ಆಸ್ತಿ ಸರ್ವೆಗೆ ಮುಂದಾದ ಕವಿವಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಅಧೀನದಲ್ಲಿದ್ದರೂ ಸುಮಾರು 20 ವರ್ಷಗಳಿಂದ ಖಾಸಗಿಯವರು ಉಳುಮೆ ಮಾಡುತ್ತಿರುವ ಜಮೀನಿಗೆ ಕವಿವಿ ಕುಲಸಚಿವ ಡಾ. ಕಲ್ಲಪ್ಪ ಹೊಸಮನಿ, ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಶ್ವವಿದ್ಯಾಲಯ ಮಾಲೀಕತ್ವದ ಸರ್ವೆ (ಬ್ಲಾಕ್) ನಂ. 95ರ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಉಳುಮೆ ಮಾಡುತ್ತಿರುವ ‘ವಿಜಯವಾಣಿ’ ಪತ್ರಿಕೆ ಅ. 13ರಂದು ಕವಿವಿ ಜಾಗ; ಖಾಸಗಿಯವರ ‘ಫಸಲು’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ಧಾರವಾಡ ಹೋಬಳಿಯ ಮನಸೂರ- ಸಣ್ಣಸೋಮಾಪುರ ಗ್ರಾಮ ವ್ಯಾಪ್ತಿಯಲ್ಲಿ ವಿಶ್ವವಿದ್ಯಾಲಯ ಮಾಲೀಕತ್ವದ 6 ಎಕರೆ 4 ಗುಂಟೆ ಜಮೀನು ಇದ್ದು, ಬೈಪಾಸ್ ರಸ್ತೆ ನಿರ್ವಣವಾದಾಗ ಸುಮಾರು 3 ಎಕರೆ ಜಮೀನನ್ನು ಬಿಟ್ಟು ಕೊಡಲಾಗಿತ್ತು. ಉಳಿದ 3 ಎಕರೆಗೂ ಹೆಚ್ಚು ಭೂಮಿಯನ್ನು ಖಾಸಗಿ ವ್ಯಕ್ತಿಗಳು ಉಳುಮೆ ಮಾಡುತ್ತಿರುವ ಕುರಿತು ಪತ್ರಿಕೆ ವರದಿ ಮಾಡಿತ್ತು.

ಇದರಿಂದಾಗಿ, ವಿವಿ ಕುಲಪತಿ ಡಾ. ಹೊಸಮನಿ, ಕಟ್ಟಡ ಮತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಯೊಂದಿಗೆ ಜಮೀನಿಗೆ ತೆರಳಿ ಪರಿಶೀಲಿಸಿದರು.

ಈ ಕುರಿತು ಮಾತನಾಡಿದ ಅವರು, ಕುಲಪತಿಯವರ ನಿರ್ದೇಶನದಂತೆ ವಿಶ್ವವಿದ್ಯಾಲಯ ಅಧೀನದಲ್ಲಿರುವ ಆಸ್ತಿಗಳ ಗಡಿ ಗುರುತು ಮಾಡಲಾಗುವುದು. ವಿಶ್ವವಿದ್ಯಾಲಯ 888 ಎಕರೆ ಆಸ್ತಿ ಹೊಂದಿದ್ದು, ಆಸ್ತಿ, ಜಮೀನುಗಳ ಉತಾರಗಳನ್ನು ಕ್ರೋಢೀಕರಿಸಲಾಗುವುದು. ಆಸ್ತಿ ಅತಿಕ್ರಮಣ ಕುರಿತು ಸ್ಥಳ ಪರಿಶೀಲನೆ ಮಾಡಿ ಸಮಗ್ರ ವರದಿ ಸಿದ್ಧಪಡಿಸಿ ಇಡೀ ವಿವಿ ಆಸ್ತಿ ಸರ್ವೆ ಮಾಡಿಸಲಾಗುವುದು ಎಂದರು.