನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದ ಕಾಂಗ್ರೆಸ್ ಪಕ್ಷ ಆ ಚುನಾವಣೆಯಲ್ಲಿ ಛಿದ್ರಗೊಂಡಿತು. ಬಿಜೆಪಿ ವಿಜಯಪತಾಕೆ ಹಾರಿಸಿತು. ಮುಂದೆ 1998, 1999ರ ಚುನಾವಣೆಯಲ್ಲೂ ವಿಜಯ ಸಂಕೇಶ್ವರ ಅವರೇ ಗೆದ್ದುಬಂದರು. ವಾಜಪೇಯಿ ಅವರು ಹೇಳಿದ್ದಂತೆ ಸಂಸತ್ತಿನಲ್ಲಿ ಧಾರವಾಡ ಕ್ಷೇತ್ರದ ಧ್ವನಿ ಮೊಳಗಿಸಿ, ನೈಋತ್ಯ ರೈಲ್ವೆ ವಲಯ ಕಚೇರಿ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ನೈಋತ್ಯ ರೈಲ್ವೆ ವಾಜಪೇಯಿ ಕೊಡುಗೆ

ಬೆಂಗಳೂರಿನಲ್ಲಿ ನೈಋತ್ಯ ರೈಲ್ವೆ ವಲಯ ಕಚೇರಿ ನಿರ್ಮಾಣ ಆರಂಭವಾಗಿತ್ತು. ಅದು ಹುಬ್ಬಳ್ಳಿಯಲ್ಲೇ ಸ್ಥಾಪನೆಯಾಗಬೇಕು ಎಂಬುದು ಮೂರು ದಶಕದ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಆಗ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರು ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರಕ್ಕೆ 50 ಕೋಟಿ ರೂ. ಮಂಜೂರಿ ಮಾಡಿ, ವಲಯ ಕಚೇರಿಯನ್ನು ಬೆಂಗಳೂರಿಗೆ ನೀಡಿದ್ದರು. ಅಷ್ಟೆಲ್ಲ ಆದರೂ ಆ ಕಚೇರಿ ಹುಬ್ಬಳ್ಳಿಯಲ್ಲೇ ಸ್ಥಾಪನೆಯಾಯಿತು. ವಾಜಪೇಯಿ ಅವರೇನಾದರೂ ಪ್ರಧಾನಿಯಾಗದೇ ಇದ್ದಲ್ಲಿ ಇದು ಖಂಡಿತ ಸಾಧ್ಯವಾಗುತ್ತಿರಲಿಲ್ಲ! ಹೌದು, ಅಂದು ಸಂಸದರಾಗಿದ್ದ ಡಾ. ವಿಜಯ ಸಂಕೇಶ್ವರ ಸೇರಿದಂತೆ ಹಲವು ಮುಖಂಡರ ಮನವಿ ಮೇರೆಗೆ ವಾಜಪೇಯಿ ಅವರು ಹುಬ್ಬಳ್ಳಿಯಲ್ಲಿ ನೈಋತ್ಯ ವಲಯ ಕಚೇರಿ ಸ್ಥಾಪನೆಯಾಗಬೇಕು ಎಂದಾಗ, ಬೆಂಗಳೂರಿನಲ್ಲಿ ಈಗಾಗಲೇ ಕೆಲಸ ಆರಂಭವಾಗಿದೆ ಎಂದು ಅಧಿಕಾರಿಗಳು ಅಸಹಕಾರ ತೋರಿದ್ದರಂತೆ. ಆದರೆ, ಜನರ ಬೇಡಿಕೆಗೆ ತಕ್ಕಂತೆ ಕೆಲಸವಾದಾಗ ಮಾತ್ರ ಅದು ಪ್ರಜಾಪ್ರಭುತ್ವ ಎಂಬ ಕಾರಣದಿಂದ ವಾಜಪೇಯಿ ಅವರು ಹುಬ್ಬಳ್ಳಿಗೆ ವಲಯ ಕಚೇರಿ ಮಂಜೂರಿ ಮಾಡಿದರು. ಅಷ್ಟೇ ಅಲ್ಲ; ತಾನೇ ಉದ್ಘಾಟನೆಗೆ ಬರುವವನಿದ್ದೇನೆ ಎಂದು ಹೇಳಿ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡುವಂತೆ ನೋಡಿಕೊಂಡಿದ್ದರು. ಸ್ವತಃ ಬಂದು ಉದ್ಘಾಟನೆಯನ್ನೂ ನೆರವೇರಿಸಿದರು.

ಹೈಕೋರ್ಟ್ ಪೀಠ…

ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ದೊಡ್ಡ ಹೋರಾಟವೇ ನಡೆದಿತ್ತು. ಡಾ. ವಿಜಯ ಸಂಕೇಶ್ವರ ಅವರ ನೇತೃತ್ವದಲ್ಲಿ ಇಲ್ಲಿಯ ಮುಖಂಡರು ವಾಜಪೇಯಿ ಅವರನ್ನು ಭೇಟಿ ಮಾಡಿದ್ದರು. ವಾಜಪೇಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಲ್ಲದೇ, ನ್ಯಾಯಾಂಗದ ವಿಕೇಂದ್ರೀಕರಣ ಕುರಿತು ಸಂಸತ್ತಿನಲ್ಲಿ ಪ್ರತಿಪಾದಿಸಿದ್ದರು.

ಕೈಗಾಕ್ಕೆ ಭೇಟಿ: ಕೈಗಾ ಅಣುಶಕ್ತಿ ಕೇಂದ್ರದ ಎರಡನೇ ಘಟಕವನ್ನು ಉದ್ಘಾಟಿಸಿದವರು ವಾಜಪೇಯಿ ಅವರೇ. ವಿಶೇಷ ಎಂದರೆ, ಕೈಗಾ ಸ್ಥಾವರದ ಮೊದಲ ಘಟಕಕ್ಕಿಂತ ಎರಡನೇ ಘಟಕ ಮೊದಲು ಪೂರ್ಣಗೊಂಡಿತ್ತು. ಹೀಗಾಗಿ, ರಾಜ್ಯದ ಮೊದಲ ಅಣುವಿದ್ಯುತ್ ಕೇಂದ್ರವನ್ನು ಉದ್ಘಾಟಿಸಿದ ಖ್ಯಾತಿ ಸಹ ವಾಜಪೇಯಿ ಅವರಿಗೆ ಸಲ್ಲುತ್ತದೆ.

ಪುಣೆ ಬೆಂಗಳೂರು ಹೆದ್ದಾರಿ

ಹುಬ್ಬಳ್ಳಿ ಮೂಲಕ ಹಾದು ಹೋಗಿರುವ ಪುಣೆ- ಬೆಂಗಳೂರು ಹೆದ್ದಾರಿ ಸುವರ್ಣ ಚತುಷ್ಕೋನ ಮಾರ್ಗವಾಗಿ ಪರಿವರ್ತನೆಗೊಂಡಿದ್ದು ಸಹ ವಾಜಪೇಯಿಯವರಿಂದಲೇ. ಅದು ಎಷ್ಟರ ಮಟ್ಟಿಗೆ ಜನಪ್ರಿಯವಾಗಿದೆ ಎಂದರೆ ಇಂದಿಗೂ ಹಲವರು ಅದನ್ನು ವಾಜಪೇಯಿ ರಸ್ತೆ ಎಂದೇ ಕರೆಯುತ್ತಾರೆ! ರಾಜ್ಯದ ಬಯಲುಸೀಮೆ ಮತ್ತು ಕರಾವಳಿಯನ್ನು ಸಂರ್ಪಸುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ವಣಕ್ಕೆ ಮಂಜೂರಿ ನೀಡಿದವರು, ಶಂಕುಸ್ಥಾಪನೆ ನೆರವೇರಿಸಿದವರು ವಾಜಪೇಯಿ ಅವರೇ.

ಓಂ ಭೂರ್ಭವಃ ಸ್ವಃ…

ಶಿರಸಿಯ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕೋಟಿ ಗಾಯತ್ರಿ ಜಪಯಜ್ಞ ಹಮ್ಮಿಕೊಂಡಿದ್ದರು. ಅದರ ಸಮಾರೋಪಕ್ಕೆ ವಾಜಪೇಯಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಬರುವುದು ಖಚಿತವಾಗಿರಲಿಲ್ಲ. ಆಗಿನ್ನೂ ಅವರು ಪ್ರಧಾನಿಯಾಗಿರಲಿಲ್ಲ. ಸ್ವರ್ಣವಲ್ಲೀ ಮಠದಲ್ಲಿ ಸಮಾರೋಪ ಸಮಾರಂಭ ನಡೆದಿದ್ದಾಗ ದಿಢೀರ್ ಎಂದು ವಾಜಪೇಯಿ ಅವರು ಆಗಮಿಸಿದರು. ವೇದಿಕೆ ಏರುತ್ತಿದ್ದಂತೆಯೇ ಅವರು ದೊಡ್ಡದಾಗಿ ಗಾಯತ್ರಿ ಮಂತ್ರ ಜಪಿಸುವುದರೊಂದಿಗೆ, ಸೇರಿದ್ದ ಹಲವು ಸಾವಿರ ಜನರ ಗಮನ ಸೆಳೆದಿದ್ದರು.

Leave a Reply

Your email address will not be published. Required fields are marked *

Back To Top