Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಸಕ್ಕರೆ ಜಿಲ್ಲೆ ಯಾರಿಗೆ ಸಿಹಿ, ಯಾರಿಗೆ ಕಹಿ?

Thursday, 11.01.2018, 3:05 AM       No Comments

| ರಾಯಣ್ಣ ಆರ್.ಸಿ. ಬೆಳಗಾವಿ

ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಸಕ್ಕರೆ ಜಿಲ್ಲೆ’ ಬೆಳಗಾವಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಯಾರಿಗೆ ಸಿಹಿ-ಯಾರಿಗೆ ಕಹಿ ಉಣಿಸಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ, ಸಕ್ಕರೆ ಉತ್ಪಾದನೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿರುವ ಜಿಲ್ಲೆಯಲ್ಲಿ ‘ಶುಗರ್​ಲಾಬಿ’ ಬಲಾಢ್ಯವಾಗಿದೆ. ಅನೇಕ ರಾಜಕಾರಣಿಗಳು ಪಕ್ಷದ ವರ್ಚಸ್ಸಿಗಿಂತ ವೈಯಕ್ತಿಕ ಪ್ರಭಾವದ ಮೂಲಕ ತಂತಮ್ಮ ಕ್ಷೇತ್ರಗಳಲ್ಲಿ ಹಿಡಿತ ಹೊಂದಿದ್ದಾರೆ. ಇಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಪ್ರಬಲ ಸ್ಪರ್ಧೆ ಕಂಡುಬಂದರೂ ಹೊಂದಾಣಿಕೆ ರಾಜಕಾರಣ ಈ ಭಾಗದ ವಿಶೇಷತೆಯಾಗಿದೆ. ಅಥಣಿ, ಕಾಗವಾಡ, ರಾಯಬಾಗ, ನಿಪ್ಪಾಣಿ, ಕುಡಚಿ, ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಭಾವ ಹೆಚ್ಚಾಗಿದೆ.

 

ರಾಜು ಕಾಗೆಗೆ ಅಗ್ನಿಪರೀಕ್ಷೆ

ಹ್ಯಾಟ್ರಿಕ್ ಬಾರಿಸಿರುವ ಬಿಜೆಪಿ ಶಾಸಕ ರಾಜು ಕಾಗೆ ಅವರಿಗೆ ಕಾಗವಾಡದಲ್ಲಿ ಈ ಬಾರಿ ಗೆಲುವು ಕಬ್ಬಿಣದ ಕಡಲೆಯಾಗಿದೆ. ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಜೈಲಿಗೆ ಹೋಗಿ ಬಂದಿರುವುದು ಕಾಗೆ ಪ್ರಭಾವ ಕುಗ್ಗಿಸಿದೆ. ಕಳೆದ ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿ 1,500 ಮತಗಳ ಅಂತರದಿಂದ ಸೋತಿದ್ದ ಶ್ರೀಮಂತ ಪಾಟೀಲರನ್ನು ಚುನಾವಣೆ ಹೊಸ್ತಿಲಲ್ಲಿ ಪಕ್ಷಕ್ಕೆ ಕರೆತಂದಿರುವುದು ಕಾಂಗ್ರೆಸ್ಸಿಗೆ ಬಲ ಬಂದಂತಾಗಿದೆ. ಜೆಡಿಎಸ್​ನಲ್ಲಿ ಉತ್ತರ ಪಾಟೀಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

 

