ಸೂಯೆಜ್​ ರಾಕೆಟ್​ನಲ್ಲಿ ತಾಂತ್ರಿಕ ತೊಂದರೆ: ಕೂದಲೆಳೆ ಅಂತರದಲ್ಲಿ ಪಾರಾದ ಗಗನಯಾತ್ರಿಗಳು

ಮಾಸ್ಕೋ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇಬ್ಬರು ಗಗನ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ರಷ್ಯಾದ ಸೂಯೆಜ್​ ರಾಕೆಟ್​ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ತನ್ನ ನಿಗದಿತ ಪಥ ಬದಲಿಸಿದ ಕಾರಣ ಗಗನ ಯಾತ್ರಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಗುರುವಾರ ಕಜಕಿಸ್ತಾನದಲ್ಲಿರುವ ಉಡಾವಣಾ ಕೇಂದ್ರದಿಂದ ಸೂಯೆಜ್​ ರಾಕೆಟ್​ ನಭಕ್ಕೆ ಚಿಮ್ಮಿತ್ತು. ಸುಮಾರು 2 ನಿಮಿಷಗಳ ನಂತರ ರಾಕೆಟ್​ ತನ್ನ ನಿಗದಿತ ಪಥ ಬಿಟ್ಟು ಬೇರೆ ಪಥದೆಡೆಗೆ ದಿಕ್ಕು ಬದಲಿಸಿತ್ತು. ತಕ್ಷಣ ಅಮೆರಿಕ ಮತ್ತು ರಷ್ಯಾದ ಗಗನಯಾತ್ರಿಗಳಿದ್ದ ಕ್ಯಾಪ್ಸೂಲ್​ 31 ಮೈಲಿ ಎತ್ತರದಲ್ಲಿ ಎಜೆಕ್ಟ್​ ಆಗಿದ್ದು, ಪ್ಯಾರಚ್ಯೂಟ್​ ಸಹಾಯದಿಂದ ಕ್ಯಾಪ್ಯೂಲ್​ ಸುರಕ್ಷಿತವಾಗಿ ಕೆಳಗೆ ಇಳಿದಿದೆ. ಅದರಲ್ಲಿದ್ದ ಅಮೆರಿಕದ ಗಗನಯಾತ್ರಿ ಟೈಲರ್​ ನಿಕ್​ ಹಾಗ್​ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಿ ಓವಚಿನ್​ ಅವರು ಸುರಕ್ಷಿತವಾಗಿದ್ದಾರೆ ಎಂದು ನಾಸಾ ತಿಳಿಸಿದೆ.

ನಾಸಾದ ಸ್ಪೇಸ್​ ಶೆಟಲ್​ಗೆ ನಿವೃತ್ತಿ ನೀಡಿದ ನಂತರ ಅಂತರಿಕ್ಷಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ರಷ್ಯಾದ ನೆರವು ಪಡೆಯಲಾಗುತ್ತಿದೆ. ಪ್ರಸ್ತುತ ಅಂತರಿಕ್ಷ ನಿಲ್ದಾಣದಲ್ಲಿ ಮೂವರು ಗಗನ ಯಾತ್ರಿಗಳಿದ್ದು, ಅವರು ಡಿಸೆಂಬರ್​ನಲ್ಲಿ ಭೂಮಿಗೆ ಮರಳಿದ ನಂತರ ಅವರ ಸ್ಥಾನಕ್ಕೆ ಮೂವರು ಗಗನಯಾತ್ರಿಕರನ್ನು ಕಳುಹಿಸಲು ಯೋಜಿಸಲಾಗಿತ್ತು. ಆದರೆ ಸೂಯೆಜ್​ ರಾಕೆಟ್​ ತಾಂತ್ರಿಕ ತೊಂದರೆಯಿಂದ ಭವಿಷ್ಯದಲ್ಲಿ ಅಂತರಿಕ್ಷ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಪರ್ಯಾಯ ಮಾರ್ಗಗಳ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ನಾಸಾ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)