ಮುಂಗಾರು ಆರ್ಭಟಕ್ಕೆ ನಲುಗಿದ ರಸ್ತೆಗಳು

ಚಿಕ್ಕಮಗಳೂರು: ಮುಂಗಾರು ಮಳೆ ಆರ್ಭಟಕ್ಕೆ ಜನಜೀವನ ಮಾತ್ರ ಅಸ್ತವ್ಯಸ್ತಗೊಳ್ಳಲಿಲ್ಲ. ರಸ್ತೆಗಳೂ ಹಾಳಾಗಿವೆ. ಹೆದ್ದಾರಿ, ಜಿಲ್ಲಾ ಮುಖ್ಯ ಮತ್ತು ಗ್ರಾಮೀಣ ರಸ್ತೆಗಳು ಶಿಥಿಲಗೊಂಡು ಪ್ರಯಾಣಿಕರು ಅಂಗೈಲಿ ಜೀವ ಹಿಡಿದುಕೊಂಡು ಪ್ರಯಾಣ ಮಾಡುವ ಸ್ಥಿತಿ ನಿರ್ವಣವಾಗಿದೆ.

ಜಿಲ್ಲೆಯಲ್ಲಿ ಹಾಳಾಗಿರುವ ರಸ್ತೆ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಸರ್ಕಾರಕ್ಕೆ 34.17 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿವೆ. ನೀರಿನಲ್ಲಿ ಮುಳುಗಿ ಹೊರನಾಡು-ಕಳಸ ನಡುವಿನ ಸಂಚಾರಕ್ಕೆ ಸಂಚಕಾರ ತರುವ ಹೆಬ್ಬಾಳೆ ಸೇತುವೆ ಮೇಲ್ಮಟ್ಟಕ್ಕೆ ಎತ್ತರಿಸಿ ಪುನರ್ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ 15 ಕೋಟಿ ರೂ. ಯೋಜನೆ ರೂಪಿಸಿದೆ.

ಜಿಪಂ ಇಂಜಿನಿಯರ್ ವಿಭಾಗ ವ್ಯಾಪ್ತಿಯ ಗ್ರಾಮೀಣ ರಸ್ತೆಗಳು 290.69 ಕಿ.ಮೀ. ಹಾಗೂ 93 ಸೇತುವೆಗಳು ಹಾಳಾಗಿವೆ. ಇವುಗಳ ದುರಸ್ತಿಗೆ 25.87 ಕೋಟಿ ರೂ. ಅಗತ್ಯವೆಂದು ಪ್ರಸ್ತಾವನೆ ಸಲ್ಲಿಸಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿ ಬರುತ್ತವೆ. ಇಲ್ಲಿ 42.70 ಕಿ.ಮೀ. ರಸ್ತೆ ಹಾಗೂ 39 ಸೇತುವೆ ಹಾನಿಯಾಗಿದ್ದು, ದುರಸ್ತಿಗೆ 8.30 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿವೆ.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಎರಡು ಇದ್ದು, ಚಾರ್ವಡಿ ಘಾಟಿ ರಸ್ತೆ ಕೆಲವು ಕಡೆ ಹಾನಿಯಾಗಿದ್ದು, ಅದನ್ನು ಪುನರ್ ನಿರ್ವಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ರಸ್ತೆ ಹಾಳಾಗಿರುವ ಮತ್ತು ಸೇತುವೆ ಹಾನಿಯಾಗಿರುವ ಮಾಹಿತಿ ಇಲ್ಲ.

ಲೋಕೋಪಯೋಗಿ ವಿಭಾಗ ವ್ಯಾಪ್ತಿಯಲ್ಲಿ ಚಿಕ್ಕಮಗಳೂರು, ತರೀಕೆರೆ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಮತ್ತು ಕಡೂರು ತಾಲೂಕುಗಳಲ್ಲಿ ರಾಜ್ಯ ಹೆದ್ದಾರಿ 535.71ಕಿ.ಮೀ ಮತ್ತು ಜಿಲ್ಲಾ ಮುಖ್ಯ ರಸ್ತೆ ಒಟ್ಟು 1632.82 ಕಿ.ಮೀ ಇದೆ. ವಾಡಿಕೆಗಿಂತ ವಿಪರೀತ ಮಳೆಯಾಗಿರುವುರಿಂದ ರಸ್ತೆ ಸೇತುವೆಗಳಿಗೆ ಹಾನಿಯಾಗಿದೆ.

ರಭಸವಾಗಿ ನೀರು ಹರಿದಿರುವುದರಿಂದ ಹಲವು ಕಡೆ ರಸ್ತೆ ಮೇಲ್ಪದರ ಕಿತ್ತು ಹೋಗಿ ಜಲ್ಲಿ ಮಾತ್ರ ಉಳಿದುಕೊಂಡಿದೆ. ಕೆಲವು ಕಡೆ ಜಲ್ಲಿಯೂ ಕೊಚ್ಚಿ ಹೋಗಿ ಮಣ್ಣಿನ ರಸ್ತೆ ಗುಂಡಿ ಬಿದ್ದಿವೆ.

ರಾಜ್ಯ ಹೆದ್ದಾರಿ ವಿರಾಜ್​ಪೇಟೆ-ಬೈಂದೂರು ರಸ್ತೆ ಕಿ.ಮೀ 207 ಮತ್ತು 210ರ ಮಧ್ಯೆ ಹಲವಾರು ಕಡೆ ರಸ್ತೆ ಅಂಚು ತೀವ್ರವಾಗಿ ಕುಸಿದಿದೆ. ವಾಹನ ಸವಾರರು ರಸ್ತೆಯ ಅಂಚಿಗೆ ಹೋಗದಂತೆ ತಾತ್ಕಾಲಿಕವಾಗಿ ಮರದ ಸುರಕ್ಷತಾ ಬೇಲಿ ಹಾಕಿ ರಿಬ್ಬನ್​ಗಳನ್ನು ಕಟ್ಟಲಾಗಿದೆ. ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ಹಿರೇಬೈಲು ಸಮೀಪದ ಚನ್ನಡ್ಲು ಗ್ರಾಮದ ಬಳಿ ಜಿಲ್ಲಾ ಮುಖ್ಯ ರಸ್ತೆ ಮೇಲೆ ಅಪಾರ ಪ್ರಮಾಣದ ಕುಸಿದ ಗುಡ್ಡದ ಮಣ್ಣು ತೆರವು ಮಾಡಿ ತಾತ್ಕಾಲಿಕ ಸಂಚಾರಕ್ಕೆ ಅನುವು ಮಾಡಲಾಗಿದೆ. ಕುಸಿದಿರುವ ಮಣ್ಣು ಪೂರ್ಣ ತೆರವು ಮಾಡಲು ಹೋದರೆ ಗುಡ್ಡದ ಮೇಲಿನ ಎರಡು ಮನೆಗಳಿಗೆ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ಮಳೆಗಾಲ ಮುಗಿದ ಮೇಲೆ ದುರಸ್ತಿಗೆ ಮಾಡಲು ಇಂಜಿನಿಯರ್​ಗಳು ಯೋಚಿಸಿದ್ದಾರೆ.

ಕೋಟಿ ವೆಚ್ಚ: ಜಯಪುರ-ಬಾಳೆಹೊನ್ನೂರು ಸಂರ್ಪಸುವ ಮುಖ್ಯರಸ್ತೆಯಲ್ಲಿ ರಸ್ತೆ ಅಂಚು 60ಅಡಿಗೂ ಹೆಚ್ಚು ಆಳಕ್ಕೆ ಕುಸಿದಿದ್ದು, ತಾತ್ಕ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಮಣ್ಣು ಜರುಗದಂತೆ ತಡೆಗೋಡೆ ನಿರ್ವಿುಸಲು ಒಂದು ಕೋಟಿ ರೂ. ವೆಚ್ಚ ತಗಲುವುದಾಗಿ ಅಂದಾಜಿಸಲಾಗಿದೆ.

 

ಹೆಬ್ಬಾಳೆ ಸೇತುವೆ ಪುನರ್ ನಿರ್ವಣಕ್ಕೆ 15 ಕೊಟಿ

ಜಿಲ್ಲಾ ಮುಖ್ಯ ರಸ್ತೆಯಲ್ಲಿರುವ ಹೆಬ್ಬಾಳೆ ಮುಳುಗು ಸೇತುವೆ ಮತ್ತು ಇಲ್ಲಿನ ರಸ್ತೆ ತಾತ್ಕಾಲಿಕ ದುರಸ್ತಿಗೆ 25 ಲಕ್ಷ ರೂ. ಬೇಕಿದೆ. ಹಾಗಾಗಿ ನೀರಲ್ಲಿ ಮುಳುಗಿ ಹೊರನಾಡು-ಕಳಸ ನಡುವಿನ ಪ್ರಯಾಣಕ್ಕೆ ತೊಂದರೆ ಮಾಡುವ ಈ ಸೇತುವೆ ಎತ್ತರಿಸಿ ಪುನರ್ ನಿರ್ವಿುಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿದ್ದು, 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿದೆ. ಮುಂಗಾರು ಮಳೆಗಾಲದ ಒಂದೂವರೆ ತಿಂಗಳಲ್ಲಿ ಭದ್ರಾ ನದಿಯ ಈ ಸೇತುವೆ ಐದು ಬಾರಿ ಮುಳುಗಿದೆ.

 

ಮೂರು ವರ್ಷ ಮಳೆ ಇಲ್ಲದೆ ಬಿಸಿಲು ಕಾದು ಈಗ ನಿರಂತರ ಮಳೆ ಬರುತ್ತಿರುವುದರಿಂದ ರಸ್ತೆ, ಸೇತುವೆಗಳು ಹೆಚ್ಚು ಹಾನಿಗೀಡಾಗುತ್ತಿವೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಹಾನಿ ತಪ್ಪಿಸುವುದು ಕಷ್ಟ. ಸಂಚಾರಕ್ಕೆ ತೊಂದರೆಯಾಗದಂತೆ ತಾತ್ಕಾಲಿಕ ದುರಸ್ತಿ ವ್ಯವಸ್ಥೆ ಮಾಡಲಾಗಿದೆ. ಮಳೆಗಾಲ ಮುಗಿದ ನಂತರವೇ ಪೂರ್ಣ ಪ್ರಮಾಣದ ದುರಸ್ತಿ ಮತ್ತು ನಿರ್ಮಾಣ ಮಾಡಲಾಗುವುದು. ಹಾನಿಗೀಡಾದ ಪ್ರದೇಶದಲ್ಲಿ ಎಚ್ಚರಿಕೆ ಬೋರ್ಡ್ ಹಾಕಲಾಗಿದ್ದು, ಪ್ರಯಾಣಿಕರು, ಬೈಕ್ ಸವಾರರು ಪಾಲನೆ ಮಾಡಿದರೆ ತೊಂದರೆ ಆಗುವುದಿಲ್ಲ.

| ಎಂ.ಪಿ. ಆನಂದಮೂರ್ತಿ, ಇಇ, ಲೋಕೋಪಯೋಗಿ ಇಲಾಖೆ