ಈ ಗೆಲುವು ಕಾಂಗ್ರೆಸ್​ಗೂ ಬಿಜೆಪಿಗೂ ಅನಿರೀಕ್ಷಿತ: ತೆಲಂಗಾಣ, ಮಿಜೋರಾಂ ಮಾತ್ರ ನಿರೀಕ್ಷಿತ

ಬೆಂಗಳೂರು: ಇಡೀ ದೇಶವೇ ಎದುರು ನೋಡುತ್ತಿದ್ದ, ಲೋಕಸಭೆ ಚುನಾವಣೆಗೆ ಕೈಮರ ಎಂದೇ ಪರಿಗಣಿತವಾಗಿದ್ದ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಮೀಕ್ಷೆಗಳು, ನಿರೀಕ್ಷೆಗಳನ್ನೆಲ್ಲ ಮೀರಿ ಕಾಂಗ್ರೆಸ್​ ಗಣನೀಯ ಸಾಧನೆ ಮಾಡಿದ್ದರೆ, ತೀವ್ರ ಸೆಣಸಾಟದ ನಡುವೆಯೂ ಮೂರು ಪ್ರಮುಖ ರಾಜ್ಯಗಳನ್ನು ಕಳೆದುಕೊಂಡಿರುವ ಬಿಜೆಪಿ, ಜಯಕ್ಕಿಂತಲೂ ಮುಖ್ಯವಾಗಿ ಎಚ್ಚರಿಕೆ ಸಂದೇಶವೊಂದನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಟಿಆರ್​ಎಸ್​, ಎಂಎನ್​ಎಫ್​ ವಿಷಯದಲ್ಲಿ ಅಂತದ್ದೇನೂ ಅನಿರೀಕ್ಷಿತ ಬೆಳವಣಿಗೆ ಘಟಿಸಿಲ್ಲ.

ಲೋಕಸಭೆ ಚುನಾವಣೆಗೆ ಇನ್ನಾರು ತಿಂಗಳ ಸಮಯವಿರುವಾಗಲೇ ಎದುರಾದ ಈ ವಿಧಾನಸಭೆ ಚುನಾವಣೆಗಳು ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿರುವ ದೇಶದ ಹೃದಯ ಸ್ಥಾನದಲ್ಲಿ ಚುನಾವಣೆ ನಡೆದಿದ್ದೂ ಕೂಡ ಈ ಮಟ್ಟಿಗಿನ ಮಹತ್ವಕ್ಕೆ ಕಾರಣವಾಗಿತ್ತು. ರಾಜಸ್ಥಾನ, ತೆಲಂಗಾಣವನ್ನು ಹೊರತು ಪಡಿಸಿದರೆ, ಮಧ್ಯಪ್ರದೇಶ, ಛತ್ತೀಸಗಢ ಮತ್ತು ಮಿಜೋರಾಂನಲ್ಲಿ ಬಿಜೆಪಿ ಪಾರಮ್ಯ ಮೆರೆಯುವ ಅಭಿಪ್ರಾಯಗಳು ವ್ಯಕ್ತವಾಗಿದ್ದವಾದರೂ, ಫಲಿತಾಂಶ ಪ್ರಕಟವಾದಾಗ ಎಲ್ಲವೂ ತಲೆಕೆಳಗಾಗಿವೆ. ಈ ಫಲಿತಾಂಶ ಕಾಂಗ್ರೆಸ್​ಗೂ ಅನಿರೀಕ್ಷಿತ, ಬಿಜೆಪಿಗೂ ಅನಿರೀಕ್ಷಿತ ಎಂಬಂತೆ ಆಗಿ ಹೋಗಿದೆ.

ಈ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವ ಸಾಧ್ಯತೆಗಳಿದ್ದ ಕಾಂಗ್ರೆಸ್​ಗೆ ಅಧಿಕಾರ ಹಿಡಿಯುವ ನಿರೀಕ್ಷೆ ಇದ್ದದ್ದು ರಾಜಸ್ಥಾನದಲ್ಲಿ ಮಾತ್ರ. ಆದರೆ, ಛತ್ತೀಸಗಢದಲ್ಲಿ ಕಾಂಗ್ರೆಸ್​ ತ್ರಿವಿಕ್ರಮ ಸಾಧನೆ ಮೆರೆದಿದೆ. ಮೃಗೀಯ ಬಹುಮತವೊಂದನ್ನು ಕಾಂಗ್ರೆಸ್​ ಅಲ್ಲಿ ಪಡೆದುಕೊಂಡಿದೆ. ಅದೇ ಹೊತ್ತಲ್ಲೇ ಮಧ್ಯಪ್ರದೇಶದಲ್ಲೂ ಸಾಧನೆ ಮಾಡಿರುವ ಕಾಂಗ್ರೆಸ್​ ಸರ್ಕಾರ ರಚನೆ ಮಾಡುವ ಹಕ್ಕನ್ನು ತನ್ನ ಬಳಿಯೇ ಇಟ್ಟುಕೊಂಡಿದೆ.

