Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಹಾಲಿಗಳು ಸೋಲ್ತಿಲ್ಲ, ಬೇರೆಯವರು ಗೆಲ್ತಿಲ್ಲ!

Friday, 12.01.2018, 3:05 AM       No Comments

| ಅನಿಲ್ ಕಾಜಗಾರ ಬೆಳಗಾವಿ

ಹುಕ್ಕೇರಿ (ಉಮೇಶ್ ಕತ್ತಿ), ಗೋಕಾಕ (ರಮೇಶ್ ಜಾರಕಿಹೊಳಿ), ಯಮಕನಮರಡಿ- ಮೀಸಲು (ಸತೀಶ್ ಜಾರಕಿಹೊಳಿ), ಅರಬಾವಿ (ಬಾಲಚಂದ್ರ ಜಾರಕಿಹೊಳಿ), ರಾಮದುರ್ಗ (ಅಶೋಕ ಪಟ್ಟಣ), ಸವದತ್ತಿ (ಆನಂದ ಮಾಮನಿ)- ಈ ಆರು ವಿಧಾನಸಭಾ ಕ್ಷೇತ್ರಗಳು ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಇಲ್ಲಿ ಸತತ ಗೆಲುವಿನ ಜತೆಗೆ ಹ್ಯಾಟ್ರಿಕ್, ಡಬಲ್ ಹ್ಯಾಟ್ರಿಕ್ ಬಾರಿಸಿದ ಘಟಾನುಘಟಿ ಅಭ್ಯರ್ಥಿಗಳಿದ್ದಾರೆ. ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸಿನ ಪ್ರಭಾವಳಿ ನೆಚ್ಚಿಕೊಂಡೇ ರಾಜಕಾರಣ ಮಾಡುವ ಬಹುತೇಕ ಶಾಸಕರು, ಈ ಬಾರಿಯೂ ‘ಅದೇ ಫಾಮ್ರ್’ನಲ್ಲಿದ್ದಾರೆ. ಅದೇ ಹುಮ್ಮಸ್ಸಿನಲ್ಲಿ ಅಖಾಡಕ್ಕಿಳಿಯುತ್ತಿದ್ದಾರೆ.

ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ಇದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಇದೆ ಫಲಿತಾಂಶ ಹೊರಬರುವ ಸಾಧ್ಯತೆ ದಟ್ಟವಾಗಿದೆ. ಸಹಕಾರ ಸಚಿವ ರಮೇಶ ಜಾರಕಿಹೊಳಿ, ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಕಾಂಗ್ರೆಸ್​ನ ಶಾಸಕರಾಗಿದ್ದರೆ, ಮಾಜಿ ಸಚಿವರಾದ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಮತ್ತು ಆನಂದ ಮಾಮನಿ ಬಿಜೆಪಿ ಹಾಲಿ ಶಾಸಕರು. ಜೆಡಿಎಸ್​ನಲ್ಲಿದ್ದ ಉಮೇಶ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ದಶಕದ ಹಿಂದೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಜೆಡಿಎಸ್ ಪ್ರಭಾವ ಕುಗ್ಗಿದೆ. ಪ್ರಸ್ತುತ ರಾಜಕೀಯ ಸನ್ನಿವೇಶಗಳ ಪ್ರಕಾರ, ಈ ಆರೂ ಜನ ಕಣಕ್ಕಿಳಿಯುವುದು ನಿಶ್ಚಿತ.

ದಾಖಲೆ ಗೆಲುವಿಗೆ ಉಮೇಶ ಕತ್ತಿ ಸಿದ್ಧತೆ

ಸಚಿವ ಕಾಗೋಡು ತಿಮ್ಮಪ್ಪ ಬಳಿಕ ವಿಧಾನಸಭೆಯ ಹಿರಿಯ ಸದಸ್ಯ ಎಂಬ ಕೀರ್ತಿಗೆ ಪಾತ್ರರಾಗಿರುವ ಉಮೇಶ ಕತ್ತಿ 8 ಬಾರಿ ಸ್ಪರ್ಧಿಸಿ 7 ಗೆಲುವು ಸಾಧಿಸಿದ್ದಾರೆ. 4 ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಚೊಚ್ಚಲ ಕೃಷಿ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿರುವ ಕತ್ತಿ, ವಿವಾದಾತ್ಮಕ ಹೇಳಿಕೆ ಮೂಲಕ ಸದಾ ಸುದ್ದಿಯಲ್ಲಿದ್ದಾರೆ. ಈ ಬಾರಿಯೂ ಹುಕ್ಕೇರಿಯಿಂದ ಬಿಜೆಪಿ ಅಭ್ಯರ್ಥಿಯಾಗುವುದು ಖಚಿತ. ದಶಕದಿಂದ ಚುನಾವಣೆಯಿಂದ ದೂರವಿದ್ದ ಮಾಜಿ ಸಚಿವ ಎ.ಬಿ. ಪಾಟೀಲ ಕಾಂಗ್ರೆಸ್ ಆಭ್ಯರ್ಥಿಯಾಗಲಿದ್ದಾರೆ. ಹೀಗಾಗಿ ಬರುವ ಚುನಾವಣೆಯಲ್ಲಿ ಹಿರಿಯ ರಾಜಕಾರಣಿಗಳಿಬ್ಬರ ನಡುವಿನ ಪೈಪೋಟಿ ಕುತೂಹಲ ಮೂಡಿಸಿದೆ.

