ಸೈನಿಕರ ತ್ಯಾಗಕ್ಕೆ ದೇಶದ ಸಲಾಂ

ನವದೆಹಲಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಸ್ಮರಣಾರ್ಥವಾಗಿ ನಿರ್ವಿುಸಲಾಗಿರುವ ಭಾರತದ ಮೊದಲ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ವೀರ ಜ್ಯೋತಿ ಬೆಳಗಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆ ಮಾಡಿದರು.

ಇಂಡಿಯಾ ಗೇಟ್ ಬಳಿ ನಿರ್ವಣಗೊಂಡಿರುವ ಈ ಸ್ಮಾರಕದ ಮೂಲಕ 25,942 ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಗಿದೆ. ಒಟ್ಟು 16 ಗೋಡೆಗಳಲ್ಲಿ ಹುತಾತ್ಮ ಯೋಧರ ಹೆಸರು, ರ್ಯಾಂಕ್ ಮತ್ತು ರೆಜಿಮೆಂಟ್ ವಿವರಗಳನ್ನು ಕೆತ್ತಲಾಗಿದೆ. 1947, 1962, 1965, 1971 ಮತ್ತು 1999ರ ಯುದ್ಧಗಳಲ್ಲದೇ ಶ್ರೀಲಂಕಾದಲ್ಲಿ ಶಾಂತಿ ಸ್ಥಾಪನೆ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರ ಹೆಸರುಗಳನ್ನು ಕೂಡ ಸ್ಮಾರಕದಲ್ಲಿ ಕೆತ್ತಲಾಗಿದೆ.

ಸ್ಮಾರಕ ಲೋಕಾರ್ಪಣೆ ಬಳಿಕ ಮಾತನಾಡಿದ ಪ್ರಧಾನಿ, ‘ನಮ್ಮ ಸೇನಾ ಪಡೆಗಳು ವಿಶ್ವದಲ್ಲೇ ಅತ್ಯಂತ ಬಲಶಾಲಿಯಾಗಿವೆ. ದೇಶ ಎದುರಿಸಿದ ಪ್ರತಿ ಸವಾಲನ್ನು ಎಲ್ಲ ಬಾರಿಯೂ ಮೆಟ್ಟಿ ನಿಂತಿವೆ ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಎಲ್ಲ ತನಿಖೆ ಒಂದೇ ಕುಟುಂಬದತ್ತ: ಭಾಷಣದಲ್ಲಿ ಕಾಂಗ್ರೆಸ್ ಆಡಳಿತದ ವಿರುದ್ಧ ಹರಿಹಾಯ್ದ ಪ್ರಧಾನಿ, ‘ಬುಲೆಟ್​ಪ್ರೂಫ್ ಜಾಕೆಟ್​ನಿಂದ ಬೊಫೋರ್ಸ್ ಮತ್ತು ಈಗ ರಫೇಲ್ ಯುದ್ಧವಿಮಾನ ವಿಚಾರದಲ್ಲಿ ಕೂಡ ಎಲ್ಲ ತನಿಖೆಗಳು ಒಂದೇ ಕುಟುಂಬದ ಕಡೆ ಬೆರಳು ಮಾಡುತ್ತವೆ. ನಮ್ಮ ಸರ್ಕಾರ ಬರುವ ಮುಂಚೆ ಯೋಧರನ್ನು

ಯಾವ ರೀತಿ ನಡೆಸಿಕೊಳ್ಳಲಾಗುತ್ತಿತ್ತು ಎಂದು ನಿಮಗೆ ತಿಳಿದಿದೆ. ನೀವೇ ಹೇಳಿ ದೇಶ ಮೊದಲೋ, ಕುಟುಂಬ ಮೊದಲೋ?’ ಎಂದು ನೆರೆದಿದ್ದ ಸಭಿಕರನ್ನು ಪ್ರಧಾನಿ ಪ್ರಶ್ನಿಸಿದರು. ಆಗ ಭಾರತ ಮಾತಾ ಕೀ ಜೈ ಎಂಬ ಘೋಷಣೆ ಕೇಳಿಬಂದವು.

ಬುಲೆಟ್​ಪ್ರೂಫ್ ಇರಲಿಲ್ಲ

2009ರಿಂದ 2014ರವರೆಗೆ ನಮ್ಮ ಯೋಧರು ಗಡಿಗಳಲ್ಲಿ ಬುಲೆಟ್​ಪ್ರೂಫ್ ಜಾಕೆಟ್ ಇಲ್ಲದೆಯೇ ಶತ್ರುಗಳ ವಿರುದ್ಧ ಎದೆಯೊಡ್ಡಿ ನಿಲ್ಲುವ ಪರಿಸ್ಥಿತಿ ಇತ್ತು. ಈ ಹಿಂದಿನ ಸರ್ಕಾರ ಸೇನಾಪಡೆ ಇಟ್ಟಿದ್ದ 1.46 ಲಕ್ಷ ಜಾಕೆಟ್​ಗಳ ಬೇಡಿಕೆಯನ್ನು ಈಡೇರಿಸಲೇ ಇಲ್ಲ. ತೀರ ನಿರ್ಲಕ್ಷ್ಯ ತೋರಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರ 2.30 ಲಕ್ಷ ಬುಲೆಟ್​ಪ್ರೂಫ್ ಜಾಕೆಟ್ ಖರೀದಿಸಿ ಸೇನಾಪಡೆಗೆ ನೀಡಿದೆ ಎಂದು ಪ್ರಧಾನಿ ಹೇಳಿದರು.

ಪ್ರಧಾನಿ ಕನಸು ನನಸು

ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ವಣಕ್ಕೆ ಯುಪಿಎ ಆಡಳಿತದ ಅವಧಿಯಲ್ಲಿ ಅಂದಿನ ರಕ್ಷಣಾ ಸಚಿವ ಎ.ಕೆ.ಆಂಟನಿ ಅನುಮೋದನೆ ನೀಡಿದ್ದರೂ, ದೆಹಲಿ ಸಿಎಂ ಶೀಲಾ ದೀಕ್ಷಿತ್ ಆಕ್ಷೇಪದಿಂದ ಇದು ಕಾರ್ಯಗತವಾಗಿರಲಿಲ್ಲ. ಇಂಡಿಯಾ ಗೇಟ್ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣ ಬೇಡ ಎಂದು ಶೀಲಾ ಒತ್ತಾಯಿಸಿದ್ದರು. ಆದರೆ 2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ನರೇಂದ್ರ ಮೋದಿ ರಾಷ್ಟ್ರೀಯ ಸ್ಮಾರಕ ನಿರ್ವಣದ ಕನಸು ಹಂಚಿಕೊಂಡಿದ್ದರು. 2015ರ ಅಕ್ಟೋಬರ್​ನಲ್ಲಿ 500 ಕೋಟಿ ರೂ. (ಸ್ಮಾರಕದ ಜತೆಗೆ ಮ್ಯೂಸಿಯಂ) ಅನುದಾನ ಮೀಸಲಿಡುವ ಮೂಲಕ ಕನಸು ನನಸಾಗಿಸಲು ಪ್ರಧಾನಿ ಆದೇಶ ಹೊರಡಿಸಿದರು. ಸ್ಮಾರಕಕ್ಕೆ 176 ಕೋಟಿ ರೂ. ಮೀಸಲಿಡಲಾಯಿತು. ಬಳಿಕ ವಿನ್ಯಾಸಕ್ಕಾಗಿ ನಡೆಸಲಾದ ಸಾರ್ವಜನಿಕ ಸ್ಪರ್ಧೆಯಲ್ಲಿ (ಮೈಗವ್.ಇನ್ ಪೋರ್ಟಲ್) ಮುಂಬೈ ಮೂಲಕ ಎಸ್​ಪಿ+ಎ ಸ್ಟುಡಿಯೋ, ಚೆನ್ನೈ ಮೂಲದ ವಿಬಿ ಡಿಸೈನ್ ಲ್ಯಾಬ್ ವಿನ್ಯಾಸ ಆಯ್ಕೆಯಾಗಿತ್ತು.

ಯೋಧರ ಪ್ರಾಣತ್ಯಾಗ, ಕರ್ತವ್ಯಪರತೆಯನ್ನು ಈ ಸ್ಮಾರಕ ನೆನಪಿಸುತ್ತಾ ಇರುತ್ತದೆ. ಪ್ರಜೆಗಳಿಗೆ ಈ ಸ್ಥಳ ಪುಣ್ಯಕ್ಷೇತ್ರವಾಗಬೇಕು. ದೇಶದ ಘನತೆಗಾಗಿ ಪ್ರಾಣತ್ಯಾಗ ಮಾಡಿದ ಅವರ ದ್ಯೋತಕವಾಗಿ ಈ ಸ್ಮಾರಕ ನಿಲ್ಲಲಿದೆ.

| ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವೆ