ಕೇವಲ ಆಶ್ವಾಸನೆ ನೀಡದೆ ಮದಗದಕೆರೆಗೆ ಶಾಶ್ವತವಾಗಿ ನೀರು ತುಂಬಿಸಿ

ಕಡೂರು: ಮದಗದಕೆರೆ ತುಂಬಿ ಕೋಡಿ ಬಿದ್ದಿರುವುದು ಸಾವಿರಾರು ರೈತ ಕುಟುಂಬಗಳಿಗೆ ಆಸರೆಯಾಗಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ತಿಳಿಸಿದರು.

ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್​ನಿಂದ ಬುಧವಾರ ಮದಗದಕೆರೆ ಕೆಂಚಮ್ಮ ದೇವಿಗೆ ಪೂಜೆ ಮತ್ತು ಮದಗದಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಹಳೇ ತೂಬು ದುರಸ್ತಿಗೆ ಕೆರೆ ನೀರನ್ನು ತಾಲೂಕು ಆಡಳಿತ ಖಾಲಿ ಮಾಡಿದ್ದರಿಂದ ಈ ಬಾರಿ ಕೆರೆ ತುಂಬುವುದಿಲ್ಲವೆಂದು ರೈತರು ಆತಂಕದಲ್ಲಿದ್ದರು. ಆದರೆ ತಾಯಿ ಕೃಪೆಯಿಂದ ಗಿರಿಶ್ರೇಣಿಗಳಲ್ಲಿ ಉತ್ತಮ ಮಳೆಯಾಗಿ ಮದಗದಕೆರೆ ತುಂಬಿರುವುದು ರೈತರಿಗೆ ಸಂತಸ ತಂದಿದೆ ಎಂದರು.

ಕೆರೆ ನೀರು ಕೋಡಿಯಲ್ಲಿ ಒಂದು ತಿಂಗಳು ಹರಿದರೆ ತಾಲೂಕಿನ 30ಕ್ಕೂ ಹೆಚ್ಚು ಕೆರೆ ತುಂಬಲಿದೆ. ಇದರಿಂದ ಅಂತರ್ಜಲ ಹೆಚ್ಚಾಗಲಿದೆ. ಈ ಹಿಂದಿನ ಎಲ್ಲ ಶಾಸಕರೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುವ ಬಗ್ಗೆ ಕೇವಲ ಆಶ್ವಾಸನೆ ನೀಡುತ್ತ ಬಂದಿದ್ದಾರೆ. ಕಳೆದ ಬಜೆಟ್​ನಲ್ಲಿ ಹೆಬ್ಬೆ ಯೋಜನೆಗೆ 100 ಕೋಟಿ ರೂ. ನೀಡಿರುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಘೊಷಿಸಿದರು. ಆದರೆ ಅದು ಘೊಷಣೆಯಾಗೇ ಉಳಿದಿದೆ ಎಂದು ಲೇವಡಿ ಮಾಡಿದರು.

ಎಮ್ಮೆದೊಡ್ಡಿ ಭಾಗದ 25ಕ್ಕೂ ಹೆಚ್ಚಿನ ಗ್ರಾಮಗಳ ಅಭಿವೃದ್ಧಿಗೆ ಯಾವ ಜನಪ್ರತಿನಿಧಿಯು ಮುಂದಾಗಿಲ್ಲ. ಇಲ್ಲಿನ ಬಗರ್​ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಬೇಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ನೀಡಿದ ಆದೇಶದಿಂದ 60 ಕ್ಕೂ ಹೆಚ್ಚಿನ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಣೆಯಾಗಿತ್ತು. ಇಂದಿನ ಶಾಸಕರು ಸಾಗುವಳಿ ಚೀಟಿ ನೀಡಲು ಮುಂದಾಗದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *