Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಮೂಗಿಗೆ ನೀರು ಸವರುವ ರಾಜಕೀಯ!

Wednesday, 10.01.2018, 3:04 AM       No Comments

| ಎನ್. ವೆಂಕಟೇಶ್ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯ ಚುನಾವಣಾ ಅಸ್ತ್ರವೇ ಶಾಶ್ವತ ನೀರಾವರಿ. ಪ್ರತಿ ಬಾರಿಯೂ ನೀರಿನ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಅಖಾಡಕ್ಕೆ ಧುಮುಕುವ ಸ್ಪರ್ಧಿಗಳು ನಂತರ ಮತದಾರರ ಮೂಗಿಗೆ ತುಪ್ಪ ಸವರಿದ್ದೇ ಹೆಚ್ಚು. ಆದರೆ ಈ ಬಾರಿ ಕ್ಷೇತ್ರದ ಜನ ರಾಜಕಾರಣಿಗಳ ಪೊಳ್ಳು ಭರವಸೆಗಳಿಗೆ ಮಾರುಹೋಗದಂಥ ವಾತಾವರಣ ಸೃಷ್ಟಿಯಾಗಿದೆ. ಅಂತರ್ಜಲ ಕುಸಿತ, ಫ್ಲೋರೈಡ್ ಸಮಸ್ಯೆ ಹೆಚ್ಚಿರುವ ಜಿಲ್ಲೆಯಲ್ಲಿÉ ಕೈ, ತೆನೆ ನಡುವೆ ಜಿದ್ದಾಜಿದ್ದಿ ಇದ್ದರೂ ಕೆಲ ಕ್ಷೇತ್ರಗಳಲ್ಲಿ ಸಿಪಿಎಂ, ಬಿಜೆಪಿ ಗೆಲುವಿನ ಖಾತೆ ತೆರೆಯಲು ಹವಣಿಸುತ್ತಿವೆ.

ಜಿಲ್ಲೆಯಲ್ಲಿ ಬಲಿಜಿಗರು ಮತ್ತು ಒಕ್ಕಲಿಗರೇ ಪ್ರಬಲರು. ಆದರೆ ಮತದಾರರು ಹಿಂದಿನಿಂದಲೂ ಜಾತಿ ಬದಲಿಗೆ ಪಕ್ಷ, ವೈಯಕ್ತಿಕ ಬಲಾಬಲ ಆಧಾರದ ಮೇಲೆಯೇ ಅಭ್ಯರ್ಥಿಗೆ ಮಣೆ ಹಾಕುತ್ತಿರುವುದು ಇಲ್ಲಿನ ಇತಿಹಾಸ. ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ, ಶಿಡ್ಲಘಟ್ಟ ಹಾಗೂ ಗೌರಿಬಿದನೂರು ವಿಧಾನಸಭಾ ಕ್ಷೇತ್ರಗಳಿವೆ. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಸಂಸದ ಕೆ.ಎಚ್. ಮುನಿಯಪ್ಪ ಅವರಂತಹ ಘಟಾನುಘಟಿ ನಾಯಕರಿಂದ ಜಿಲ್ಲೆ ರಾಜಕೀಯವಾಗಿ ಗಮನ ಸೆಳೆಯುತ್ತಿದೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಪಕ್ಷೇತರರು ಆಗಾಗ ಗೆಲುವಿನ ರುಚಿ ಕಂಡಿದ್ದಾರೆ. ಇದುವರೆಗೂ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಮಲ ಅರಳಿಸಲು ಸಾಧ್ಯವಾಗಿಲ್ಲ.

ರೇಷ್ಮೆ ಊರಲ್ಲಿ ತೆನೆ ಚಿಗುರೀತೆ?

ರೇಷ್ಮೆಗೆ ಹೆಸರಾಗಿರುವ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. ಬಿಜೆಪಿ ಇಲ್ಲಿ ಲೆಕ್ಕಕ್ಕಿಲ್ಲ. ಕಾಂಗ್ರೆಸ್ ಭಿನ್ನಮತದಿಂದ 2013ರಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ವಿ. ಮುನಿಯಪ್ಪ ಅವರನ್ನು ಸೋಲಿಸಿ ಎಂ. ರಾಜಣ್ಣ ಶಾಸಕರಾಗಿದ್ದಾರೆ. ಆದರೀಗ, ಜೆಡಿಎಸ್​ನಲ್ಲಿ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮಾಜ ಸೇವಕ ಮೇಲೂರು ರವಿಕುಮಾರ್ ಬಂಡಾಯ ಎದ್ದಿರುವುದು ಶಾಸಕ ರಾಜಣ್ಣ ಅವರಿಗೆ ತಲೆನೋವಾಗಿದೆ. ಒಗ್ಗಟ್ಟಾಗದಿದ್ದರೆ ಜೆಡಿಎಸ್ ಗೆಲ್ಲುವುದು ಕಷ್ಟ. ಮುನಿಯಪ್ಪ ಮೇಲಿನ ಅನುಕಂಪದ ಅಲೆಯೇ ಕಾಂಗ್ರೆಸ್​ಗೆ ಪ್ಲಸ್ ಪಾಯಿಂಟ್ ಆಗಿದ್ದು, ಜೆಡಿಎಸ್ ಬಂಡಾಯದ ಉಪಯೋಗ ಪಡೆದುಕೊಂಡರೆ ಗೆಲುವು ಕೈಹಿಡಿಯಬಹುದು.

