ಶಿವಮೊಗ್ಗು ಅರಳಿಸಲು ಕಮಲ-ಕೈ ಫೈಟ್!

| ಎನ್.ಡಿ. ಶಾಂತಕುಮಾರ್

ಚುನಾವಣೆ ಎಂದಕೂಡಲೇ ರಾಜ್ಯದ ಗಮನ ಸೆಳೆಯುವ ಜಿಲ್ಲೆಗಳಲ್ಲಿ ಶಿವಮೊಗ್ಗ ಕೂಡ ಒಂದು. ಇದಕ್ಕೆ ಪ್ರಮುಖ ಕಾರಣ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆ ಎಂಬುದು. ಬಿಎಸ್​ವೈ ಸಕ್ರಿಯ ರಾಜಕಾರಣದಲ್ಲಿ ಮುಂದುವರಿದರೂ, ಬಿಜೆಪಿಯ ವಯೋಮಿತಿ ನೀತಿ ಆಧರಿಸಿ ಹೇಳುವುದಾದರೆ ಸಿಎಂ ಅಭ್ಯರ್ಥಿಯಾಗಿ ಇದು ಅವರಿಗೆ ಕೊನೆಯ ಚುನಾವಣೆಯಾಗಬಹುದು. ಅವರು ಮತ್ತೆ ವಿಧಾನಸಭೆ ಪ್ರವೇಶ ಮಾಡಬಾರದು ಎಂಬುದು ಜಿಲ್ಲಾ ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಮಾತ್ರವಲ್ಲದೆ, ಸಿಎಂ ಸಿದ್ದರಾಮಯ್ಯ ಬಯಕೆ ಕೂಡ. ಈ ಕದನ ಕಣದ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಕಮಲ ಅರಳಿಸಿದ ಕೀರ್ತಿ ಬಿ.ಎಸ್. ಯಡಿಯೂರಪ್ಪ ಅವರದು. ಯಡಿಯೂರಪ್ಪ ಪ್ರಯತ್ನಕ್ಕೆ ಸಾಥ್ ನೀಡಿದವರು ಕೆ.ಎಸ್. ಈಶ್ವರಪ್ಪ. ಬಿಜೆಪಿ ಗತವೈಭವಕ್ಕೆ ಮರಳುವ ಉತ್ಸಾಹದಲ್ಲಿದ್ದರೆ, ಕಾಂಗ್ರೆಸ್ ಕೋಟೆ ಬಲಿಷ್ಠ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ. ಇರುವ ಕ್ಷೇತ್ರಗಳನ್ನು ಉಳಿಸಿಕೊಂಡರೆ ಸಾಕು. ಇದಕ್ಕಿಂತ ಹೆಚ್ಚು ಬಂದರೆ ಬೋನಸ್ ಎನ್ನುವುದು ಜೆಡಿಎಸ್ ಲೆಕ್ಕಾಚಾರ. ಮೂರೂ ಪ್ರಮುಖ ಪಕ್ಷಗಳಲ್ಲಿ ಟಿಕೆಟ್​ಗಾಗಿ ಕಿತ್ತಾಟ ನಡೆಯುತ್ತಿದೆ. ಸೊರಬದಲ್ಲಿ ಕಾಂಗ್ರೆಸ್​ಗೆ, ಭದ್ರಾವತಿಯಲ್ಲಿ ಬಿಜೆಪಿಗೆ ಗೆಲ್ಲುವಂಥ ಅಭ್ಯರ್ಥಿಗಳಿಲ್ಲ. ಸಚಿವ ಕಾಗೋಡು ತಿಮ್ಮಪ್ಪ ಮತ್ತೆ ಸ್ಪರ್ಧೆ ಮಾಡ್ತಾರಾ ಎನ್ನುವ ಪ್ರಶ್ನೆ ಇದೆ. ಶಿವಮೊಗ್ಗ ಶಾಸಕ ಪ್ರಸನ್ನಕುಮಾರ್ ಸ್ಪರ್ಧೆಗೆ ಕೆಲವರ ವಿರೋಧವಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತ್ರ ನಿರಾಳ, ಏಕೆಂದರೆ, ಇವರಿಗೆ ಪಕ್ಷದಲ್ಲಿ ಪ್ರತಿಸ್ಪರ್ಧಿಗಳಿಲ್ಲ. ಬಿಜೆಪಿಯಿಂದ ಆರಗ ಜ್ಞಾನೇಂದ್ರ ಸ್ಪರ್ಧೆ ಖಚಿತವಾಗಿದೆ. ಇತರ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.

