ನಗರಸಭೆ ಸದಸ್ಯನಿಂದ ಅಧಿಕಾರಿಗೆ ಹಲ್ಲೆ

ಉಡುಪಿ: ನಗರಸಭೆ ಆರೋಗ್ಯ ನಿರೀಕ್ಷಕ, ಚಿಕ್ಕಮಗಳೂರು ಜಿಲ್ಲೆ ತರಿಕೆರೆ ಅತ್ತಿಮೊಗ್ಗೆ ನಿವಾಸಿ ಎ.ಜೆ ಪ್ರಸನ್ನ ಕುಮಾರ್ ಎಂಬುವರ ಮೇಲೆ ನಗರಸಭೆ ಬಿಜೆಪಿ ಸದಸ್ಯ ಯೋಗೀಶ್ ಸಾಲ್ಯಾನ್ ಮಂಗಳವಾರ ಹಲ್ಲೆ ನಡೆಸಿರುವ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಯಗೊಂಡಿರುವ ಪ್ರಸನ್ನ ಕುಮಾರ್ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಯೋಗೀಶ್ ಸಾಲ್ಯಾನ್ ಮಂಗಳವಾರ ಬೆಳಗ್ಗೆ ನಗರಸಭೆ ಕಚೇರಿಯಲ್ಲಿದ್ದ ಪ್ರಸನ್ನ ಕುಮಾರ್‌ಗೆ ಕರೆ ಮಾಡಿ ಒಳಚರಂಡಿ ವಿಚಾರಕ್ಕೆ ಸಂಬಂಧಿಸಿ ಏರುಧ್ವನಿಯಲ್ಲಿ ಬೈದಿದ್ದಾರೆ. ಬಳಿಕ ಏಕಾಏಕಿ ಕಚೇರಿಗೆ ಬಂದು, ಕೈಮುಷ್ಠಿಯಿಂದ ಬಲಕಣ್ಣಿಗೆ ಹೊಡೆದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಪ್ರಸನ್ನ ದೂರಿನಲ್ಲಿ ತಿಳಿಸಿದ್ದಾರೆ. ಪ್ರಸನ್ನ ಕುಮಾರ್ ದಾಖಲಾಗಿರುವ ಆಸ್ಪತ್ರೆ ಬಳಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜಮಾಯಿಸಿದ್ದರು.

ಚರಂಡಿ ದುರಸ್ತಿ ವಿಚಾರ ಹಿನ್ನೆಲೆ: ವಡಭಾಂಡೇಶ್ವರ ವಾರ್ಡ್‌ನ ಒಳಚರಂಡಿ ಸ್ಲಾೃಬ್ ತೆಗೆದು ದುರಸ್ತಿಗೊಳಿಸುವಂತೆ ಯೋಗೀಶ್ ಸಾಲ್ಯಾನ್ ಹಲವು ಬಾರಿ ಸೂಚಿಸಿದ್ದರು ಎನ್ನಲಾಗಿದೆ. ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಕೆಲಸ ವಿಳಂಬವಾಗಿದೆ. ಈ ವಿಚಾರವಾಗಿ ಅಧಿಕಾರಿಗೆ ಬೈದು, ಹಲ್ಲೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಕ್ರಮಕ್ಕೆ ಡಿಸಿ, ಎಸ್‌ಪಿಗೆ ಮನವಿ: ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಬಿಜೆಪಿ ವಡಭಾಂಡೇಶ್ವರ ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿಯಿಂದ ಅಮಾನತು: ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಕ್ರಮ ಖಂಡನೀಯ. ಬಿಜೆಪಿ ಇಂತಹ ವಿಚಾರವನ್ನು ಸಹಿಸುವುದಿಲ್ಲ. ಹಲ್ಲೆಗೈದ ನಗರಸಭಾ ಸದಸ್ಯನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ಜನಪ್ರತಿನಿಧಿಗಳು ಅಧಿಕಾರಿ, ಸಿಬ್ಬಂದಿಯೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಪಕ್ಷದ ವತಿಯಿಂದ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *