ವಿಧಾನಸಭೆ ಕಾರ್ಯದರ್ಶಿ ಅಮಾನತು

ಬೆಂಗಳೂರು: ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ. ವಿಧಾನಮಂಡಲ ಇತಿಹಾಸದಲ್ಲಿ ಈ ಹುದ್ದೆಯಲ್ಲಿ ಇರುವವರ ಮೇಲೆ ಇಂಥ ಕಠಿಣ ಕ್ರಮ ಕೈಗೊಂಡಿರುವುದು ಇದೇ ಮೊದಲು.

ಬೆಳಗಾವಿಯಲ್ಲಿ 2016 ಮತ್ತು 2017ರಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನ ಖರ್ಚಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 10ರಿಂದ 12 ಕೋಟಿ ರೂ. ಅನಗತ್ಯ ಹೊರೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ರಾಜ್ಯ ಲೆಕ್ಕಪತ್ರ ಇಲಾಖೆ ಹೆಚ್ಚುವರಿ ನಿರ್ದೇಶಕ ಶಿವರುದ್ರಪ್ಪ ನೇತೃತ್ವದ ಐವರು ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಲಾಗಿತ್ತು. ತನಿಖೆ ನಡೆಸಿದ ತಂಡ ಮುಖ್ಯ ಕಾರ್ಯದರ್ಶಿ ಮೂಲಕ ವಿಧಾನಸಭಾಧ್ಯಕ್ಷರಿಗೆ ವರದಿ ಸಲ್ಲಿಸಿತ್ತು.

ಪೆಂಡಾಲ್ ನಿರ್ವಣಕ್ಕೆ 9.32 ಕೋಟಿ ರೂ., ಸುವರ್ಣಸೌಧಕ್ಕೆ ಸುಣ್ಣಬಣ್ಣ ಬಳಿಯಲು 2.48 ಕೋಟಿ ರೂ., ಸೊಳ್ಳೆ ಪರದೆ ಬಾಡಿಗೆ 1.84 ಕೋಟಿ ರೂ., ರಾಸಾಯನಿಕ ಶೌಚಗೃಹಕ್ಕೆ 2.42 ಕೋಟಿ ರೂ., ಗಣ್ಯರ ಊಟದ ಶುಲ್ಕ 45.48 ಲಕ್ಷ ರೂ., ಸ್ವಚ್ಛತಾ ಸಾಮಗ್ರಿಗಳ ಖರೀದಿಗೆ 13.28 ಲಕ್ಷ ರೂ. ವೆಚ್ಚ ಸೇರಿ 18 ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದವು. ಇವೆಲ್ಲಕ್ಕೂ 10ರಿಂದ 12 ಕೋಟಿ ರೂ. ವೆಚ್ಚವಾಗಿದೆ ಎಂದು ಎಸ್.ಮೂರ್ತಿ ಸರ್ಕಾರಕ್ಕೆ ಲೆಕ್ಕ ತೋರಿಸಿದ್ದರು. ಆದರೆ, ಈ ಲೆಕ್ಕಕ್ಕೆ ತಾಳೆಯಾಗುತ್ತಿಲ್ಲ ಎಂದು ಲೆಕ್ಕ ಪರಿಶೋಧನಾ ತಂಡ ನೀಡಿದ ವರದಿಯನ್ವಯ ಮೂರ್ತಿ ಅವರ ಅಧಿಕಾರಾವಧಿ ಇನ್ನೂ 10 ವರ್ಷ ಇದ್ದರೂ ಅಮಾನತುಗೊಳಿಸಿ ಆದೇಶಿಸಲಾಗಿದೆ. 2017ರ ಅಧಿವೇಶನಕ್ಕೆ -ಠಿ;21.57 ಕೋಟಿ ವೆಚ್ಚವಾಗಿದ್ದು, ಯಾವುದಕ್ಕೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಜತೆಗೆ ಸ್ಪೀಕರ್​ಗೆ ತಪು್ಪ ಮಾಹಿತಿ ನೀಡಿದ್ದಾರೆಂದು ಸಿಎಜಿ ತನ್ನ ವರದಿಯಲ್ಲಿ ಹೇಳಿದೆ. ಸದ್ಯ ವಿಧಾನಸಭೆಯ ನಿರ್ದೇಶಕಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ಕಾರ್ಯ ದರ್ಶಿ ಹುದ್ದೆಯ ಹೊಣೆ ವಹಿಸಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಪ್ರತಿಕ್ರಿಯಿಸಿ, ನನ್ನ ಅವಧಿಯಲ್ಲಿ ಕಾನೂನುಬದ್ಧ ಖರ್ಚು ಮಾಡಲಾಗಿದೆ. ಮೂರ್ತಿ ಅವರನ್ನು ಏಕೆ ಅಮಾನತು ಮಾಡಲಾಗಿದೆ ಎಂಬುದು ಗೊತ್ತಿಲ್ಲ ಎಂದಿದ.

ಕೋರ್ಟ್​ನಲ್ಲಿ ಪ್ರಶ್ನಿಸುವೆ

ಶಾಸಕರ ಭವನದಲ್ಲಿ ಸೋಲಾರ್ ಅಳವಡಿಕೆಗೆ ಸ್ಪೀಕರ್ ರಮೇಶ್​ಕುಮಾರ್ ಅವರ ಸಂಬಂಧಿಕರಿಗೆ ಟೆಂಡರ್ ಇಲ್ಲದೆ ಆದೇಶ ಕೊಡದಿರುವುದರಿಂದ ನನ್ನ ವಿರುದ್ಧ ಜಿದ್ದು ಸಾಧಿಸಿದ್ದಾರೆ ಎಂದು ಎಸ್. ಮೂರ್ತಿ ಆರೋಪಿಸಿದ್ದಾರೆ. ನನ್ನ ಅಮಾನತು ಮಾಡಿರುವ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ. ಸಿಎಜಿ ವರದಿಯಲ್ಲಿ ಇಲ್ಲದ ಆರೋಪ ಏಕಾಏಕಿ ಉದ್ಭವವಾಗಿವೆ ಎಂದು ತಿಳಿಸಿದ್ದಾರೆ.