More

    25.50 ಕೋಟಿ ರೂ. ವೆಚ್ಚದ ಡಾ. ಅಂಬೇಡ್ಕರ್ ವಸತಿ ಶಾಲೆಗೆ‌ ಅಡಿಗಲ್ಲು ಹಾಕಿದ ಎಟಿಆರ್

    ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ- ಬರಗೂರು ಬಳಿ ಬರೋಬ್ಬರಿ ೨೫.೫೦ ಕೋಟಿ ರೂ ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಟಿ. ರಾಮಸ್ವಾಮಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

    ನಂತರ ನಡೆದ ಸಮಾರಂಭದ‌ಲ್ಲಿ ತಾಪಂ ಅಧ್ಯಕ್ಷೆ ಪದ್ಮ ಮಹೇಶ್ ಮಾತನಾಡಿ, ಬಹು ನಿರೀಕ್ಷಿತ ಅಂಬೇಡ್ಕರ್ ವಸತಿ ಶಾಲೆ ಎ. ಮಂಜು ಅವರು ಸಚಿವರಾಗಿದ್ದ ವೇಳೆ ೨೪ ಕೋಟಿ ರೂ ವೆಚ್ಚದಲ್ಲಿ ಮಂಜೂರಾಗಿತ್ತು. ಜಾಗದ ಸಮಸ್ಯೆ ನಿವಾರಿಸಿ ಇದೀಗ ಶಾಸಕರು ಭೂಮಿಪೂಜೆ ನೆರವೇರಿಸಿರುವುದು ಹೆಮ್ಮೆಯ ಸಂಗತಿ ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ,‌ ವಸತಿ ಶಾಲೆ ಅಂದು ಮಂಜೂರಾಗಿತ್ತಷ್ಟೆ, ವಸತಿ ಶಾಲೆ‌ ವ್ಯವಸ್ಥಿತವಾಗಿ ಸ್ಥಾಪಿಸುವ ಉದ್ದೇಶದಿಂದ ೨೫.೫೦ ಕೋಟಿ ದೊಡ್ಡ ಮೊತ್ತದ ಅನುದಾನ ಮಂಜೂರು ಮಾಡಿಸಿ, ಜಾಗದ ಸಮಸ್ಯೆ ಬಗೆಹರಿಸಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿರುವೆ. ತಾಪಂ ಅಧ್ಯಕ್ಷರು ಹೇಳಿದಂತೆ‌ ಅಂದು‌ ಹಣ ಬಿಡುಗಡೆ ಆಗಿರಲಿಲ್ಲ. ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಎಷ್ಟು ವಸತಿ ಶಾಲೆಗಳು ಮಂಜೂರಾಗಿದ್ದವು ಎಂಬುದನ್ನು ಹೇಳಿ ಎಂದು‌ ಟಾಂಗ್ ನೀಡಿದರು.

    ನಾನು ಶಾಸಕನಾದ ಎರಡು ವರ್ಷಗಳ ಕಡಿಮೆ ಅವಧಿಯಲ್ಲಿ ಕ್ಷೇತ್ರದಲ್ಲಿ ೫ ವಸತಿ ಶಾಲೆ ಮಂಜೂರು  ಮಾಡಿಸಿರುವೆ. ಬರಗೂರು ಮುರಾರ್ಜಿ ವಸತಿ ಶಾಲೆಯಲ್ಲಿ ಮೂಲ ಸಮಸ್ಯೆಗಳನ್ನು ಬಗೆಹರಿಸಿ, ಕಬ್ಬಳಿಗೆರೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ೪ ಕೋಟಿ ರೂ ಅನುದಾನದಲ್ಲಿ‌ ಸೌಕರ್ಯಗಳನ್ನು ಕಲ್ಪಿಸಿರುವೆ ಎಂದು ತಿಳಿಸಿದರು.

    ನವೋದಯ ಶಾಲೆ ಮಾದರಿಯಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ಅಗತ್ಯ ಸೌಲಭ್ಯಗಳು ಧಕ್ಕುವಂತಾಗಬೇಕು. ಬಡ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಬೇಕು ಎನ್ನುವ ವಸತಿ ಶಾಲೆಗಳ ಸದುದ್ದೇಶ ಸಾಕಾರಗೊಳಿಸುವ ನಿಟ್ಟಿನಲ್ಲಿ ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.

    ಜಿಪಂ ಸದಸ್ಯ ಬಿ.ಎಂ. ರವಿ, ತಾಪಂ ಉಪಾಧ್ಯಕ್ಷ ಎಸ್.ಆರ್. ನಾಗರಾಜ್, ಮಾಜಿ ಅಧ್ಯಕ್ಷೆ,‌ ಸದಸ್ಯೆ ವೀಣಾ ಮಂಜುನಾಥ್, ತಾಪಂ‌ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವೀರಾಜ್ ಮಾತನಾಡಿದರು. ಪಪಂ ಅಧ್ಯಕ್ಷ ಹೂವಣ್ಣ, ಜಿಪಂ ಮಾಜಿ ಅಧ್ಯಕ್ಷ ಲೋಕನಾಥ್, ಇಒ‌ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ‌ ಅಧಿಕಾರಿ ಮಂಜುನಾಥ್, ಲಿಂಗರಾಜು, ಪ್ರಾಂಶುಪಾಲೆ ರೂಪ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts