ಮಾರ್ಚ್ ವೇಳೆಗೆ ಅಂತಿಮವಾಗಲಿದೆ ಕೈ ಅಭ್ಯರ್ಥಿ ಪಟ್ಟಿ

| ಕೆ. ರಾಘವ ಶರ್ಮ ನವದೆಹಲಿ

ಕಾಂಗ್ರೆಸ್ ಆಡಳಿತದಲ್ಲಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ರಣನೀತಿ ರೂಪಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾರ್ಚ್​ನಲ್ಲಿ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆ ಅಂತಿಮಗೊಳಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಏಪ್ರಿಲ್ ಅಂತ್ಯ ಅಥವಾ ಮೇ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಇದಕ್ಕೂ ಒಂದು ತಿಂಗಳು ಮುನ್ನ ಪಕ್ಷದ ಅಭ್ಯರ್ಥಿ ಬಗ್ಗೆ ಸ್ಥಳೀಯ ಕಾರ್ಯಕರ್ತರು ಮತ್ತು ಮತದಾರರಲ್ಲಿ ಸ್ಪಷ್ಟತೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆಯೂ ರಾಜ್ಯ ನಾಯಕರಿಗೆ ರಾಹುಲ್ ಸೂಚ್ಯವಾಗಿ ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ರಾಜ್ಯ ಪ್ರವಾಸದ ಬಳಿಕ ಟಿಕೆಟ್ ಹಂಚಿಕೆ ಕುರಿತ ಆಯ್ಕೆ ಸಮಿತಿ ಸಭೆಗಳು ಆರಂಭಗೊಳ್ಳಲಿದ್ದು, ಮಾರ್ಚ್ ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿವೆ ಎಂದು ಮೂಲಗಳು ಖಚಿತ ಪಡಿಸಿವೆ.

ರಾಜ್ಯ ನಾಯಕರೊಂದಿಗೆ ತಮ್ಮ ನಿವಾಸದಲ್ಲಿ ಮೂರೂವರೆ ಗಂಟೆಗಳ ಸುದೀರ್ಘ ಸಭೆ ನಡೆಸಿದ ರಾಹುಲ್, ಟಿಕೆಟ್ ಹಂಚಿಕೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಭಿನ್ನಮತ ಸಮಸ್ಯೆ ಮೊದಲೇ ಪರಿಹರಿಸಿಕೊಂಡು ಅಭ್ಯರ್ಥಿಗಳನ್ನು ಚುನಾವಣೆಗೆ ಸಜ್ಜುಗೊಳಿಸಬೇಕು. ಹಿಂದಿನ ಚುನಾವಣೆಗಳಲ್ಲಿ ಆಗಿರುವ ತಪ್ಪುಗಳು ಈ ಬಾರಿ ಪುನರಾವರ್ತನೆ ಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯದ ನಾಯಕರಿಗೆ ಸೂಚಿಸಿದರು.

ಕೋಮುವಾದ ಬೇಡ: ಕಾಂಗ್ರೆಸ್ ನಾಯಕರು ಕೋಮುವಾದ ರಣನೀತಿ ಅನುಸರಿಸುವುದು ಬೇಡ. ರಾಜ್ಯದ ಅಭಿವೃದ್ಧಿ ಯೋಜನೆ ಹಾಗೂ ಕೇಂದ್ರ ಸರ್ಕಾರ ಮಾಡಿರುವ ತಪ್ಪುಗಳು, ಕರ್ನಾಟಕದ ಮೇಲೆ ತೋರಿರುವ ಮಲತಾಯಿ ಧೋರಣೆ, ಜಲ ವಿವಾದಗಳಲ್ಲಿ ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸಿರುವುದನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸೋಣ ಎಂದು ರಾಹುಲ್ ತಮ್ಮ ಅಭಿಪ್ರಾಯಗಳನ್ನು ರಾಜ್ಯ ನಾಯಕರ ಮುಂದಿಟ್ಟಿದ್ದಾರೆ.

ಬಿಜೆಪಿ ನಾಯಕರ ಜತೆ ಸಂಪರ್ಕ: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಬಯಕೆ ವ್ಯಕ್ತಪಡಿಸಿರುವ ಐದಾರು ಶಾಸಕರ ಜತೆ ಸಂಪರ್ಕದಲ್ಲಿದ್ದೇವೆ. ಹೈಕಮಾಂಡ್ ಟಿಕೆಟ್ ನೀಡುವ ಭರವಸೆ ನೀಡಿದರೆ ಮಾತ್ರ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿದ್ದೇವೆ ಎಂದು ಸಭೆ ಬಳಿಕ ಕಾಂಗ್ರೆಸ್ ನಾಯಕರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

ಎರಡು ಸಮೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಖಾಸಗಿಯಾಗಿ ಎರಡು ಪ್ರತ್ಯೇಕ ಚುನಾವಣಾ ಸಮೀಕ್ಷೆಗಳನ್ನು ನಡೆಸಿದ್ದು, ಈ ಬಗೆಗಿನ ಮಾಹಿತಿಯನ್ನು ರಾಹುಲ್ ಜತೆಗೆ ಹಂಚಿಕೊಂಡಿದ್ದಾರೆ. ಆದರೆ ಸಮೀಕ್ಷೆಗಳು ಏನು ಹೇಳುತ್ತವೆ ಎಂಬ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.

ಬಸ್ ಯಾತ್ರೆ: ಮಾರ್ಚ್ 1ರಿಂದ ರಾಜ್ಯ ಕಾಂಗ್ರೆಸ್ ನಾಯಕರೆಲ್ಲರೂ ಬಸ್ ಮೂಲಕ ಚುನಾವಣಾ ಯಾತ್ರೆ ಕೈಗೊಳ್ಳಲಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ ಚುನಾವಣಾ ಸಭೆಗಳನ್ನು ಈ ನಾಯಕರು ನಡೆಸಲಿದ್ದಾರೆ.

ರಾಹುಲ್ ಪ್ರವಾಸ: ರಾಹುಲ್ ಗಾಂಧಿ ಫೆ.10, 11, 12ರಂದು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನಸಭೆಗಳನ್ನು ನಡೆಸಲಿದ್ದಾರೆ. ಕೊನೆಗೆ ಬೆಂಗಳೂರಿನಲ್ಲಿ ಬುದ್ಧಿಜೀವಿಗಳ ಜತೆ ಸಂವಾದ ನಡೆಸುವ ಸಾಧ್ಯತೆಯಿದೆ.

ಸಭೆಯಲ್ಲಿದ್ದವರು: ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ್, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್, ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ರಾಜ್ಯಸಭೆ ಸದಸ್ಯ ರಾಜೀವ್ ಗೌಡ.

2 ಕ್ಷೇತ್ರಗಳಲ್ಲಿ ಸಿಎಂ ಸ್ಪರ್ಧೆ?

ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರ ಜತೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಅಹಿಂದ ಮತಬ್ಯಾಂಕನ್ನು ಸೆಳೆಯುವ ಉದ್ದೇಶದಿಂದ ಇಲ್ಲಿನ ಕ್ಷೇತ್ರವೊಂದರಿಂದ ಸ್ಪರ್ಧಿಸಬೇಕು ಎಂಬುದು ಅಲ್ಲಿನ ಮುಖಂಡರು, ಕಾರ್ಯಕರ್ತರ ಬೇಡಿಕೆ ಎನ್ನಲಾಗಿದೆ. ಆದರೆ ಈ ಕುರಿತು ಸಿಎಂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ, ತವರು ರಾಜ್ಯದ ವಡೋದರದಿಂದಲೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮೋದಿ ವಾರಾಣಸಿಯಿಂದ ಸ್ಪರ್ಧಿಸಿದ್ದು, ಇಡೀ ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಅಲೆ ನಿರ್ವಣವಾಗಲು ಕಾರಣವಾಗಿತ್ತು.?

ಸಭೆಯಲ್ಲಿ ನಡೆದದ್ದೇನು?

# ಪ್ರತಿ ನಾಯಕರೊಂದಿಗೂ ಪ್ರತ್ಯೇಕವಾಗಿ ಚರ್ಚೆ ಮತ್ತು ಪಕ್ಷದ ವಾಸ್ತವ ಸ್ಥಿತಿಗತಿಗಳ ಕುರಿತು ಅಭಿಪ್ರಾಯ ಸಂಗ್ರಹ

# ರಾಜ್ಯದ ಇತರೆ ಕಾಂಗ್ರೆಸ್ ನಾಯಕರೊಂದಿಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಲು ನಿರ್ಧಾರ

# ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಒಟ್ಟಾರೆ ನಿರ್ವಹಣೆ ಬಗ್ಗೆ ತೃಪ್ತಿ

# ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ 30 ಕ್ಷೇತ್ರಗಳನ್ನು ಗೆದ್ದುಕೊಳ್ಳಲು ರಣನೀತಿ

# ಚುನಾವಣೆ ವೇಳೆ ವಿವಾದಾತ್ಮಕ ಹೇಳಿಕೆ ನೀಡದಂತೆ ಕಿವಿಮಾತು

# ಹಿಂದುಗಳ ಮನಸ್ಸಿಗೆ ಬೇಸರ ತರುವಂತೆ ವರ್ತಿಸುವುದು ಬೇಡ ಎಂದು ಸೂಚನೆ

ಹೊಸಬರಿಗೆ ಟಿಕೆಟ್?

ಹೊಸ ಮುಖಗಳಿಗೆ ಟಿಕೆಟ್ ನೀಡಬೇಕೆಂಬ ಚಿಂತನೆ ರಾಹುಲ್, ಸಿದ್ದರಾಮಯ್ಯ ಮತ್ತು ಇತರೆ ನಾಯಕರಲ್ಲಿ ಇದ್ದರೂ, ಗೆಲ್ಲುವ ಸಾಮರ್ಥ್ಯವಿದ್ದರೆ ಮಾತ್ರ ಪರ್ಯಾಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದಲೂ ಕರ್ನಾಟಕ ಕಾಂಗ್ರೆಸ್​ಗೆ ಮಹತ್ವದ್ದು. ಹೀಗಾಗಿ ಅನಗತ್ಯವಾಗಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬುದೂ ಶುಕ್ರವಾರದ ಸಭೆಯಲ್ಲಿ ಚರ್ಚೆಗೆ ಬಂದಿದೆ.

Leave a Reply

Your email address will not be published. Required fields are marked *