More

    ಬೆಳಗಾವಿ: ಕ್ಲಬ್‌ನಲ್ಲಿ ಪೊಲೀಸ್ ದರ್ಬಾರ್!

    | ರಾಯಣ್ಣ ಆರ್.ಸಿ. ಬೆಳಗಾವಿ

    ಬೆಳಗಾವಿ ಬ್ರಿಟಿಷ್ ಆಡಳಿತಾವಧಿಯಲ್ಲಿ (122 ವರ್ಷಗಳ ಹಿಂದೆ) ಸ್ಥಾಪನೆಯಾಗಿರುವ ಹಾಗೂ ಉತ್ತರ ಕರ್ನಾಟಕದಲ್ಲಿಯೇ ಹಳೆಯದಾದ ಪ್ರತಿಷ್ಠಿತ ‘ಬೆಳಗಾವಿ ಕ್ಲಬ್’ನಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಚುನಾವಣೆ ನಡೆಸುತ್ತಿಲ್ಲ. ಇದರಿಂದ ಅಲ್ಲಿನ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದ್ದು, ಅಲ್ಲೀಗ ಪೊಲೀಸ್ ಅಧಿಕಾರಿಗಳ ‘ದರ್ಬಾರ್’ ನಡೆಯುತ್ತಿದೆ.

    10-15 ವರ್ಷಗಳಿಂದ ಪ್ರತಿ ಅಡಿಟ್ ಆಗುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ತಳಹದಿ ಮೇಲೆ ಬೆಳಗಾವಿ ಕ್ಲಬ್ ನ ಬೈಲಾ ಪ್ರಕಾರ ಚುನಾವಣೆ ನಡೆಸಬೇಕಿತ್ತು. ಇದರ ಅರಿವಿದ್ದರೂ ಹಿರಿಯ ಪೊಲೀಸ್ ಅಧಿಕಾರಿಗಳು ಬೆಳಗಾವಿ ಕ್ಲಬ್ ಮೇಲೆ ತಮ್ಮದೇ ಆದ ಹಿಡಿತ ಹೊಂದಿರುವುದಕ್ಕೆ ಹಿರಿಯ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟೇಅಲ್ಲ, ಈ ವಿಚಾರವೀಗ ಕೋರ್ಟ್ ಮೇಟ್ಟಿಲನ್ನೂ ಏರಿದೆ.
    1898 ರಲ್ಲಿ ಸ್ಥಾಪನೆ: ಬೆಳಗಾವಿಯು ಮುಂಬೈ ಪ್ರಾಂತ್ಯದಲ್ಲಿದ್ದ ವೇಳೆ ಮುಂಬೈ ಚಾರಿಟೇಬಲ್ ಆ್ಯಕ್ಟ್ ಪ್ರಕಾರ 1898ರಲ್ಲಿ ಈ ಕ್ಲಬ್ ಸ್ಥಾಪನೆಯಾಗಿದೆ. ಅಂದು ವಿಭಾಗೀಯ ಅಧಿಕಾರಿಗಳು ಕ್ಲಬ್‌ನ ಅಧ್ಯಕ್ಷರಾಗಿರುತ್ತಿದ್ದರು. ಬೆಳಗಾವಿಯ ಉದ್ಯಮಿಗಳು, ವರ್ತಕರು, ವೈದ್ಯರ ಪರವಾಗಿ ನಾಗರಿಕರೊಬ್ಬರು ಉಪಾಧ್ಯಕ್ಷರಾಗಿ ರುತ್ತಿದ್ದರು. ಸ್ವಾತಂತ್ರೃದ ಬಳಿಕ ಸಹಕಾರ ಇಲಾಖೆ ನಿಯಮಾವಳಿ ಪ್ರಕಾರ ಈ ಕ್ಲಬ್ ಕಾರ್ಯನಿರ್ವಹಿಸುವಂತಾಯಿತು. ನಿಯಮಾವಳಿಯಂತೆ ಕಾಲಕ್ಕೆ ಸರಿಯಾಗಿ ಅಡಿಟ್ ಆಗಬೇಕು, ಸದಸ್ಯರ ಸಮ್ಮುಖದಲ್ಲಿ ಸಾಮಾನ್ಯ ಸಭೆ ಕರೆದು, ಚುನಾವಣೆ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಬೇಕಿತ್ತು. ಆದರೆ ಅನೇಕ ವರ್ಷಗಳಿಂದ ‘ಬೆಳಗಾವಿ ಕ್ಲಬ್’ಗೆ ಚುನಾವಣೆಯೇ ನಡೆದಿಲ್ಲ.

