More

  ಕನಿಷ್ಠ ವೇತನ, ಸೇವಾ ಭದ್ರತೆ ನೀಡಿ

  ಬೆಳಗಾವಿ: ಕನಿಷ್ಠ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರಾಜ್ಯ ಅಂಗವಿಕಲರು ಹಾಗೂ ವಿವಿಧೋದ್ದೇಶ, ಗ್ರಾಮೀಣ ಪುನರ್ವಸತಿ ಮತ್ತು ನಗರ ಪುನರ್ವಸತಿ ಒಕ್ಕೂಟದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

  ಕಳೆದ ಹಲವು ವರ್ಷಗಳಿಂದ ಎನ್‌ಪಿಆರ್‌ಪಿಒಡಿ ಯೋಜನೆಯಡಿ ರಾಜ್ಯದ 6,022 ಗ್ರಾಪಂಗಳು, 176 ತಾಪಂಗಳಲ್ಲಿ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ಈವರೆಗೂ ಕನಿಷ್ಠ ವೇತನ, ಸೇವಾ ಭದ್ರತೆಯೂ ಇಲ್ಲ. ಪುನರ್ವಸತಿ ಕಾರ್ಯಕರ್ತರಿಗೆ 6 ಸಾವಿರ ರೂ. ಮತ್ತು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ 12 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗುತ್ತಿದೆ ಎಂದು ದೂರಿದರು.

  ಗ್ರಾಪಂ, ತಾಪಂಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗವಿಕಲರಿಗೆ ಸಮಯಕ್ಕೆ ಸರಿಯಾಗಿ ಗೌರವಧನವೂ ಪಾವತಿಯಾಗುತ್ತಿಲ್ಲ. ಹಾಗಾಗಿ ಕನಿಷ್ಠ ವೇತನ ಸೌಲಭ್ಯ ಕಲ್ಪಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಎಸ್‌ಡಿಪಿಒ ಅವರನ್ನು ಗ್ರಾಮೀಣ ಪುನರ್ವಸತಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಕೋವಿಡ್-19 ಸೇನಾನಿಗಳು ಮೃತರಾದಾಗ ನೀಡುವ ಮರಣ ಪರಿಹಾರಧನವನ್ನು ನಮ್ಮ ಎಲ್ಲ ಕಾರ್ಯಕರ್ತರಿಗೂ ನೀಡಬೇಕು. ಅಲ್ಲದೆ, ಕಾರ್ಯಕರ್ತರಿಗೆ ಸ್ವಯಂ ವರ್ಗಾವಣೆಗೆ ಅವಕಾಶ ನೀಡಬೇಕು. ಹೊಸದಾಗಿ ರಚನೆಯಾಗಿರುವ ಗ್ರಾಪಂ ಮತ್ತು ತಾಪಂಗಳ ಕಚೇರಿಗಳಲ್ಲಿ ಕಾರ್ಯಕರ್ತರನ್ನು ನೇಮಕಮಾಡಿಕೊಳ್ಳಲು ಆದೇಶ ಹೊರಡಿಸಬೇಕು ಎಂದು ಮನವಿ ಮೂಲಕ ವಿನಂತಿಸಿದರು.

  ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರಮೇಠ, ಕರೊನಾ ಸೇನಾನಿಗಳಿಗೆ ನೀಡುವಂತೆ ಮರಣ ಪರಿಹಾರ ಧನವನ್ನು ಅಂಗವಿಕಲ ಕಾರ್ಯಕರ್ತರಿಗೂ ನೀಡುವ ಕುರಿತು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಫಕೀರಗೌಡ ಪಾಟೀಲ, ಕಿರಣ ಇಳಗೇರ್, ರುದ್ರಪ್ಪ ಗೌಡರ್, ರಮೇಶ ಬಿ.ಎಸ್., ಲಕ್ಷ್ಮಣ ನಾಯಕ ಸೇರಿದಂತೆ ಇನ್ನಿತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts