ಪಂಚ ಫಲಿತಾಂಶ, ರಾಜ್ಯದಲ್ಲಿ ಸಂಚಲನ

ಬೆಂಗಳೂರು: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಮೈತ್ರಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಯ ಬಗ್ಗೆ ಹಾಗೂ ಬಿಜೆಪಿ ತನ್ನ ಧೋರಣೆಗಳ ಬಗ್ಗೆ ಮರು ಚಿಂತಿಸುವಂತೆ ಮಾಡಿದೆ.

ಲೋಕಸಭಾ ಚುನಾವಣೆಯಲ್ಲಿ ವಿಧಾನಸಭೆ ಫಲಿತಾಂಶ ತೀರಾ ಪರಿಣಾಮ ಬೀರುವುದಿಲ್ಲ ಎಂಬುದು 2014ರಲ್ಲೇ ಸಾಬೀತಾಗಿದೆ. ಆದರೆ ಒಟ್ಟಾರೆ ಚುನಾವಣೆ ನಡೆಸುವ ಶೈಲಿಯಲ್ಲಿ, ಮೈತ್ರಿಕೂಟ ರಚನೆಯಲ್ಲಿ ವಹಿಸಬೇಕಾದ ಕೆಲ ಎಚ್ಚರಿಕೆ-ಮುನ್ಸೂಚನೆಗಳನ್ನು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ನೀಡಿದೆ.

ಮೈತ್ರಿ ಕುರಿತು ಕಾಂಗ್ರೆಸ್ ಚಿಂತನೆ: ಪ್ರಧಾನಿ ಮೋದಿ ಅಲೆ, ಯಡಿಯೂರಪ್ಪ ನಾಯಕತ್ವ ಎದುರಿಸಲು ಜೆಡಿಎಸ್ ಜತೆಗಿನ ಮೈತ್ರಿ ಮೂಲಕವೇ ಲೋಕಸಭೆಗೆ ಸ್ಪರ್ಧಿಸುವುದು ಅನಿವಾರ್ಯ ಎಂಬಂತಿದ್ದ ಕಾಂಗ್ರೆಸ್​ಗೆ ತೆಲಂಗಾಣದ ಚುನಾವಣೆ ಮರುಚಿಂತನೆಗೆ ಹಚ್ಚುವ ಸೂಚನೆ ನೀಡಿದೆ. ಉತ್ತಮ ಸಾಧನೆ ಮಾಡಿರುವ ರಾಜಸ್ಥಾನ, ಛತ್ತೀಸ್​ಗಢ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಆದರೆ ಟಿಡಿಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದ ತೆಲಂಗಾಣದಲ್ಲಿ ಸೋಲನುಭವಿಸಿದೆ. ತೆಲಂಗಾಣ ರಾಜ್ಯವನ್ನು ವಿರೋಧಿಸಿಕೊಂಡೇ ಬಂದಿದ್ದ ಟಿಡಿಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಈ ಸ್ಥಿತಿ ಬಂದಿದೆ. ಅದೇ ರೀತಿ ರಾಜ್ಯದಲ್ಲೂ ಜೆಡಿಎಸ್ ಪರ ರಾಜ್ಯಾದ್ಯಂತ ಉತ್ತಮ ವಾತಾವರಣವಿಲ್ಲ. ಹಳೇ ಮೈಸೂರಿನ ಕೆಲ ಜಿಲ್ಲೆಗಳಿಗೆ ಅದರ ವ್ಯಾಪ್ತಿ ಸೀಮಿತ. ಉತ್ತರ ಕರ್ನಾಟಕ ವಿರೋಧಿ, ನಿರ್ದಿಷ್ಟ ಸಮುದಾಯಕ್ಕೆ ಸೀಮಿತ ಎಂಬ ಮಾತುಗಳೂ ಈ ಪಕ್ಷಕ್ಕಿವೆ. ಹೀಗಾಗಿ ಜೆಡಿಎಸ್ ಜತೆಗಿನ ಮೈತ್ರಿ, ಅದರ ವ್ಯಾಪ್ತಿ, ಅದರ ಮಿತಿಗಳನ್ನು ಸ್ಪಷ್ಟಪಡಿಸಿಕೊಂಡು ಮುನ್ನಡೆಯುವುದು ಸೂಕ್ತ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಚರ್ಚೆ ನಡೆದು ಸ್ಪಷ್ಟತೆ ಬರಬೇಕು. ಜೆಡಿಎಸ್​ಗೆ ತಲೆಬಾಗುವುದೇ ಮೈತ್ರಿ ಧರ್ಮವಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಚರ್ಚೆ ಆಗುತ್ತಿವೆ.

ಸಚಿವಾಕಾಂಕ್ಷಿ ಶಾಸಕರು ಗಪ್​ಚುಪ್

ಶಾಸಕರು ಈಗ ರಾಜೀನಾಮೆ ನೀಡುವ ಬೆದರಿಕೆ ಹಾಕುವ ಸ್ಥಿತಿಯಲ್ಲಿಲ್ಲ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡುವುದರೊಂದಿಗೆ ಹೈಕಮಾಂಡ್ ಮತ್ತೊಮ್ಮೆ ಗಟ್ಟಿಯಾಗಿದೆ. ಅಧಿಕಾರ ನೀಡದಿದ್ದರೆ ಬೇರೆ ಪಕ್ಷಕ್ಕೆ ಹೋಗುತ್ತೇವೆ ಎಂಬ ಬೆದರಿಕೆ ಹಾಕಲಾಗದು.

ಕಾರ್ಯತಂತ್ರ ಬದಲಿಸಿಕೊಳ್ಳುವ ಸ್ಥಿತಿಯಲ್ಲಿ ಬಿಜೆಪಿ

ಕೇವಲ ಪ್ರಧಾನಿ ನರೇಂದ್ರ ಮೋದಿ ಅಲೆಯಿಂದಲೇ ಗೆಲ್ಲುವುದಾಗಿ ಬೀಗುತ್ತಿದ್ದ ಬಿಜೆಪಿ ಈಗ ಅನಿವಾರ್ಯವಾಗಿ ಕಾರ್ಯತಂತ್ರ ಬದಲಿಸಿಕೊಳ್ಳಲೇಬೇಕಾಗಿದೆ. ಬಿಜೆಪಿ ಮುಖಂಡರು ಈಗಾಗಲೇ ಬೆಳಗಾವಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಅವರಿಗೆ ಹೆಚ್ಚು ಜವಾಬ್ದಾರಿ ನೀಡಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ವೇಳೆ ರಾಜ್ಯದ ಅನೇಕ ಸಂಸದರಿಗೆ ಆಡಳಿತ ವಿರೋಧಿ ಅಲೆ ಇರುವುದನ್ನು ಈ ಹಿಂದೆಯೇ ಗುರುತಿಸಲಾಗಿತ್ತು. ಮೋದಿ ಅಲೆ ಜತೆಗೆ ಸ್ಥಳೀಯ ಅಭ್ಯರ್ಥಿ ಮೇಲಿನ ಸದಭಿಪ್ರಾಯ ಮುಖ್ಯ ಎಂಬ ನಿರ್ಧಾರಕ್ಕೆ ಬಿಜೆಪಿ ವರಿಷ್ಠರು ಅಂಟಿಕೊಂಡರೆ ಅನೇಕ ಸಂಸದರ ಸ್ಥಾನಗಳಿಗೆ ಕುತ್ತು ಬಂದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಚರ್ಚೆ ಆಗುತ್ತಿವೆ.

ಕಾಂಗ್ರೆಸ್​ನಲ್ಲಿ ಸಡಗರ, ಮಂಕಾದ ಬಿಜೆಪಿ

ಬೆಳಗಾವಿ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಚಳಿಗಾಲದ ಅಧಿವೇಶನದ ಎರಡನೇ ದಿನ ಮೊಗಸಾಲೆಯಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿತ್ತು. ಫಲಿತಾಂಶ ಕಾಂಗ್ರೆಸ್-ಜೆಡಿಎಸ್ ಶಾಸಕರಲ್ಲಿ ಖುಷಿ ಮೂಡಿಸಿದ್ದರೆ, ಬಿಜೆಪಿ ಶಾಸಕರನ್ನು ಮಂಕಾಗಿಸಿತ್ತು. ಅಧಿವೇಶನ ಆರಂಭಕ್ಕೂ ಮುನ್ನ ಫಲಿತಾಂಶ ಕುರಿತು ಪ್ರತಿಕ್ರಿಯಿಸಲು ಆಸಕ್ತಿ ತೋರದ ಬಿಜೆಪಿ ಶಾಸಕರು, ‘ನೋಡೋಣ ಇರಿ..’ ಎನ್ನುತ್ತಲೇ ಬಂದರು.

ಪಂಚರಾಜ್ಯಗಳಲ್ಲಿ ಗೆಲ್ಲಬೇಕಿತ್ತು ಎಂದು ಬಿಜೆಪಿ ಶಾಸಕರು ಕೈ ಹಿಸುಕಿಕೊಳ್ಳುತ್ತಿದ್ದರೆ, ಕಾಂಗ್ರೆಸ್ ಶಾಸಕರು ಉತ್ಸಾಹಭರಿತರಾಗಿ ಮಾತನಾಡುತ್ತಿದ್ದರು. ಬಿಜೆಪಿ ಶಾಸಕರನೇಕರು ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಲು ನೇರವಾಗಿ ನಿರಾಕರಿಸಿದ್ದು ವಿಶೇಷವಾಗಿತ್ತು. ಈ ಫಲಿತಾಂಶ ಲೋಕಸಭಾ ಚುನಾವಣೆಯಲ್ಲೇನೂ ಪರಿಣಾಮ ಬೀರಲ್ಲ ಎಂದು ಬಿಜೆಪಿ ನಾಯಕರು ಸಮಾಧಾನ ಪಟ್ಟುಕೊಳ್ಳುತ್ತಿದ್ದುದು ಕಂಡುಬಂತು.

ಕಾಂಗ್ರೆಸ್​ಗೆ ಈ ಫಲಿತಾಂಶ ಲೋಕಸಭಾ ಚುನಾವಣೆಗೆ ಬೂಸ್ಟ್ ನೀಡಿದಂತಾಗಿದೆ ಎಂದು ಹಿರಿಯ ಶಾಸಕರು ಚರ್ಚೆಯಲ್ಲಿ ತೊಡಗಿದ್ದರು. ಮಧ್ಯಾಹ್ನ ಭೋಜನ ವಿರಾಮದ ವೇಳೆ ಕಾಂಗ್ರೆಸ್ ಶಾಸಕರು ಸಭೆ ಸೇರಿ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಒಂದು ಸಾಲಿನ ಅಭಿನಂದನಾ ನಿರ್ಣಯ ಸಲ್ಲಿಸಿದರು.