ಯಡಿಯೂರಪ್ಪ ಸ್ಪರ್ಧೆಖಚಿತ

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಉತ್ತರ ಕರ್ನಾಟಕದ ಕ್ಷೇತ್ರವೊಂದರಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳಿಗೆ ಅವರೇ ತೆರೆ ಎಳೆದಿದ್ದು, ಶಿಕಾರಿಪುರದಿಂದಲೇ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಹಾಲಿ ಶಾಸಕ ಬಿ.ವೈ.ರಾಘವೇಂದ್ರ ಕ್ಷೇತ್ರ ಬಿಟ್ಟುಕೊಡಬೇಕಿದೆ. ಜೆಡಿಎಸ್​ನಿಂದ ಬಳಿಗಾರ್ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಸಮಸ್ಯೆ ಇರುವುದು ಕಾಂಗ್ರೆಸ್​ನಲ್ಲಿ. ಯಡಿಯೂರಪ್ಪ ಅವರನ್ನು ಮಣಿಸುವ ಶಕ್ತಿ ಯಾರಿಗಿದೆ ಎಂಬ ಲೆಕ್ಕಾಚಾರ ನಡೆದಿದೆ. ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರ ಮಹದೇವಪ್ಪ ಟಿಕೆಟ್ ಆಕಾಂಕ್ಷಿಗಳು. ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಾಂತವೀರಪ್ಪಗೌಡ ಈಗ ಬಿಜೆಪಿಯಲ್ಲಿದ್ದಾರೆ. ಉಪಚುನಾವಣೆಯಂತೆ ಕಾಂಗ್ರೆಸ್-ಜೆಡಿಎಸ್ ನಡುವೆ ಒಡಂಬಡಿಕೆಯಾಗಬಹುದೇ ಎನ್ನುವ ಅಂದಾಜೂ ಇದೆ.

ಯಾರಾಗ್ತಾರೆ ಶಿವಮೊಗ್ಗ ಕಿಂಗ್?

ಶಿವಮೊಗ್ಗದಲ್ಲಿ ಕಾಂಗ್ರೆಸ್​ನ ಕೆ.ಬಿ. ಪ್ರಸನ್ನಕುಮಾರ್ ಶಾಸಕರಾಗಿದ್ದು, ಮತ್ತೆ ಸ್ಪರ್ಧೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹಠಕ್ಕೆ ಬಿದ್ದಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ರುದ್ರೇಗೌಡರೂ ಟಿಕೆಟ್ ಆಕಾಂಕ್ಷಿ. ಜೆಡಿಎಸ್​ನಿಂದ ಜಿಲ್ಲಾಧ್ಯಕ್ಷ ನಿರಂಜನ್ ಮತ್ತು ಮಾಜಿ ಅಧ್ಯಕ್ಷ ಶ್ರೀಕಾಂತ್ ಸ್ಪರ್ಧೆಯಲ್ಲಿದ್ದಾರೆ. ಮಹಾನಗರ ಪಾಲಿಕೆ ಸದಸ್ಯ ನರಸಿಂಹಮೂರ್ತಿ ಅವಕಾಶ ಸಿಕ್ಕರೆ ನೋಡೋಣ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಕಾಂಗ್ರೆಸ್​ನಿಂದ ಅಲ್ಪಸಂಖ್ಯಾತರು ನಮಗೆ ಅವಕಾಶ ಕೊಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಗ್ರಾಮಾಂತರದಲ್ಲಿ ಆಕಾಂಕ್ಷಿಗಳ ದಂಡು