ಉಪ ಸಭಾಧ್ಯಕ್ಷರಿಗೆ ಅಗ್ನಿ ಪರೀಕ್ಷೆ!

ಗೌರಿಬಿದನೂರು ಕ್ಷೇತ್ರದಿಂದ ಸತತ 4 ಬಾರಿ ಗೆಲುವು ಸಾಧಿಸಿರುವ ವಿಧಾನಸಭೆ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿಗೆ ಈ ಬಾರಿ ಅಗ್ನಿ ಪರೀಕ್ಷೆ. ಶಾಸಕರ ಅಭಿವೃದ್ಧಿ ಕೆಲಸದ ನಡುವೆಯೂ ಬಿಜೆಪಿ ಮತ್ತು ಜೆಡಿಎಸ್ ಪ್ರಾಬಲ್ಯ ಹೆಚ್ಚಿಸಿಕೊಂಡಿವೆ. ಈ ಸಲ ಜೆಡಿಎಸ್​ನಲ್ಲಿ ತಾಲೂಕು ಅಧ್ಯಕ್ಷ ಸಿ. ಮಂಜುನಾಥರೆಡ್ಡಿ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆರ್. ಅಶೋಕ್​ಕುಮಾರ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವೇಣುಗೋಪಾಲ್ ನಾಯಕ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದ್ದ ಸಮಾಜಸೇವಕ ಜೈಪಾಲ್ ರೆಡ್ಡಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಶಾಸಕರು ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಿಕೊಂಡರೆ ಗೆಲುವಿನ ಬಾಗಿಲು ತಟ್ಟಬಹುದು.

ಪಾಳೇಗಾರ ಯಾರು?

ಗುಮ್ಮನಾಯಕನಪಾಳ್ಯದ ಪಾಳೇಗಾರರ ಪಾರುಪತ್ಯದಲ್ಲಿದ್ದ ಬಾಗೇಪಲ್ಲಿಯಲ್ಲಿ ಸಮಾಜಸೇವೆಯಿಂದಲೇ ಪಕ್ಷೇತರ ಅಭ್ಯರ್ಥಿ ಎಸ್.ಎನ್. ಸುಬ್ಬಾರೆಡ್ಡಿ ಶಾಸಕರಾದರು. ಈಗವರು ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಈ ನಡುವೆ, ಸುಬ್ಬಾರೆಡ್ಡಿ ವಿರುದ್ಧ ಸೋಲನುಭವಿಸಿದ ಮಾಜಿ ಶಾಸಕ ಎನ್. ಸಂಪಂಗಿ ಸೆಡ್ಡು ಹೊಡೆಯುತ್ತಿದ್ದಾರೆ. ಈ ಬಾರಿ ಪಕ್ಷದಲ್ಲಿ ಪ್ರಬಲವಾಗಿರುವ ಬಂಡಾಯದ ಬಿಸಿಯನ್ನು ಮೊದಲು ತಣ್ಣಗೆ ಮಾಡಬೇಕು. ಇಲ್ಲದಿದ್ದಲ್ಲಿ ಗೆಲುವು ದೂರವಾಗುತ್ತದೆ. ಸಿಪಿಎಂ ಹೆಚ್ಚಿನ ಪ್ರಾಬಲ್ಯ ಹೊಂದಿದ್ದು, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಬಾವುಟ ಹಾರಿಸಲು ಮುಂದಾಗಿದೆ. ಜೆಡಿಎಸ್ ಪುಟಿದೇಳಲು ಕಸರತ್ತು ನಡೆಸುತ್ತಿದೆ. ಚಿತ್ರನಟ ಸಾಯಿಕುಮಾರ್ ಈ ಭಾಗದಿಂದ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸನ್ನದ್ಧರಾಗಿದ್ದಾರೆ. ಜೆಡಿಎಸ್​ನಿಂದ ವಿಧಾನಪರಿಷತ್ ಸದಸ್ಯ ಸಿ.ಆರ್. ಮನೋಹರ್, ಮುಖಂಡ ಡಿ.ಜೆ. ನಾಗರಾಜರೆಡ್ಡಿ, ಗುಂಜೂರು ಶ್ರೀನಿವಾಸರೆಡ್ಡಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಚಿಂತಾಮಣಿಯಲ್ಲಿ ನಾನಾ ನೀನಾ

