ಫೊನಿ ಚಂಡಮಾರುತ ಭೀತಿ: ಒಡಿಶಾ ತೀರ ಪ್ರದೇಶದ 8 ಲಕ್ಷ ಜನರ ಸ್ಥಳಾಂತರ

ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಫೊನಿ ಚಂಡಮಾರುತ ಶುಕ್ರವಾರ ಸಂಜೆ ವೇಳೆ ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಪ್ರದೇಶದ ಸುಮಾರು 8 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಫೊನಿ ಒಡಿಶಾದ ಪುರಿ ನಗರದ ಬಳಿ ಅಪ್ಪಳಿಸುವ ಸಾಧ್ಯತೆ ಇದೆ. ಚಂಡಮಾರುತ 170-180 ಕಿ.ಮೀ. ವೇಗದಲ್ಲಿ ಪುರಿ ಕಡೆಗೆ ಚಲಿಸುತ್ತಿದೆ. ಒಡಿಶಾ ಕರಾವಳಿಯಲ್ಲಿ ಸುಮಾರು 24 ಗಂಟೆ ಬಿರುಗಾಳಿ ಮತ್ತು ಭಾರಿ ಮಳೆ ಬೀಳಲಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸುತ್ತಿದ್ದು, ರಾಜ್ಯಾದ್ಯಂತ 879 ಸೈಕ್ಲೋನ್ ಶೆಲ್ಟರ್​ಗಳನ್ನು ಸಿದ್ಧಗೊಳಿಸಲಾಗಿದೆ. ಇದರಲ್ಲಿ 10 ಲಕ್ಷ ಜನರಿಗೆ ಆಶ್ರಯ ನೀಡಬಹುದಾಗಿದೆ. ಕರಾವಳಿ ಮತ್ತು ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ಜಿಲ್ಲೆಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಗುರುವಾರ ಸಂಜೆಯ ವೇಳೆಗೆ 8 ಲಕ್ಷ ಜನರನ್ನು ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನ ಅಪ್ಪಳಿಸಲಿದೆ ಚಂಡ ಮಾರುತ

ಫೊನಿ ಚಂಡಮಾರುತ ಶುಕ್ರವಾರ ಸಂಜೆ 5.30ರ ವೇಳೆಗೆ ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಚಂಡಮಾರುತ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯೊಳಗೆ ತೀರ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ನಾಳೆ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಮಂಡಳಿಯ ವಕ್ತಾರ ಸಂಗಮ್​ ಮಹೋಪಾತ್ರ ಮಾಹಿತಿ ನೀಡಿದ್ದಾರೆ.

ಎನ್​ಡಿಆರ್​ಎಫ್​ನ 81 ತಂಡಗಳ ನಿಯೋಜನೆ

ಫೊನಿ ಚಂಡಮಾರುತದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಾಚರಣೆಗಾಗಿ 4000 ನುರಿತ ಸಿಬ್ಬಂದಿಯನ್ನೊಳಗೊಂಡ 81 ಎನ್​ಡಿಆರ್​ಎಫ್​ ತಂಡವನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ. ಚಂಡಮಾರುತ ಅಪ್ಪಳಿಸುವ ಪ್ರದೇಶಗಳಲ್ಲಿ 50 ತಂಡಗಳನ್ನು ನಿಯೋಜಿಸಲಾಗಿದೆ. ಉಳಿದ 31 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಎನ್​ಡಿಆರ್​ಎಫ್​ ಮುಖ್ಯಸ್ಥ ಎಸ್​.ಎನ್​. ಪ್ರಧಾನ್​ ತಿಳಿಸಿದ್ದಾರೆ. (ಏಜೆನ್ಸೀಸ್​)