ಪಂಚರಾಜ್ಯ ಸಮರ ಶುರು

ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮೊದಲ ಹೆಜ್ಜೆಯಾಗಿ ಸೋಮವಾರ ಛತ್ತೀಸ್​ಗಢದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಎಂಟು ನಕ್ಸಲ್​ಪೀಡಿತ ಜಿಲ್ಲೆಗಳ 18 ಕ್ಷೇತ್ರಗಳಲ್ಲಿ ಮತದಾನ ನಡೆಯತ್ತಿರುವುದು ವಿಶೇಷ. ನಕ್ಸಲ್ ಉಗ್ರವಾದದ ವಿರುದ್ಧ ಪ್ರಜಾಪ್ರಭುತ್ವದ ಆದೇಶ ಎಂದೇ ಇದನ್ನು ಬಿಂಬಿಸಲಾಗುತ್ತಿದೆ. 20ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಬಳಿಕ ಚುನಾವಣಾ ಕಾವು ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ಮತ್ತು ತೆಲಂಗಾಣಕ್ಕೆ ವರ್ಗಾವಣೆಯಾಗಲಿದೆ.

ರಾಯ್ಪುರ: ಛತ್ತೀಸ್​ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಸೋಮವಾರ ನಡೆಯುವ ಬೆನ್ನಲ್ಲೇ ಪಂಚರಾಜ್ಯಗಳಲ್ಲಿನ ರಾಜಕೀಯ ಮುಖಂಡರಿಗೆ ಚುನಾವಣೆಯ ಕಾವು ಹೆಚ್ಚಲಿದೆ. ಸಿಎಂ ರಮಣ್​ಸಿಂಗ್​ಗೆ ತಮ್ಮ ಅಧಿಕಾರ ಉಳಿಸಿಕೊಳ್ಳುವ ಸವಾಲು ಎದುರಾದರೆ, ಮುಂದಿನ ದಿನಗಳಲ್ಲಿ ಚುನಾವಣೆ ಎದುರಿಸುವ ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸ್ಥಿತಿ ಕೂಡ ಬೇರೆ ಆಗಿಲ್ಲ. ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ತೀವ್ರವಾಗಿದ್ದು, ಸಿಎಂ ವಸುಂಧರಾ ರಾಜೇಗೆ ಅಧಿಕಾರ ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ಹಲವು ಚುನಾವಣಾಪೂರ್ವ ಸಮೀಕ್ಷೆ ಗಳು ಹೇಳಿವೆ. ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಸಿಎಂ ಗಾದಿ ರಕ್ಷಿಸಿಕೊಳ್ಳಲು ಕಾಂಗ್ರೆಸ್ ಯಾವುದೇ ಕಸರತ್ತು ಬಾಕಿ ಉಳಿಸುತ್ತಿಲ್ಲ. ಇನ್ನು ಅವಧಿಪೂರ್ವ ವಿಧಾನಸಭೆ ವಿಸರ್ಜನೆ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕಿರುವ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ವಿಶ್ವಾಸದಲ್ಲಿದ್ದಾರೆ.

ಉಪಾಧ್ಯಕ್ಷ ರಾಜೀನಾಮೆ: ಛತ್ತೀಸ್​ಗಢ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಘನರಾಮ್ ಸಾಹು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ನಕ್ಸಲರಿಗೆ ಆತಂಕ

ಛತ್ತೀಸ್​ಗಢದಲ್ಲಿ ಕಳೆದ 15 ದಿನಗಳ ಅಂತರದಲ್ಲಿ ನಕ್ಸಲರು ನಡೆಸಿರುವ ಐಇಡಿ ಸ್ಪೋಟದ ಘಟನೆಗಳಲ್ಲಿ ಭದ್ರತಾಪಡೆಯ 8 ಸಿಬ್ಬಂದಿ ಸೇರಿ ಒಟ್ಟು 13 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಶಾಂತಿಯುತ ಮತದಾನ ನಡೆಸಲು ಚುನಾವಣಾ ಆಯೋಗ 1 ಲಕ್ಷಕ್ಕೂ ಹೆಚ್ಚು ಭದ್ರತಾ ಪಡೆ ಸಿಬ್ಬಂದಿಯನ್ನು ರಾಜ್ಯದಲ್ಲಿ ನಿಯೋಜಿಸಿದೆ. ಇದರಲ್ಲಿ ಸಿಆರ್​ಪಿಎಫ್, ಬಿಎಸ್​ಎಫ್, ಐಟಿಬಿಪಿ ಪಡೆ ಸಿಬ್ಬಂದಿ ಅಲ್ಲದೆ, 65 ಸಾವಿರ ಪೊಲೀಸ್ ಸಿಬ್ಬಂದಿ ಸೇರಿದ್ದಾರೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ವಿಶೇಷ ಡಿಜಿ ಡಿ.ಎಂ. ಆವಸ್ತಿ ತಿಳಿಸಿದ್ದಾರೆ.