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯ್ಕ ಅವರೇ ಅಭ್ಯರ್ಥಿ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡೇ ಇದೆ. ಬಿಜೆಪಿಯಿಂದ ಮಾಜಿ ಶಾಸಕ ಕುಮಾರಸ್ವಾಮಿ ಮತ್ತು ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಪ್ರಮುಖ ಆಕಾಂಕ್ಷಿಗಳು. ಕಾಂಗ್ರೆಸ್​ನಿಂದ ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ ಡಾ. ಶ್ರೀನಿವಾಸ, ಜಿಲ್ಲಾ ಕಾಂಗ್ರೆಸ್ ಎಸ್​ಸಿ ಘಟಕದ ಅಧ್ಯಕ್ಷೆ ಪಲ್ಲವಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.

ಮತ್ತೆ ದಾಯಾದಿಗಳ ಕಲಹ

ಸೊರಬದಲ್ಲಿ ಜೆಡಿಎಸ್​ನಿಂದ ಮಧು ಬಂಗಾರಪ್ಪ ಅವರೇ ಅಭ್ಯರ್ಥಿ. ಕುಮಾರ ಬಂಗಾರಪ್ಪ ಬಿಜೆಪಿ ಸೇರ್ಪಡೆ ಅಗಿರುವುದರಿಂದ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಇದ್ದು, ಕಾಂಗ್ರೆಸ್​ನಲ್ಲಿ ಪ್ರಬಲ ಅಭ್ಯರ್ಥಿ ಕಾಣಿಸುತ್ತಿಲ್ಲ. ಬಿಜೆಪಿ ಟಿಕೆಟ್ ಸಿಗುವುದು ಕಠಿಣ ಎಂಬುದನ್ನು ಮನಗಂಡಿರುವ ಡಾ. ರಾಜು ಎಂ. ತಲ್ಲೂರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಅವಕಾಶ ಸಿಕ್ಕರೆ ಕಾಂಗ್ರೆಸ್​ನಿಂದ ಸ್ಪರ್ಧೆಗೆ ಸಿದ್ಧರಿದ್ದಾರೆ. ಹರತಾಳು ಹಾಲಪ್ಪ ಇಲ್ಲೂ ಟಿಕೆಟ್ ಬಯಸಿದ್ದಾರೆ. ಕುಮಾರ ಬಂಗಾರಪ್ಪ ಅವರಿಗೆ ಸೊರಬ ಪಕ್ಕಾ ಆದರೆ ಹಾಲಪ್ಪ ಕ್ಷೇತ್ರ ಬದಲಾಗಬಹುದು.

ಅವರೇ ಎದುರಾಳಿಗಳು

ತೀರ್ಥಹಳ್ಳಿ ಕ್ಷೇತ್ರದಲ್ಲಿ ಮಾಜಿ ಸಚಿವ, ಶಾಸಕ ಕಿಮ್ಮನೆ ರತ್ನಾಕರ ಮತ್ತೆ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಲ್ಲಿ ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಪಕ್ಷದಲ್ಲಿ ಸ್ಪರ್ಧಿಗಳಿಲ್ಲ. ಸಮಸ್ಯೆ ಇರುವುದು ಜೆಡಿಎಸ್​ನಲ್ಲಿ. ತಾಲೂಕು ಅಧ್ಯಕ್ಷ ಮದನ್ ಸ್ಪರ್ಧೆ ಮಾಡಬಹುದು ಎನ್ನುವ ಅಂದಾಜಿತ್ತು. ಆದರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಈಗ ಕಾಂಗ್ರೆಸ್​ನಲ್ಲಿರುವ ಆರ್.ಎಂ. ಮಂಜುನಾಥಗೌಡ ಚುನಾವಣೆ ವೇಳೆಗೆ ಜೆಡಿಎಸ್​ಗೆ ಸೇರ್ಪಡೆಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂಬ ವದಂತಿ ಇದೆ.

