ನೆಲಮಂಗಲ: ನಗರದ ವರಪ್ರಸಾದ ಶ್ರೀಬಯಲು ಉದ್ಭವ ವಿಘ್ನೇಶ್ವರ ಸ್ವಾಮಿಯ ಕಡಲೆಕಾಯಿ ಪರಿಷೆ ಡಿ.14, 15ರಂದು ನಡೆಯಲಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ವಿಳಂಬಿ ನಾಮಸಂವತ್ಸರ ಮಾರ್ಗಶಿರಮಾಸ ಹುಣ್ಣಿಮೆಯಂದು ನಡೆಯುವ ಜಾತ್ರಾ ಮಹೋತ್ಸವದ ಶುಭ ಲಗ್ನದಲ್ಲಿ ವಿಘ್ನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ.
14 ರಂದು ಸಂಜೆ 6 ಗಂಟೆಯಿಂದ 8 ಗಂಟೆವರೆಗೆ ವಿಶ್ವೇಶ್ವರ ಸ್ವಾಮಿ ಕಲ್ಯಾಣೋತ್ಸವ ನಡೆದರೆ, 15ರಂದು ಭಾನುವಾರ ಮಧ್ಯಾಹ್ನ 12:30 ರಿಂದ 1.30ಗಂಟೆವರೆಗಿನ ಶುಭ ಮೇಷ ಲಗ್ನದಲ್ಲಿ ಬ್ರಹ್ಮರಥೋತ್ಸವ ಜರುಗಲಿದೆ.
ಬ್ರಹ್ಮರಥೋತ್ಸವಕ್ಕೆ ಶಾಸಕ ಎನ್.ಶ್ರೀನಿವಾಸ್ ಚಾಲನೆ ನೀಡಲಿದ್ದಾರೆ. ತಾಲೂಕು ಸೇರಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ, ತುಮಕೂರು ಜಿಲ್ಲೆಗಳಿಂದಲೂ ಜನ ಆಗಮಿಸುಲಿದ್ದು, 50 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ.
ರಾಷ್ಟ್ರೀಯ ಹೆದ್ದಾರಿ ಸೊಂಡೆಕೊಪ್ಪ ವೃತ್ತದಿಂದ ಒಂದು ಕಿಮೀ ದೂರದ ದೇವಾಲಯವರೆಗೂ ಕಡಲೆಕಾಯಿ ಜತೆ ಕಳ್ಳೆಪುರಿ ಅಂಗಡಿಗಳು, ಮಕ್ಕಳ ಆಟಿಕೆ ವ್ಯಾಪಾರಿಗಳು ಜಾಗಗಳನ್ನು ಕಾಯ್ದಿರಿಸಿಕೊಂಡಿದ್ದು, ಭಾರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
ಜಾತ್ರೆಯ ದಿನ 25ಕ್ಕೂ ಹೆಚ್ಚು ಸಮುದಾಯವರು ಅರವಂಟಿಕೆ ಹಾಕಿದರೆ, ದೇವಾಲಯ ಸಮಿತಿವರು ಭಕ್ತರ ಸಹಕಾರದಿಂದ ಎರಡು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ.
ಗಂಗಾಭಿಷೇಕ, ಹೂವಿನ ಪಲ್ಲಕ್ಕಿ ಉತ್ಸವ
ಬ್ರಹ್ಮರಥೋತ್ಸವ ನಡೆದ ಮರು ದಿನ ಸೋಮವಾರ ಬೆಳಗ್ಗೆ 9.30ಕ್ಕೆ ವಿಘ್ನೇಶ್ವರ ಸ್ವಾಮಿಗೆ ಚಾರ್‌ದಾಮ್ ಗಂಗೋತ್ರಿಯ ಗಂಗಾಭಿಷೇಕ ಮೊದಲ ಬಾರಿಗೆ ನಡೆಯಲಿದೆ.
ಸಂಜೆ 6ಗಂಟೆಗೆ ನಗರದ ಹೂವಾಡಿಗರ ಸಂಘದಿಂದ ಸ್ವಾಮಿಯನ್ನು ಹೂವಿನ ಪಲ್ಲಕ್ಕಿಯಲ್ಲಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು.
ಪ್ರತಿ ವರ್ಷದಂತೆ ಈ ಬಾರಿಯೂ ಹೆಚ್ಚು ಸಂಖ್ಯೆಯ ಜನರು ಭಾಗವಹಿಸುವ ನಿರೀಕ್ಷೆಯಿದ್ದು ಜಾತ್ರಾ ಮಹೋತ್ಸವಕ್ಕೆ ಸಂಭಂದಿಸಿದ ಸಕಲ ಸಿದ್ಧತೆಯನ್ನು ಸಮಿತಿ ಮತ್ತು ಸಾರ್ವಜನಿಕರ ಸಹಕಾರದಿಂದ ಮಾಡಿಕೊಳ್ಳಲಾಗಿದೆ.
– ಎನ್.ಪಿ.ರಘುನಾಥ್ ಶ್ರೀವಿನಾಯಕ ಸ್ವಾಮಿ ಸೇವಾ ಟ್ರಸ್ಟ್ ಸದಸ್ಯ