ಬಾಲಚಂದ್ರ ಗೆಲುವಿನ ಓಟ

ಅರಬಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಈವರೆಗೆ ಉಪಚುನಾವಣೆ ಸೇರಿ 4ರಲ್ಲಿ ಸತತ ಗೆಲುವು ದಾಖಲಿಸಿದ್ದು, ಎರಡು ಸಲ ಸಚಿವರಾಗಿದ್ದಾರೆ. ಬಾಲಚಂದ್ರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಕ್ಷೇತ್ರದ ಜತೆ ಸಂಪರ್ಕ ಹೊಂದಿರುವ ಬಾಲಚಂದ್ರರಿಗೆ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿವೇಕರಾವ್ ಪಾಟೀಲ ಇದೀಗ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಾಲಚಂದ್ರ ವಿರುದ್ಧ ಸ್ಪರ್ಧಿಸುವುದಿಲ್ಲ ಎಂದು ವಿವೇಕರಾವ್ ಸ್ಪಷ್ಟಪಡಿಸಿದ್ದಾರೆ.

ಸಚಿವ ರಮೇಶಗೆ ಪೂಜಾರಿ ಎದುರಾಳಿ

ಗೋಕಾಕದಲ್ಲಿ ಕಾಂಗ್ರೆಸ್​ನಿಂದ ನಾಲ್ಕು ಸಲ ಗೆಲುವು ದಾಖಲಿಸಿ, ಹಾಲಿ ಸಚಿವರಾಗಿರುವ ರಮೇಶ ಜಾರಕಿಹೊಳಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಕಸರತ್ತು ಆರಂಭಿಸಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಅಶೋಕ ಪೂಜಾರಿ ಕಮಲ ಪಕ್ಷದ ಅಭ್ಯರ್ಥಿ. ಕ್ಷೇತ್ರದ ಜತೆಗೆ ನಿರಂತರ ಸಂಪರ್ಕ ಹೊಂದಿರುವ ಪೂಜಾರಿ ಈ ಹಿಂದೆ ಜೆಡಿಎಸ್​ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. 5 ಚುನಾವಣೆ ಎದುರಿಸಿ ನಾಲ್ಕರಲ್ಲಿ ಜಯ ದಾಖಲಿಸಿರುವ ರಮೇಶ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯ ಅತ್ಯಾಪ್ತರೂ ಆಗಿದ್ದಾರೆ. ಮಂತ್ರಿ ಆದ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಜನ ಬದಲಾವಣೆ ಬಯಸುತ್ತಾರೋ ಅಥವಾ ರಮೇಶರನ್ನೇ ಮತ್ತೆ ಆರಿಸುತ್ತಾರೋ ಕಾದು ನೋಡಬೇಕು.

ಬಿಜೆಪಿ ಭಿನ್ನಮತ, ಪಟ್ಟಣಗೆ ಲಾಭ

ಸಿಎಂ ಸಿದ್ದರಾಮಯ್ಯ ಆಪ್ತ ಹಾಗೂ ಸರ್ಕಾರದ ಮುಖ್ಯ ಸಚೇತಕರಾಗಿರುವ ಅಶೋಕ ಪಟ್ಟಣ ರಾಮದುರ್ಗದಲ್ಲಿ ಕಾಂಗ್ರೆಸ್​ನಿಂದ ಸತತ ಎರಡು ಬಾರಿ ಗೆಲುವು ದಾಖಲಿಸಲು ಕ್ಷೇತ್ರದ ಬಿಜೆಪಿ ನಾಯಕರ ಭಿನ್ನಮತವೇ ಕಾರಣ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ನಾಯಕರು ಒಂದಾಗದಿದ್ದರೆ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿರುವ ಅಶೋಕ ಪಟ್ಟಣ ಹ್ಯಾಟ್ರಿಕ್ ಗೆಲುವು ಶತಸಿದ್ಧ. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ರಮೇಶ ಪಂಚಕಟ್ಟಿಮಠ, ಡಾ.ಕೆ.ವಿ. ಪಾಟೀಲ, ಅನಿವಾಸಿ ಭಾರತೀಯ ಚಂದ್ರಕಾಂತ ಯತ್ನಟ್ಟಿ, ಪಿ.ರಾಜೇಶ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಗುಡದಾರಿ, ಜಿಪಂ ಸದಸ್ಯ ರಮೇಶ ದೇಶಪಾಂಡೆ ಸೇರಿ 7 ಆಕಾಂಕ್ಷಿಗಳು ಬಿಜೆಪಿ ಟಿಕೆಟ್​ಗೆ ಶತಪ್ರಯತ್ನ ನಡೆಸುತ್ತಿದ್ದಾರೆ.

ಸತೀಶ ಜಾರಕಿಹೊಳಿಗೆ ಸಹೋದರನೇ ಸ್ಪರ್ಧಿ?

ಯಮಕನಮರಡಿ ಮೀಸಲು ಕ್ಷೇತ್ರದಿಂದ ಸತತ ಎರಡು ಸಲ ಕಾಂಗ್ರೆಸ್ ಶಾಸಕರಾಗಿರುವ ಸತೀಶ ಜಾರಕಿಹೊಳಿ, 2 ದಶಕಗಳಿಂದ ಸಿದ್ದರಾಮಯ್ಯ ಜತೆ ಗುರುತಿಸಿಕೊಂಡಿದ್ದಾರೆ. ಪುನರ್ ರಚನೆ ವೇಳೆ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಜತೆ ಮುನಿಸಿಕೊಂಡಿದ್ದ ಸತೀಶಗೆ ಎಐಸಿಸಿ ಕಾರ್ಯದರ್ಶಿ ಹುದ್ದೆ ನೀಡಿ ಸಮಾಧಾನ ಪಡಿಸಲಾಗಿದೆ. ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸತೀಶರೇ ಅಭ್ಯರ್ಥಿ ಎಂದು ಸಿಎಂ ಘೋಷಿಸಿದ್ದಾರೆ. ಇನ್ನೊಂದೆಡೆ ಸಚಿವರಾದ ರಮೇಶ ಜಾರಕಿಹೊಳಿ ಹಾಗೂ ಡಿ.ಕೆ. ಶಿವಕುಮಾರ್ ಪ್ರಭಾವ ಬಳಸಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಇನ್ನೊಬ್ಬ ಸಹೋದರ, ಉದ್ಯಮಿ ಲಖನ್ ಜಾರಕಿಹೊಳಿ ನಡೆಸಿದ ಕಸರತ್ತು ಫಲ ನೀಡಿಲ್ಲ. ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಸ್ಪರ್ಧಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಲಖನ್, ಸತೀಶ ವಿರುದ್ಧ ಸೆಣಸಲು ಬಿಜೆಪಿ ಕದ ತಟ್ಟಿದ್ದಾರೆ.

ಮಾಮನಿ ಚಿತ್ತ ಹ್ಯಾಟ್ರಿಕ್ ಗೆಲುವಿನತ್ತ

ಸವದತ್ತಿ ಕ್ಷೇತ್ರದಿಂದ ಸತತ ಎರಡು ಗೆಲುವು ದಾಖಲಿಸಿರುವ ಬಿಜೆಪಿಯ ಆನಂದ ಮಾಮನಿ ಹ್ಯಾಟ್ರಿಕ್ ಗೆಲುವಿನತ್ತ ಚಿತ್ತ ಹರಿಸಿದ್ದಾರೆ. ಇವರಿಗೂ ಮೊದಲು ರಾಜಣ್ಣ ಮಾಮನಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದರು. ಸತೀಶ ಜಾರಕಿಹೊಳಿ ಜತೆ ಗುರುತಿಸಿಕೊಂಡಿರುವ ವಿಶ್ವಾಸ ವೈದ್ಯ ಹಾಗೂ ರಮೇಶ ಜಾರಕಿಹೊಳಿ ಆಪ್ತರಾಗಿರುವ ಆನಂದ ಚೋಪ್ರಾ ಕಾಂಗ್ರೆಸ್ ಟಿಕೆಟ್ ಪಡೆಯಲು ಕಸರತ್ತು ಆರಂಭಿಸಿದ್ದು, ಗ್ರಾಮೀಣ ಭಾಗದಲ್ಲಿ ಪ್ರಭಾವ ಹೊಂದಿರುವ ಇವರಿಬ್ಬರೂ ಒಗ್ಗಟ್ಟಾಗಿ ಹೋರಾಡಿದರೆ ಸ್ಪರ್ಧೆ ಬಿರುಸಾಗಲಿದೆ. ಕ್ಷೇತ್ರದಲ್ಲಿ ಮಾಮನಿ ಕುಟುಂಬದ ಪ್ರಭಾವವಿದ್ದು, ಹಾಲಿ ಶಾಸಕರು ಕ್ಷೇತ್ರದ ಮತದಾರರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

 

 

 

Leave a Reply

Your email address will not be published. Required fields are marked *

Back To Top