ಕುಡಚಿ ಕ್ಷೇತ್ರಕ್ಕೆ ರಾಜೀವನೇ ಮಹಾರಾಜ

ಕಳೆದ ಬಾರಿ ಬಿಎಸ್​ಆರ್ ಪಕ್ಷದಿಂದ 45 ಸಾವಿರ ಮತಗಳ ಅಂತರದಿಂದ ಅಚ್ಚರಿಯ ರೀತಿ ಫಲಿತಾಂಶಕ್ಕೆ ಕಾರಣವಾಗಿದ್ದ ಪಿ. ರಾಜೀವ್ ಈ ಬಾರಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್​ನಿಂದ ಮಾಜಿ ಶಾಸಕ ಎಸ್.ಬಿ. ಘಾಟಗೆ ಪುತ್ರ ಅಮಿತ ಘಾಟಗೆ, ಹಾರೂಗೇರಿಯ ಮಹೇಶ ತಮ್ಮಣ್ಣವರ ಆಕಾಂಕ್ಷಿಗಳಾಗಿದ್ದಾರೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿರುವುದು, ಈ ಸಲ ಬಿಜೆಪಿ ಬಲ ಇರುವುದರಿಂದ ಹಾಲಿ ಶಾಸಕರಿಗೆ ಗೆಲುವು ಸುಲಭ ಎಂಬ ಮಾತುಗಳು ಕೇಳಿಬರುತ್ತಿವೆ. ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲರ ಪ್ರಭಾವ ಕಾಂಗ್ರೆಸ್​ಗೆ ಪ್ಲಸ್ ಪಾಯಿಂಟ್. ಜೆಡಿಎಸ್​ನಿಂದ ಸುರೇಶ ಐಹೊಳೆ ಹೆಸರು ಕೇಳಿಬರುತ್ತಿದೆ.

ಸವದಿಗೆ ಎದುರಾಳಿಯೇ ಇಲ್ಲ

ಬಿಜೆಪಿಯಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಲಕ್ಷ್ಮಣ ಸವದಿ ಅಥಣಿ ಕ್ಷೇತ್ರದಲ್ಲಿ ತಮ್ಮದೇ ವೈಯಕ್ತಿಕ ಪ್ರಭಾವ ಹೊಂದಿದ್ದಾರೆ. ಇವರ ನೇತೃತ್ವದ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ರಾಜ್ಯದಲ್ಲಿಯೇ ರೈತರಿಗೆ ಅತ್ಯಧಿಕ ದರ ನೀಡುತ್ತ ಬಂದಿರುವುದರಿಂದ ಶುಗರ್ ಲಾಬಿ ನೆರವೂ ಬೆನ್ನಿಗಿದೆ. ಕಾಂಗ್ರೆಸ್​ನಿಂದ ಪ್ರಬಲ ಎದುರಾಳಿ ಇಲ್ಲದಿರುವುದೂ ಪ್ಲಸ್ ಪಾಯಿಂಟ್. ಎಸ್.ಕೆ. ಬುಟಾಳೆ, ಇವರ ಸಹೋದರ ಬಸವರಾಜ ಬುಟಾಳೆ, ಮಹೇಶ ಕುಮಟಳ್ಳಿ, ಗಜಾನನ ಮಂಗಸೂಳಿ, ಎಸ್.ಎಂ. ನಾಯಿಕ, ಸತ್ಯಪ್ಪ ಬಾಗೆನ್ನವರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಕಾಂಗ್ರೆಸ್​ನಲ್ಲಿನ ಗುಂಪುಗಾರಿಕೆ ರಾಜಕಾರಣ, ಆಂತರಿಕ ಭಿನ್ನಮತ ಸವದಿ ಹಾದಿ ಸುಗಮಗೊಳಿಸಿದಂತೆ ಕಂಡುಬರುತ್ತಿದ್ದರೂ, ‘ಕೈ’ನಲ್ಲಿ ಒಗ್ಗಟ್ಟು ಮೂಡಿದರೆ ಪ್ರಬಲ ಸ್ಪರ್ಧೆ ನಡೆಯಲಿದೆ.

ಶಶಿಕಲಾ ಅಚ್ಚುಮೆಚ್ಚು

ತಂಬಾಕು ಬೆಳೆಗೆ ಪ್ರಸಿದ್ಧವಾಗಿರುವ ನಿಪ್ಪಾಣಿ ವಾಣಿಜ್ಯ ನಗರಿಯಾಗಿ ಬೆಳೆಯುತ್ತಿದೆ. ಲಿಂಗಾಯತ ಹಾಗೂ ಮರಾಠಿ ಮತಗಳೇ ನಿರ್ಣಾಯಕವಾಗಿರುವ ನಿಪ್ಪಾಣಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಶಶಿಕಲಾ ಜೊಲ್ಲೆ ವಿಧಾನಸಭೆ ಪ್ರವೇಶಿಸಿದ್ದಾರೆ. ಅಭಿವೃದ್ಧಿ ಕೆಲಸ ಹಾಗೂ ಜೊಲ್ಲೆ ಉದ್ಯೋಗ ಸಮೂಹದ ಮೂಲಕ ಹಲವಾರು ಕಾರ್ಯಗಳನ್ನು ಮಾಡುತ್ತ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಕಾಂಗ್ರೆಸ್​ನಿಂದ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಉತ್ತಮ ಪಾಟೀಲ, ವೀರಕುಮಾರ ಪಾಟೀಲ, ಲಕ್ಷ್ಮಣರಾವ್ ಚಿಂಗಲೆ ಆಕಾಂಕ್ಷಿಗಳಾಗಿದ್ದಾರೆ.