ತೆಲಂಗಾಣದಲ್ಲಿ ನಿರೀಕ್ಷೆ ಇದ್ದಂತೇ ಟಿಆರ್​ಎಸ್​ ಗೆದ್ದಿದೆ. ಮಿಜೋರಾಂನಲ್ಲಿ 10 ವರ್ಷಗಳ ಆಡಳಿತ ನಡೆಸಿದ್ದ ಕಾಂಗ್ರೆಸ್​ ಸಹಜವಾಗಿಯೇ ಆಡಳಿತ ವಿರೋಧಿ ಅಲೆಯ ಕಾರಣಕ್ಕೆ ಸೋತು ಸುಣ್ಣವಾಗಿದೆ. ಈ ಮೂಲಕ ಈಶಾನ್ಯ ರಾಜ್ಯಗಳ ತನ್ನ ಕಡೇ ನೆಲೆಯನ್ನೂ ಕಡೆದುಕೊಂಡಿತು. ಆದರೆ, ಇಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂದುಕೊಂಡಿದ್ದ ಬಿಜೆಪಿ ಒಂದು ಸ್ಥಾನವನ್ನು ಗಳಿಸಿ ಖಾತೆ ತೆರೆದಿದೆಯೇ ಹೊರತು ತನ್ನ ಆಸೆಯನ್ನು ಈಡೇರಿಸಿಕೊಂಡಿಲ್ಲ.

ಕಾಂಗ್ರೆಸ್​ ಪರವಾದ ಅಲೆ, ಬಿಜೆಪಿ ವಿರುದ್ಧವಾದ ಅಲೆ ಎಂಬ ಚರ್ಚೆಗಳಿಗೂ ಮುಖ್ಯವಾಗಿ ಎಲ್ಲ ರಾಜ್ಯಗಳಲ್ಲೂ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದೆ. ರಾಜಸ್ಥಾನದಲ್ಲಿ ಅಧಿಕಾರ ನಡೆಸಿದ್ದ ವಸುಂಧರಾ ರಾಜೆ ಅವರ ಸರ್ಕಾರಕ್ಕಾಗಲಿ, ಮಧ್ಯಪ್ರದೇಶದಲ್ಲಿ ಸರ್ಕಾರ ಹೊಂದಿದ್ದ ಶಿವರಾಜ್​ ಸಿಂಗ್​ ಚೌವ್ಹಾಣ್​ ಅವರ ವಿಚಾರದಲ್ಲಾಗಲಿ, ಛತ್ತೀಸಗಢದಲ್ಲಿ ಸರ್ಕಾರ ಹೊಂದಿದ್ದ ರಮಣ್​ಸಿಂಗ್​ ವಿಷಯದಲ್ಲಾಗಲಿ, ಮಿಜೋರಾಂನ ವಿಚಾರದಲ್ಲಾಗಲಿ ಇಲ್ಲೆಲ್ಲವೂ ಈಗಾಗಲೇ ಇದ್ದ ಸರ್ಕಾರದ ವಿರುದ್ಧದ ಅಲೆಯಿಂದಾಗಿ ಮತ್ತೊಂದು ಪಕ್ಷಕ್ಕೆ ಅಧಿಕಾರ ಸಿಕ್ಕಿದೆಯೇ ಹೊರತು, ಅದು ಪಕ್ಷಗಳಿಗೆ ಇರುವ ಪೂರಕವಾದ ಅಲೆಯಿಂದಾಗಿ ಅಲ್ಲ. ಹಾಗಾಗಿ ಈ ಚುನಾವಣೆ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದೂ ಭಾವಿಸಬಹುದೇನೋ. ಆದರೆ, ಆಡಳಿತ ವಿರೋಧಿ ಅಲೆ ಎಂಬುದಕ್ಕೆ ತೆಲಂಗಾಣ ಹೊರತಾಗಿರುವುದು ಅಲ್ಲಿನ ಫಲಿತಾಂಶದ ಮೂಲಕ ವ್ಯಕ್ತವಾಗಿದೆ.

ಕುತೂಹಲ ಇದ್ದದ್ದು ಮಧ್ಯಪ್ರದೇಶದಲ್ಲೇ
ಈ ಪಂಚರಾಜ್ಯಗಳ ಚುನಾವಣೆಯಲ್ಲಿ ಆರಂಭದಿಂದಲೂ ಕುತೂಹಲ ಉಳಿಸಿಕೊಂಡಿದ್ದ ರಾಜ್ಯ ಮಧ್ಯಪ್ರದೇಶ. ದೊಡ್ಡ ರಾಜ್ಯ ಎಂಬ ಕಾರಣಕ್ಕೆ ಇದನ್ನು ಉಳಿಸಿಕೊಳ್ಳಲು, ಗಳಿಸಿಕೊಳ್ಳಲು ಬಿಜೆಪಿ ಕಾಂಗ್ರೆಸ್​ ಸೆಣಸಾಟ ನಡೆಸಿವೆ. ಚುನಾವಣಾ ಫಲಿತಾಂಶ ಪ್ರಕಟಣೆಯಲ್ಲೂ ಹೀಗೇ ಆಯಿತು. ಹಾವು ಏಣಿ ಆಟದಲ್ಲೇ ಫಲತಾಂಶ ಹೊರಬಿದ್ದಿದೆ. ಅಂತಿಮವಾಗಿ ಕಾಂಗ್ರೆಸ್ ಸರಳ ಬಹುಮತದ ಹೊಸ್ತಿಲಲ್ಲಿ ಬಂದು ನಿಂತಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಪಕ್ಷೇತರರ ಬೆಂಬಲ ಅನಿವಾರ್ಯವಾಗಿದೆ.

ರಾಜಸ್ಥಾನದಲ್ಲಿ ಯಾರು ಮುಖ್ಯಮಂತ್ರಿ?
ಚುನಾವಣೆ ಆರಂಭಕ್ಕೂ ಮೊದಲಿನಿಂದಲೂ ರಾಜಸ್ಥಾನ ಈ ಬಾರಿ ಕಾಂಗ್ರೆಸ್​ಗೇ ಎಂದು ಹೇಳಲಾಗುತ್ತಿತ್ತು. ಆದರಂತೇ ಆಗಿದೆ ಕೂಡ. ಆದರೆ, ಇಲ್ಲಿ ಸಮಸ್ಯೆಯೊಂದು ತಲೆದೋರಿದೆ. ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿಯಾಗಲು ಮಾಜಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಮತ್ತು ಕಾಂಗ್ರೆಸ್​ ಆಧ್ಯಕ್ಷ ಸಚಿನ್​ ಪೈಲಟ್​ ನಡುವೆ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಅಲ್ಲಿ ಮುಖ್ಯಮಂತ್ರಿಯ ವಿಚಾರದಲ್ಲಿ ಕುತೂಹಲಗಳಿವೆ.

ಇನ್ನುಳಿದಂತೆ, ಮಿಜೋರಾಂನಲ್ಲಿ ಕಾಂಗ್ರೆಸ್​ನ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್​ ತನ್ಹಾವ್ಲಾ ಸೋತಿದ್ದು, ಛತ್ತೀಸ್​ಗಢದಲ್ಲಿ ಕಾಂಗ್ರೆಸ್​ಗೆ ತೊಡಕಾಗಲಿದ್ದಾರೆ ಎಂದು ಭಾವಿಸಿದ್ದ ಅಜಿತ್​ ಜೋಗಿ ಅವರು ಯಾವುದೇ ಹಂತದಲ್ಲೂ ಪ್ರತಿರೋಧ ತೋರದೆ ತಮ್ಮ ಪಕ್ಷದ ಜೊತೆಗೇ ತಾವೂ ಸೋತಿದ್ದು ಈ ಚುನಾವಣೆಯ ಗಮನಾರ್ಹ ಸಂಗತಿಗಳು.

Live Blog: ಪಂಚರಾಜ್ಯ ಚುನಾವಣೆ- ಮಧ್ಯಪ್ರದೇಶ, ಮಿಜೋರಾಂ ಮತದಾನ

ರಾಜಸ್ಥಾನದಲ್ಲಿ ಈ ಬಾರಿ ಕಾಂಗ್ರೆಸ್‌ ಸರ್ಕಾರ; ಆಢಳಿತಾರೂಢ ಬಿಜೆಪಿಗೆ ಹೊಡೆತ

ಮಧ್ಯಪ್ರದೇಶದಲ್ಲಿ ಗೆಲುವಿನ ಹಾವು ಏಣಿ ಆಟ; ಬಿಜೆಪಿಗೆ ‘ಕೈ’ ಕೊಡುವುದೇ ಅದೃಷ್ಟ?

ಮಿಜೋರಾಂ: ಹ್ಯಾಟ್ರಿಕ್​ ಸಿಎಂ ಗಾದಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​ನ ತನ್ಹಾವ್ಲಾ ಸೋಲು, ಎಂಎನ್‌ಎಫ್‌ ಸರ್ಕಾರ ರಚನೆ ಖಚಿತ!

ರಮಣ್‌ ಸಿಂಗ್‌ರ 4ನೇ ಅವಧಿಗೆ ಮುಖ್ಯಮಂತ್ರಿ ಆಸೆಗೆ ತಣ್ಣೀರು, ಛತ್ತೀಸ್‌ಗಢ ಕಾಂಗ್ರೆಸ್‌ ಮಡಿಲಿಗೆ

ಕೆಸಿಆರ್‌ ನೇತೃತ್ವದ ಟಿಆರ್‌ಎಸ್‌ 2ನೇ ಬಾರಿಗೆ ತೆಲಂಗಾಣದ ಗದ್ದುಗೆ ಏರುವುದು ಫಿಕ್ಸ್‌!