
ದೇವದುರ್ಗ: ತಾಲೂಕಿನ ಕೃಷ್ಣಾನದಿ ಪಾತ್ರದ ಮುದಗೋಟ್ ಗ್ರಾಮದ ಜಮೀನಿನಲ್ಲಿ ಭಾನುವಾರ ತಡರಾತ್ರಿ ಮೊಸಳೆ ಪ್ರತ್ಯಕ್ಷವಾಗಿದೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸೋಮವಾರ ಬೆಳಗ್ಗೆ ಸಿಬ್ಬಂದಿ ಮೊಸಳೆ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ನೀರು ಹರಿಸಿದ್ದರಿಂದ ಮೊಸಳೆ ಬಂದಿರಬಹುದು ಎನ್ನಲಾಗಿದೆ. ಕೆಲವರ ಪ್ರಕಾರ ಗ್ರಾಮದಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ನಿರ್ಮಾಣ ಸಂದರ್ಭದಲ್ಲಿ ಮಣ್ಣಿಗಾಗಿ ಬೆಟ್ಟದ ಪಕ್ಕದಲ್ಲಿ ದೊಡ್ಡ ಗುಂಡಿತೋಡಿದ್ದು ಮಳೆ ನೀರುನಿಂತು ಅದರಲ್ಲಿ ಹಲವು ವರ್ಷಗಳಿಂದ ಮೊಸಳೆ ವಾಸವಿತ್ತು ಎನ್ನಲಾಗಿದೆ. ಆಹಾರ ಹುಡುಕಿಕೊಂಡು ರೈತರ ಜಮೀನಿಗೆ ಲಗ್ಗೆ ಹಾಕಿದೆ.
ಅರಣ್ಯಾಧಿಕಾರಿ ಶರಣಬಸವರಾಜ, ಪಿಎಸ್‌ಐ ವೈಶಾಲಿ ಝಳಕಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸೇರಿ ಮೊಸಳೆ ಸೆರೆಹಿಡಿದಿದ್ದಾರೆ. ಕೆಲ ದಿನಗಳ ಹಿಂದೆ ನದಿದಂಡೆ ಗ್ರಾಮ ಗೋಪಳಾಪುರ ಹಳ್ಳ, ಹಿರೇಬೂದೂರು ಕೆರೆಯಲ್ಲೂ ಮೊಸಳೆ ಪ್ರತ್ಯಕ್ಷವಾಗಿತ್ತು. ನದಿಗೆ ಹೆಚ್ಚುವರಿ ನೀರು ಬಿಡುತ್ತಿರುವ ಕಾರಣ ಜಲಾಶಯದಿಂದ ಮೊಸಳೆಗಳು ಹೊರಬರುತ್ತಿವೆ. ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.