ಉಕ್ಕಿನನಗರದಲ್ಲಿ ಬಿಜೆಪಿ ದುರ್ಬಲ

ಭದ್ರಾವತಿಯಲ್ಲಿ ಬಿಜೆಪಿ ಬಲವೃದ್ಧಿ ಪ್ರಯತ್ನ ಇದುವರೆಗೆ ಫಲ ನೀಡಿಲ್ಲ. ಜೆಡಿಎಸ್​ನಿಂದ ಶಾಸಕ ಎಂ.ಜೆ. ಅಪ್ಪಾಜಿ ಅವರೇ ಕ್ಯಾಂಡಿಡೇಟ್. ಕಾಂಗ್ರೆಸ್​ನಿಂದ ಬಿ.ಕೆ. ಸಂಗಮೇಶ್ ಹೆಸರು ಫೈನಲ್ ಆಗಿದೆ. ಕಳೆದ ಬಾರಿ ತೀವ್ರ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ ಪರಮಾಪ್ತ ಸಿ.ಎಂ. ಇಬ್ರಾಹಿಂ ಅವರಿಗೆ ಟಿಕೆಟ್ ನೀಡಿದ್ದರಿಂದ ಅವಕಾಶ ವಂಚಿತ ಬಿ.ಕೆ. ಸಂಗಮೇಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈಗವರು ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇಲ್ಲಿ ಸ್ಪರ್ಧೆ ಇರುವುದು ಅಪ್ಪಾಜಿಗೌಡ ಮತ್ತು ಸಂಗಮೇಶ್ ನಡುವೆ ಮಾತ್ರ.

ಸಾಗರಕ್ಯಾರು ವೀರ?

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಪ್ರತಿನಿಧಿಸುತ್ತಿರುವ ಸಾಗರ ಕ್ಷೇತ್ರದಲ್ಲಿ ಮೂರೂ ಪಕ್ಷಗಳಿಂದ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟವಾಗಿಲ್ಲ. ಮತ್ತೆ ಅವಕಾಶ ಸಿಕ್ಕರೆ ಸ್ಪರ್ಧೆ ಮಾಡುತ್ತೇನೆ ಎಂದು ಕಾಗೋಡು ಹೇಳಿದ್ದಾರೆ. ಇಲ್ಲವಾದರೆ, ಅವರ ಪುತ್ರಿ ಡಾ. ರಾಜ ನಂದಿನಿ ಕಣಕ್ಕಿಳಿಯುವ ಲಕ್ಷಣಗಳಿವೆ. ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳಿದ್ದರೂ ತಿಮ್ಮಪ್ಪ ಎದುರು ಮಾತನಾಡುವುದು ಹೇಗೇ? ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಬಿಜೆಪಿಯಿಂದ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಹರತಾಳು ಹಾಲಪ್ಪ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಯಡಿಯೂರಪ್ಪ ಬೇಕಿದ್ದರೆ ಸಾಗರದಿಂದ ಸ್ಪರ್ಧೆ ಮಾಡಲಿ, ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಬೇಳೂರು ಗುಡುಗಿದ್ದಾರೆ. ಹಾಲಪ್ಪಗೆ ಟಿಕೆಟ್ ಕೊಟ್ಟರೆ ಬೇಳೂರು ಬಂಡಾಯ ಸಾರುವ ಸಾಧ್ಯತೆಗಳೇ ಹೆಚ್ಚು. ಜೆಡಿಎಸ್​ನಲ್ಲಿ ಸದ್ಯಕ್ಕೆ ಪ್ರಬಲ ಅಭ್ಯರ್ಥಿಗಳಿಲ್ಲ. ಬೇಳೂರು ಗೋಪಾಲಕೃಷ್ಣ ಕಡೆ ಒಂದು ಕಣ್ಣು ಇದೆ. ಆದರೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಬೇಳೂರುಗೆ ವಿರೋಧವಾಗಿದ್ದಾರೆ.

Leave a Reply

Your email address will not be published. Required fields are marked *