ಚಿಂತಾಮಣಿಯಲ್ಲಿ ಅನೇಕ ವರ್ಷ ಮನೆ ಮಾಡಿದ್ದ ಕುಟುಂಬ ರಾಜಕಾರಣ ಮೆಟ್ಟಿನಿಂತು ಜೆಡಿಎಸ್ ಜೆ.ಕೆ. ಕೃಷ್ಣಾರೆಡ್ಡಿ ಶಾಸಕರಾಗಿದ್ದಾರೆ. ಪಕ್ಷದ ಬೆಂಬಲ ಮತ್ತು ಸಮಾಜ ಸೇವೆಯಿಂದ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಆದರೆ ಕಳೆದ ಬಾರಿ ಸಂಸದ ಕೆ.ಎಚ್. ಮುನಿಯಪ್ಪ ವಿರುದ್ಧ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿ ಸೋಲನುಭವಿಸಿದ್ದ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪುನಃ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಇಬ್ಬರಿಗೂ ಬಂಡಾಯದ ಸಮಸ್ಯೆ ಕಾಡುತ್ತಿದೆ. ಒಟ್ಟಾರೆ ಇಲ್ಲಿ ರಾಯಲಸೀಮಾ ಮಾದರಿಯಲ್ಲಿ ನಾನಾ ನೀನಾ ಎನ್ನುವಂತೆ ಸ್ಪರ್ಧೆ ನಡೆಯುವುದಂತೂ ಖಚಿತ.

ಕೈ ಸುಡುತ್ತಿರುವ ಬಂಡಾಯ

ಚಿಕ್ಕಬಳ್ಳಾಪುರ ಮತದಾರರು ಒಬ್ಬರನ್ನೇ ಸತತವಾಗಿ ಎರಡು ಬಾರಿ ಗೆಲ್ಲಿಸಿಲ್ಲ. ಈ ಬಾರಿ ಶಾಸಕ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ದಾಖಲೆ ಮುರಿಯಲು ಹಾತೊರೆಯುತ್ತಿದೆ. ಆದರೆ ಬಂಡಾಯ ಕೈ ಸುಡುತ್ತಿದೆ. ಶತಾಯಗತಾಯ ಶಾಸಕರನ್ನು ಸೋಲಿಸಲು ಪ್ರಭಾವಿ ಮುಖಂಡರೇ ಕೈ ಜೋಡಿಸಿದ್ದಾರೆ. ಗೆಲ್ಲುವುದಕ್ಕಿಂತ ಶತ್ರುವಿನ ಸೋಲು ಮುಖ್ಯ ಎಂಬ ಆಶಯ ಹೊಂದಿದ್ದಾರೆ. ಇದಕ್ಕೆ ಜೆಡಿಎಸ್ ಪ್ರಾಬಲ್ಯ ಮತ್ತು ಕಾಂಗ್ರೆಸ್​ನಲ್ಲಿನ ಬಿರುಕು ಪೂರಕವಾಗಿದೆ. ಇಲ್ಲಿ ಪಕ್ಷದ ಜತೆಗೆ ವೈಯಕ್ತಿಕ ವರ್ಚಸ್ಸು ಶಾಸಕರ ಗೆಲುವಿಗೆ ಕೆಲಸ ಮಾಡಬೇಕು. ಕಾಂಗ್ರೆಸ್ ಬಂಡಾಯವಾಗಿ ಸಮಾಜ ಸೇವಕ ಕೆ.ವಿ. ನವೀನ್ ಕಿರಣ್ ಸ್ಪರ್ಧಿಸುವ ಸಾಧ್ಯತೆ ಇದೆ. ಜೆಡಿಎಸ್​ನಿಂದ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಪಕ್ಷದ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್ ಆಕಾಂಕ್ಷಿಗಳು. ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಅಷ್ಟಕಷ್ಟೆಯಾದರೂ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜಿ.ವಿ. ಮಂಜುನಾಥ್ ಆಕಾಂಕ್ಷಿಯಾಗಿದ್ದಾರೆ.

Leave a Reply

Your email address will not be published. Required fields are marked *

Back To Top