ಎಲ್ಲೆಲ್ಲಿ ಮತದಾನ?

ಮೊಹಲ್ಲಾ-ಮಾನ್ಪುರ್, ಅಂತಾಗಢ, ಭಾನುಪ್ರತಾಪ್​ಪುರ್, ಕಾಂಕೇರ್, ಕೆಸ್​ಕಲ್, ಕೊಂಡಾಗಾಂವ್, ನಾರಾಯಣ್​ಪುರ್, ದಾಂತೆವಾಡ, ಬಿಜಾಪುರ ಮತ್ತು ಕೋಂಟಾ ಸೇರಿ ಒಟ್ಟು 10 ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 3 ಗಂಟೆವರೆಗೆ ಮತದಾನ ನಡೆಯಲಿದೆ. ಖೈರ್​ಗಢ, ಡೊಂಗಾರ್​ಗಢ, ರಾಜ್​ನಂದಗಾಂವ್, ಡೊಂಗಾರ್​ಗಾಂವ್, ಖುಜ್ಜಿ, ಬಸ್ತಾರ್, ಜಗದಾಲ್​ಪುರ್ ಮತ್ತು ಚಿತ್ರಕೂಟ ಸೇರಿ 8 ಕ್ಷೇತ್ರಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.

ಭಾರಿ ಬಿಗಿ ಭದ್ರತೆ

18 ಕ್ಷೇತ್ರಗಳಲ್ಲಿ ಒಟ್ಟು 650 ಮತದಾನ ಕೇಂದ್ರಗಳನ್ನು ತೆರಯಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಭಾರತೀಯ ವಾಯುಪಡೆ ಮತ್ತು ಬಿಎಸ್​ಎಫ್​ನ ಹೆಲಿಕಾಪ್ಟರ್​ಗಳ ಮೂಲಕ ಸ್ಥಳಾಂತರಿಸಲಾಗುವುದು. ರಸ್ತೆಗಳಲ್ಲಿ ನಕ್ಸಲರು ಇರಿಸಿರಬಹುದಾದ ನೆಲಬಾಂಬ್​ಗಳನ್ನು ನಿಷ್ಕ್ರಿಯಗೊಳಿಸಿ, ರೋಡ್ ಓಪನಿಂಗ್ ಪಾರ್ಟೀಸ್ (ಆರ್​ಒಪಿ) ಸೂಚನೆ ನೀಡುವವರೆಗೂ ಯಾವುದೇ ರಸ್ತೆಗಳಲ್ಲಿ ಮುಕ್ತವಾಗಿ ಸಂಚರಿಸದಂತೆ ಅನ್ಯ ಜಿಲ್ಲೆಗಳಿಂದ ಆಗಮಿಸಿರುವ ಭದ್ರತಾ ಪಡೆ ಸಿಬ್ಬಂದಿಗೆ ಸೂಚಿಸಿರುವುದಾಗಿ ಡಿ.ಎಂ. ಆವಸ್ತಿ ತಿಳಿಸಿದ್ದಾರೆ. ನಕ್ಸಲರು ರಸ್ತೆಗಳಲ್ಲಿ ಗುಪ್ತವಾಗಿ ಮೊನಚಾದ ವಸ್ತುಗಳನ್ನು ಇರಿಸಿ, ಭದ್ರತಾ ಸಿಬ್ಬಂದಿ ಗಾಯಗೊಳ್ಳುವಂತೆ ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಕಾಲ್ನಡಿಗೆಯಲ್ಲಿ ಪಹರೆ ನಡೆಸದಂ ತೆಯೂ ಅವರೆಲ್ಲರಿಗೂ ಸೂಚಿಸಿ ರುವುದಾಗಿ ಹೇಳಿದ್ದಾರೆ.

ರಮಣ್​ಸಿಂಗ್ ವಾಜಪೇಯಿ ಸಂಬಂಧಿ ಕರುಣಾ ಶುಕ್ಲಾ

ಮೊದಲ ಹಂತದ ಮತದಾನದಲ್ಲಿ ಭಾರಿ ಕುತೂಹಲ ಮೂಡಿಸಿರುವ ಕ್ಷೇತ್ರ ರಾಜ್​ನಂದಗಾಂವ್. ಇಲ್ಲಿ ಛತ್ತೀಸ್​ಗಢ ಸಿಎಂ ರಮಣ್​ಸಿಂಗ್ ವಿರುದ್ಧ ಕಾಂಗ್ರೆಸ್​ನಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಬಂಧಿ ಕರುಣಾ ಶುಕ್ಲಾ ಸ್ಪರ್ಧಿಸುತ್ತಿದ್ದಾರೆ. 2013 ಚುನಾವಣೆಯಲ್ಲಿ ರಮಣ್​ಸಿಂಗ್ ಇದೇ ಕ್ಷೇತ್ರದಿಂದ 35ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದರು. ಆದರೆ ಈ ಬಾರಿ 70 ಸಾವಿರ ಮತಗಳಿಂದ ನೀವು ಅವರನ್ನು ಜಯಶಾಲಿ ಯಾಗಿಸಿ ಎಂದು ರ‍್ಯಾಲಿ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರೆ ನೀಡಿದ್ದರು.

ಇಂದಿನಿಂದ ಚುನಾವಣೆ ಪ್ರಕ್ರಿಯೆ

ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಕೆಗೆ ನ.19 ಕೊನೆಯ ದಿನವಾಗಿರುವ ಸಾಧ್ಯತೆ ಇದೆ. 119 ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ ಮತ್ತೆ ಅಧಿಕಾರಕ್ಕೆ ಮರಳುವ ವಿಶ್ವಾಸದಿಂದ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್​ಎಸ್) ಮುಖ್ಯಸ್ಥ ಹಾಗೂ ಸಿಎಂ ಕೆ. ಚಂದ್ರಶೇಖರ್ 8 ತಿಂಗಳ ಅವಧಿ ಬಾಕಿ ಇರುವಂತೆಯೇ ಸೆ.6ರಂದು ವಿಧಾನಸಭೆ ವಿಸರ್ಜಿಸಿದ್ದರು. ಮತ್ತೊಂದೆಡೆ, 2019ರ ಲೋಕಸಭೆ ಚುನಾವಣೆಯತ್ತ ಹೆಚ್ಚಿನ ಗಮನ ನೀಡುತ್ತೇವೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ವೈಎಸ್​ಆರ್ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನ.22 ಮತ್ತು 23ರಂದು ತೆಲಂಗಾಣದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಸಿಎಂ ಚಂದ್ರಶೇಖರ್ ರಾವ್ ಅವರ ಗಜ್​ವೆಲ್ ವಿಧಾನಸಭಾ ಕ್ಷೇತ್ರದಲ್ಲಿ ಸೋನಿಯಾ ಪ್ರಚಾರ ನಡೆಸಲಿದ್ದಾರೆ.

ಸರ್ಕಾರಿ ಸ್ಥಳದಲ್ಲಿ ಆರೆಸ್ಸೆಸ್ ಶಾಖೆಗೆ ನಿರ್ಬಂಧ

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಣಾಳಿಕೆಯಲ್ಲಿ ಹಿಂದುತ್ವ ಜಪ ಆರಂಭಿಸಿರುವ ಕಾಂಗ್ರೆಸ್, ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರಿ ಸ್ಥಳ ಮತ್ತು ಕಟ್ಟಡಗಳಲ್ಲಿ ಆರ್​ಎಸ್​ಎಸ್ ಶಾಖೆ ನಡೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದಿದೆ. ಜತೆಗೆ ಸರ್ಕಾರಿ ನೌಕರರು ಶಾಖೆಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುವುದಾಗಿ ತಿಳಿಸಿದೆ. ಕಾಂಗ್ರೆಸ್ ಪ್ರಣಾಳಿಕೆಯನ್ನು ಟೀಕಿಸಿರುವ ಬಿಜೆಪಿ, ಕಟುಕರು ಓಟಿಗಾಗಿ ಗೋವನ್ನು ಆಶ್ರಯಿಸಿದ್ದಾರೆ ಎಂದಿದೆ.