    ನ್ಯಾಯಾಲಯದ ಮೊರೆ: ಸರಿಯಾಗಿ ಅಡಿಟ್ ನಡೆಯುತ್ತಿಲ್ಲ ಎಂದು ಆರೋಪಿಸಿ, ಬೆಳಗಾವಿ ಕ್ಲಬ್‌ನ ನಾಲ್ಕೈದು ಹಿರಿಯ ಸದಸ್ಯರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ, ಸರ್ಕಾರ ಪ್ರಾದೇಶಿಕ ಆಯುಕ್ತರಂತಹ ಹಿರಿಯ ಅಧಿಕಾರಿಗಳನ್ನು ಅಥವಾ ಜಿಲ್ಲಾ ಮಟ್ಟದ ನ್ಯಾಯಾಧೀಶರನ್ನು ಕ್ಲಬ್‌ಗೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಬೇಕು. ಬೆಳಗಾವಿ ಕ್ಲಬ್‌ನ ಆರ್ಥಿಕ ವಹಿವಾಟು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.


    ಅನ್ಯರ ಸದಸ್ಯತ್ವಕ್ಕೆ ಹಿರಿಯ ಸದಸ್ಯರ ಆಕ್ಷೇಪ

    ಒಂದು ಕಾಲದಲ್ಲಿ ಬೆಳಗಾವಿ ಕ್ಲಬ್‌ನ ಸದಸ್ಯರಾಗಿರುವುದೇ ಹೆಮ್ಮೆಯ ಸಂಗತಿಯಾಗಿತ್ತು. ಈ ಕ್ಲಬ್‌ನ ಜತೆಯಲ್ಲಿ ಮುಂಬೈನ ಅನೇಕ ಕ್ರಿಕೆಟ್ ಕ್ಲಬ್ ಸೇರಿ ಅನೇಕ ಮಹಾನಗರಗಳು ಬೆಳಗಾವಿ ಕ್ಲಬ್ ಜತೆಯಲ್ಲಿ ಅಫಿಲೇಶನ್ ಹೊಂದಿದ್ದವು. ಈ ಕ್ಲಬ್‌ನ ಸದಸ್ಯರಾಗಲು ಉದ್ಯಮಿಯಾಗಿರಬೇಕು ಅಥವಾ ಸ್ವಂತ ಆದಾಯ ಹೊಂದಿರಬೇಕು. ನೌಕರಿ ಮಾಡುತ್ತಿದ್ದರೆ, ಪ್ರಥಮ ಶ್ರೇಣಿಯ ಹಿರಿಯ ಅಧಿಕಾರಿಯಾಗಿದ್ದರೆ ಮಾತ್ರ ಈ ಕ್ಲಬ್‌ಗೆ ಸದಸ್ಯರಾಗಲು ಅರ್ಹತೆ ಇತ್ತು. ಆದರೆ, ಇತ್ತೀಚೆಗೆ ತಮಗೆ ಬೇಕಾದವರನ್ನು ಸದಸ್ಯತ್ವ ಮಾಡುತ್ತಿರುವುದಕ್ಕೆ ಕ್ಲಬ್‌ನ ಹಿರಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.


    ಬೆಳಗಾವಿ ಕ್ಲಬ್‌ನಲ್ಲಿ ಆಡಳಿತ ವ್ಯವಸ್ಥೆ ಸರಿಯಾಗಿ ಸಾಗುತ್ತಿಲ್ಲ. ಹೀಗಾಗಿ ಹಿರಿಯ ಐಎಎಸ್ ಅಧಿಕಾರಿ ಅಥವಾ ಜಿಲ್ಲಾ ಮಟ್ಟದ ನ್ಯಾಯಾಧೀಶರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಬೇಕು. ಬೆಳಗಾವಿ ಕ್ಲಬ್‌ನ ಅವ್ಯವಹಾರಗಳನ್ನು ಸಮಗ್ರವಾಗಿ ತನಿಖೆ ನಡೆಸಬೇಕು. ಸರ್ಕಾರ ಬೆಳಗಾವಿ ಕ್ಲಬ್‌ಗೆ ಮತ್ತೆ ಗತವೈಭವ ಬರುವಂತೆ ಸೂಕ್ತ ಕ್ರಮ ಜರುಗಿಸಬೇಕು.
    | ಡಾ.ಪ್ರಭಾಕರ ಕೋರೆ ರಾಜ್ಯಸಭೆ ಸದಸ್ಯರು ಹಾಗೂ ಬೆಳಗಾವಿ ಕ್ಲಬ್‌ನ ಹಿರಿಯ ಸದಸ್ಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts