5 ಲಕ್ಷದ ಪಡಿತರ ಅಕ್ಕಿ ವಶ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್
ಧುಮ್ಮನಸೂರ ಹತ್ತಿರದ ತೋಟದ ಮನೆ ಮೇಲೆ ಸಹಾಯಕ ಆಯುಕ್ತರ ನೇತೃತ್ವದ ತಂಡ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 5 ಲಕ್ಷ ಮೌಲ್ಯದ ಪಡಿತರ ಅಕ್ಕಿ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಮಾರುತ್ತಿರುವ ಜಾಲದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸಿ ಗ್ಯಾನೇಂದ್ರಕುಮಾರ ಗಂಗವಾರ್ ನೇತೃತ್ವದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ, ಗ್ರಾಮ ಲೆಕ್ಕಿಗ ರಾಹುಲ್ ವಾಂಜರಿ, ಆಹಾರ, ಪೊಲೀಸ್ ಇಲಾಖೆ ಅಧಿಕಾರಿಗಳು ವೀರಪ್ರಕಾಶ ಎಂಬುವರ ತೋಟದ ಮನೆ ಮೇಲೆ ಕಳೆದ 8ರಂದು ಮಧ್ಯರಾತ್ರಿ ದಾಳಿ ನಡೆಸಿದ್ದಾರೆ.

ಮೂರು ಗಂಟೆ ಪರಿಶೀಲನೆ ಬಳಿಕ 50 ಕೆಜಿಯ 785 ಬ್ಯಾಗ್ ಅಕ್ಕಿ, 2 ಟಾಟಾ ಎಸಿ ವಾಹನ, 4 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನೆ ಮಾಲೀಕ ವೀರಪ್ರಕಾಶ ಹಾಗೂ ಇಬ್ಬರು ಕೆಲಸಗಾರರ ವಿರುದ್ಧ ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆಯೂ ಹಲವಾರು ಕಡೆ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುವ ಜಾಲಕ್ಕೆ ಬ್ರೇಕ್ ಹಾಕಲಾಗಿತ್ತು. ಈಗ ಮತ್ತೆ ದಾಳಿ ನಡೆಸಿದ್ದರಿಂದ ಜಾಲ ಪತ್ತೆಯಾಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದು ತನಿಖೆ ಬಳಿಕವೇ ಗೊತ್ತಾಗಲಿದೆ.