ವಿಧಾನಸಭೆ ಚುನಾವಣಾ ವೆಚ್ಚದ ಮಿತಿಮೀರದ ಅಭ್ಯರ್ಥಿಗಳು!

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಆಯೋಗವು ವಿಧಿಸಿದ್ದ ವೆಚ್ಚ ಮಿತಿಯನ್ನು ಯಾವೊಬ್ಬ ಅಭ್ಯರ್ಥಿಯೂ ಮೀರಿಲ್ಲ! ಚುನಾವಣಾ ಆಯೋಗವು ಒಬ್ಬ ಅಭ್ಯರ್ಥಿಗೆ 28 ಲಕ್ಷ ರೂ.ವರೆಗೆ ವೆಚ್ಚದ ಮಿತಿ ಹೇರಿತ್ತು. ಅಚ್ಚರಿ ಎಂದರೆ, ಯಾರೊಬ್ಬರೂ ‘ಮಿತಿ’ಮೀರದೇ ಅಲ್ಪವ್ಯಯಿಗಳಾಗಿದ್ದಾರೆ.

ಇದು ಯಾವುದೇ ತನಿಖಾ ವರದಿ ಅಲ್ಲ. ಸ್ವತಃ ಅಭ್ಯರ್ಥಿಗಳೇ ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ವೆಚ್ಚದ ವಿವರ. ಮೇ 12ರಂದು ನಡೆದ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸುಮಾರು 2 ಸಾವಿರ ಅಭ್ಯರ್ಥಿಗಳು ವೆಚ್ಚದ ವಿವರವನ್ನು ಸಲ್ಲಿಸಿದ್ದು, ಕಾಂಗ್ರೆಸ್, ಜೆಡಿಎಸ್​ನಿಂದ ಗೆಲುವು ಸಾಧಿಸಿದ ಅನೇಕರು ಐಟಿ ಭಯದಿಂದ 20 ಲಕ್ಷ ರೂ.ಗೂ ಕಡಿಮೆ ವೆಚ್ಚ ತೋರಿಸಿದ್ದಾರೆ.

ಒಂದು ಸಣ್ಣ ರ‍್ಯಾಲಿ ಮಾಡಿದರೂ 28 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. 1 ಲಕ್ಷ, 50 ಸಾವಿರ, 25 ಸಾವಿರ ಜನರನ್ನು ಸೇರಿಸಿ ಮಾಡಿದ ರ್ಯಾಲಿಗಳಿಗೂ ಲಕ್ಷ ಲಕ್ಷ ವೆಚ್ಚ ಮಾಡಲಾಗುತ್ತದೆ. ಆದರೆ, ಕೊಡುವ ಲೆಕ್ಕ ಮಾತ್ರ ‘ಕೃಷ್ಣ’ನ ಲೆಕ್ಕ ತೋರಿಸಲಾಗುತ್ತದೆ ಎಂಬ ಚರ್ಚೆ ಆರಂಭವಾಗಿದೆ.

ಕೋಟಿ ಖರ್ಚಿಗೆ ಲಕ್ಷ ಲೆಕ್ಕ!: ಭಿತ್ತಿಪತ್ರ, ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಸೇರಿ ಪ್ರಚಾರ ಸಾಮಗ್ರಿಗಳಿಗೇ ಕೆಲವು ಅಭ್ಯರ್ಥಿಗಳು 28 ಲಕ್ಷ ರೂ.ಗಿಂತ ಹೆಚ್ಚು ವ್ಯಯಿಸಿದ್ದಾರೆ. ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಹತ್ತಿಪ್ಪತ್ತು ಜನ ಓಡಾಡಲು ವಾಹನಗಳಿಗೆ 15-20 ಲಕ್ಷ ರೂ.ಗಳ ಅವಶ್ಯಕತೆಯಿರುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಒಂದು ಅಂದಾಜಿನ ಪ್ರಕಾರ ಒಬ್ಬ ಅಭ್ಯರ್ಥಿ ಕನಿಷ್ಠ 5 ಕೋಟಿ ರೂ.ಗಳಿಂದ 30 ಕೋಟಿ ರೂ.ವರೆಗೆ ಖರ್ಚು ಮಾಡಿದ್ದಾರೆ. ಆದರೆ, ಕೊಟ್ಟಿರುವ ಲೆಕ್ಕೆ ಬೆರಳೆಣಿಕೆ ಲಕ್ಷ ಮಾತ್ರ!

ಅನೇಕ ಅಭ್ಯರ್ಥಿಗಳು ಕೇವಲ 10-25 ಲಕ್ಷ ರೂ. ಮಿತಿಯಲ್ಲೇ ಖರ್ಚಿನ ವಿವರ ಕೊಟ್ಟಿದ್ದಾರೆ. ಕೆಲವರು ಹತ್ತು ಲಕ್ಷ ರೂಪಾಯಿಯೊಳಗಿನ ಖರ್ಚಿನ ವಿವರ ಸಲ್ಲಿಸಿದ್ದಾರೆ.