ಜ್ಯೋತಿಷಿಯ ಮಾತುಕೇಳಿ ಒಂದೂವರೆ ಗಂಟೆ ತಡವಾಗಿ ಬಸ್​ ಚಲಾಯಿಸಿದ ಚಾಲಕ!

ಬೆಂಗಳೂರು: ಜ್ಯೋತಿಷಿಯ ಮಾತು ಕೇಳಿಕೊಂಡು ಒಂದೂವರೆ ಗಂಟೆ ತಡವಾಗಿ ಬಸ್ ಚಲಾಯಿಸಿದ ಚಾಲಕನಿಗೀಗ ಸಂಕಷ್ಟ ಎದುರಾಗಿದೆ.
ಮೆಜೆಸ್ಟಿಕ್​ನಿಂದ ಚನ್ನಮ್ಮ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ತೆರಳಬೇಕಾಗಿದ್ದ ಪೂರ್ಣಪ್ರಜ್ಞ ಲೇಔಟ್‌ ಡಿಪೋ ಬಸ್​ ಚಾಲಕ ಯೋಗೀಶ್​ ಹೀಗೆ ಅವಾಂತರ ಮಾಡಿಕೊಂಡವರು. ಜ್ಯೋತಿಷಿಯನ್ನು ಕೇಳಿದಾಗ ಅವರು ರಾಹುಕಾಲ ಎಂದಿದ್ದಕ್ಕೆ ಸರಿಯಾದ ಸಮಯಕ್ಕೆ ಬಸ್​ ಬಿಡದೆ ಒಂದು ಗಂಟೆ 20 ನಿಮಿಷ ತಡವಾಗಿ ಚಲಾಯಿಸಿದ್ದಾರೆ.

ಇದರಿಂದ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಂಸ್ಥೆಗೆ ನಷ್ಟ, ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಡಿಪೋ ಮ್ಯಾನೇಜರ್​ ಚಾಲಕ ಯೋಗೀಶ್​ಗೆ ನೋಟಿಸ್​ ನೀಡಿದ್ದಾರೆ.

ಆದರೆ, ಚಾಲಕ ಯೋಗೀಶ್​, ರಾಹುಕಾಲ ತಪ್ಪಿಸಿ ಬಸ್​ ಓಡಿಸಿದ್ದರಿಂದ 15 ಜನರ ಪ್ರಾಣ ಉಳಿಸಿದ್ದೇನೆ. ಡಿಪೋಗಳಲ್ಲಿ ಕನಕ ಜಯಂತಿ, ಗಣೇಶನ ಹಬ್ಬ ಮಾಡುತ್ತಾರೆ. ಅದು ಎಷ್ಟು ಸತ್ಯವೋ, ಜ್ಯೋತಿಷಿಗಳ ಮಾತೂ ಅಷ್ಟೇ ಸತ್ಯ ಎಂದು ಬಿಎಂಟಿಸಿ ಅಧಿಕಾರಿಗಳಿಗೆ ಉತ್ತರ ನೀಡಿದ್ದಾರೆ.