ಹುಕ್ಕೇರಿಗೆ ಟಫ್

ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಸಂಸದ ಪ್ರಕಾಶ ಹುಕ್ಕೇರಿ ಪ್ರಭಾವ ಇದ್ದು, ನಾಲ್ಕು ಚುನಾವಣೆಯಿಂದ ಬೇರೆಯವರಿಗೆ ಅವಕಾಶ ನೀಡಿಲ್ಲ. ಅವರು ಸಂಸದರಾದ ಬಳಿಕ ಪುತ್ರ ಗಣೇಶ ಹುಕ್ಕೇರಿ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಆದರೆ, ಅವರು ಜನಸಾಮಾನ್ಯರ ಜತೆ ಅಷ್ಟಾಗಿ ಬೆರೆಯುವುದಿಲ್ಲ ಎಂಬ ಅಸಮಾಧಾನವೂ ಇದೆ. ಈವರೆಗೆ ಅನಾಯಾಸವಾಗಿ ಕ್ಷೇತ್ರ ಗೆದ್ದುಕೊಂಡು ಬಂದಿದ್ದ ಹುಕ್ಕೇರಿಗೆ ಈ ಬಾರಿ ಗೆಲುವು ಅಷ್ಟು ಸುಲಭವಲ್ಲ. ಅಣ್ಣಾಸಾಹೇಬ ಜೊಲ್ಲೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಸಂಘಟನೆ ಬಲಗೊಳಿಸಿರುವ ಅಣ್ಣಾಸಾಹೇಬ ಜೊಲ್ಲೆಗೆ ಬಿಜೆಪಿ ಟಿಕೆಟ್ ಸಿಕ್ಕರೆ, ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಜೆಡಿಎಸ್​ನಿಂದ ಆರ್.ಆರ್. ಪಾಟೀಲ ಹೆಸರು ಕೇಳಿಬರುತ್ತಿದೆ.

ಐಹೊಳೆಗೆ ಅಪ್ಪ-ಮಗ ಸೆಡ್ಡು

ರಾಯಬಾಗ ಕ್ಷೇತ್ರದಲ್ಲಿ ಬಿಜೆಪಿಯ ದುರ್ಯೋಧನ ಐಹೊಳೆ ಕಳೆದ ಬಾರಿ 700 ಮತಗಳ ಅಂತರದಿಂದ ಗೆದ್ದಿದ್ದರು. ಪ್ರತಿಪಕ್ಷದಲ್ಲಿದ್ದರೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ಅವರಿಗೆ ಪ್ಲಸ್ ಪಾಯಿಂಟ್. ಕ್ಷೇತ್ರದ ಮೇಲೆ ಪ್ರಭಾವ ಹೊಂದಿರುವ ಎಂಎಲ್​ಸಿ ವಿವೇಕರಾವ್ ಪಾಟೀಲ ಹಾಗೂ ಅವರ ಪುತ್ರ ಜಿಪಂ ಸದಸ್ಯ ಪ್ರಣಯ ಪಾಟೀಲ ಹಾಲಿ ಶಾಸಕರಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಸಿಎಂ ಸಾಧನಾ ಸಮಾವೇಶ ನಡೆಸಿ ಪ್ರಭಾವ ತೋರಿದ್ದಾರೆ. ಕಾಂಗ್ರೆಸ್​ನಿಂದ ಪ್ರದೀಪ ಮಾಳಗಿ, ಮಹಾವೀರ ಮೊಹಿತೆ, ಶಿವಕುಮಾರ ಕಿರಣಗಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

 

Leave a Reply

Your email address will not be published. Required fields are marked *

Back To Top