ವಿಶ್ವಸಂಸ್ಥೆ: ಹೊಸ ವರ್ಷ 2020ಕ್ಕೆ ಕಾಲಿಟ್ಟಾಗಿದೆ. ಮೊದಲ ದಿನ ಜಗತ್ತಿನ ವಿವಿಧ ದೇಶಗಳಲ್ಲಿ ಮಕ್ಕಳ ಜನನ ಪ್ರಮಾಣದ ಮೇಲೆ ಯುನಿಸೆಫ್ ಈ ಸಲ ಬೆಳಕು ಚೆಲ್ಲಿದೆ. ಯಾವ ದೇಶದಲ್ಲಿ ಗರಿಷ್ಠ ಮಕ್ಕಳು ಜನಿಸಿರಬಹುದು? ಭಾರತದಲ್ಲಾ ಅಥವಾ ಚೀನಾದಲ್ಲಾ? ಊಹಿಸುವುದು ಸ್ವಲ್ಪ ಕಷ್ಟವೇ?
ಜನವರಿ ಒಂದರಂದು ಜಾಗತಿಕವಾಗಿ 3,92,0-78 ಮಕ್ಕಳು ಜನಿಸಿದ್ದಾರೆ. ಇದರಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾದ ಭಾರತದಲ್ಲಿ ಹುಟ್ಟಿರುವ ಮಕ್ಕಳ ಸಂಖ್ಯೆ 67,385. ಇನ್ನು ಜನಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ಚೀನಾದಲ್ಲಿ 46,299 ಮಕ್ಕಳ ಜನನವಾಗಿದೆ ಎಂದು ಯುನಿಸೆಫ್ ಹೇಳಿದೆ.
ಪೆಸಿಫಿಕ್ನ ಫಿಜಿಯಲ್ಲಿ 2020ರ ಮೊದಲ ದಿನದ ಮೊದಲ ಮಗು ಮತ್ತು ಅಮೆರಿಕದಲ್ಲಿ ಕೊನೆಯ ಮಗು ಜನಿಸಿದೆ. ಭಾರತ, ಚೀನಾ ಬಿಟ್ಟರೆ ನೈಜೀರಿಯಾದಲ್ಲಿ 26,039, ಪಾಕಿಸ್ತಾನದಲ್ಲಿ 16,787, ಇಂಡೋನೇಷ್ಯಾದಲ್ಲಿ 13,020, ಅಮೆರಿಕದಲ್ಲಿ 10,452, ಕಾಂಗೋ ರಿಪಬ್ಲಿಕ್ನಲ್ಲಿ 10,247, ಇಥಿಯೋಪಿಯಾದಲ್ಲಿ 8,493 ಮಕ್ಕಳು ಜನಿಸಿವೆ.
ಸದ್ಯದ ದತ್ತಾಂಶ ಪ್ರಕಾರ, 2027ರ ವೇಳೆಗೆ ಭಾರತ ಜನಸಂಖ್ಯೆ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ. ಒಂದು ನಿರೀಕ್ಷೆಯ ಪ್ರಕಾರ 2019 ಮತ್ತು 2050ರ ವೇಳೆಗೆ ಭಾರತದ ಜನಸಂಖ್ಯೆ 27.3 ಕೋಟಿ ಹೆಚ್ಚಾಗಲಿದೆ. ನೈಜೀರಿಯಾದ ಜನಸಂಖ್ಯೆ ಇದೇ ಸಂದರ್ಭದಲ್ಲಿ 20 ಕೋಟಿ ಹೆಚ್ಚಾಗಲಿದೆ. ಜಾಗತಿಕ ಜನಸಂಖ್ಯೆ ಹೆಚ್ಚಳಕ್ಕೆ ಈ ಎರಡು ರಾಷ್ಟ್ರಗಳ ಪಾಲು ಶೇಕಡ 23 ಆಗಿರಲಿದೆ.
ಹೊಸ ವರ್ಷ ಮತ್ತು ಹೊಸ ದಶಕದ ಆರಂಭ ಎನ್ನುವುದು ನಮ್ಮೆಲ್ಲರ ಆಸೆ, ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಸಕಾಲ. ಅಷ್ಟೇ ಅಲ್ಲ, ನಮ್ಮ ಭವಿಷ್ಯ ಮತ್ತು ಮುಂದಿನ ತಲೆಮಾರಿನ ಭವಿಷ್ಯದ ಬಗ್ಗೆಯೂ ಯೋಚಿಸುವುದಕ್ಕೆ ಇದೊಂದು ಅವಕಾಶ ಎಂದು ಯುನಿಸೆಫ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹೆನ್ರಿಟಾ ಫೋರೆ ತಿಳಿಸಿದ್ದಾರೆ.