Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ಗಡಿ ಜಿಲ್ಲೆಯಲ್ಲಿ ಅಭಿವೃದ್ಧಿಯೋ, ಜಾತಿ ಸಮೀಕರಣವೋ?

Tuesday, 30.01.2018, 3:04 AM       No Comments

ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಕಾಣಿಸುತ್ತಿಲ್ಲ. ಆದರೆ ಅಭಿವೃದ್ಧಿ ರಾಜಕಾರಣಕ್ಕಿಂತಲೂ ಜಾತಿ ಸಮೀಕರಣ ಚಾಲ್ತಿಯಲ್ಲಿದೆ. ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ವಶದಲ್ಲಿದ್ದರೂ ಬೆಜೆಪಿ ಪ್ರಬಲ ಪೈಪೋಟಿ ನೀಡುತ್ತಾ ಬಂದಿದೆ. ಜೆಡಿಎಸ್ ಸಹ ಕೆಲವೆಡೆ ತನ್ನ ಪ್ರಭಾವ ಉಳಿಸಿಕೊಂಡಿದೆ. ಇನ್ನು ಮೈಸೂರು ಲೋಕಸಭಾ ವ್ಯಾಪ್ತಿಗೊಳಪಡುವ ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಒಟ್ಟು ಆರು ಕ್ಷೇತ್ರಗಳ ರಾಜಕೀಯ ಚಿತ್ರಣ ಇಲ್ಲಿದೆ.

| ಪ್ರಸಾದ್ ಲಕ್ಕೂರು ಚಾಮರಾಜನಗರ

ಲಿಂಗಾಯತ ಹಾಗೂ ಪರಿಶಿಷ್ಟರ ಮತಗಳೇ ಪ್ರಮುಖವಾಗಿರುವ ಚಾಮರಾಜನಗರ ಜಿಲ್ಲೆ ಹಿಂದಿನಿಂದಲೂ ಕಾಂಗ್ರೆಸ್​ನ ಭದ್ರಕೋಟೆ. 2008ರವರೆಗೆ ಜನತಾ ಪರಿವಾರ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿಯಿತ್ತು. ನಂತರದಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರ ಸ್ಪರ್ಧೆಯಿದೆ. ಬಿಎಸ್ಪಿ, ಜೆಡಿಎಸ್ ಪ್ರಬಲವಾಗಿಲ್ಲ.

ಎರಡೂವರೆ ದಶಕಗಳ ಕಾಲ ಜಿಲ್ಲೆಯಲ್ಲಿ ರಾಜಕಾರಣ ಮಾಡಿದ್ದ ಎಚ್.ಎಸ್.ಮಹದೇವಪ್ರಸಾದ್ 2017 ಜನವರಿ 3ರಂದು ನಿಧನರಾದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿ ಕ್ಯಾಪ್ಟನ್ ಆಗಿದ್ದ ಮಹದೇವಪ್ರಸಾದ್ ಅನುಪಸ್ಥಿತಿಯಲ್ಲಿ ಮುಂದಿನ ಚುನಾವಣೆಗೆ ಕೈ ಪಕ್ಷ ಅಣಿಯಾಗುತ್ತಿದೆ. ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ 2013ರ ಚುನಾವಣೆ ನಂತರ ಪಕ್ಷ ಸಂಘಟಿಸಿ ನೆಲೆ ಕಲ್ಪಿಸಿದ್ದಾರೆ. ಜಿಲ್ಲೆಯಲ್ಲಿ ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ (ಮೀಸಲು) ಸೇರಿ 4 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ 4 ಕ್ಷೇತ್ರಗಳನ್ನೂಕಾಂಗ್ರೆಸ್ ಗೆದ್ದುಕೊಂಡಿತ್ತು.

 ಪೇಟೆಯಲ್ಲಿ ಗೆಲುವಿನ ‘ಗೀತೆ’ ಹಾಡುವವರ್ಯಾರು?

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜನತಾ ಪರಿವಾರದ್ದೇ ನೇರ ಹಣಾಹಣಿ. ಬಿಜೆಪಿ ಪ್ರಯತ್ನಿಸಿದರೂ ಖಾತೆ ತೆರೆಯಲಾಗಿಲ್ಲ. ಲಿಂಗಾಯತ, ಪರಿಶಿಷ್ಟರ ಮತಗಳೇ ನಿರ್ಣಾಯಕ. ಇಲ್ಲಿ 1994ರಿಂದ ಸತತ 5 ಬಾರಿ ಎಚ್.ಎಸ್.ಮಹದೇವ ಪ್ರಸಾದ್ ಜಯಗಳಿಸಿದ್ದಾರೆ. ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಪತ್ನಿ ಗೀತಾ ಮಹದೇವಪ್ರಸಾದ್, ಬಿಜೆಪಿಯ ಸಿ.ಎಸ್. ನಿರಂಜನಕುಮಾರ್ ವಿರುದ್ಧ ಜಯಗಳಿಸಿದ್ದಾರೆ. 3 ಸಲ ಭಾರಿ ಪೈಪೋಟಿ ನೀಡಿ ಸೋತಿರುವ ನಿರಂಜನಕುಮಾರ್ ಇಲ್ಲವೇ ವಿ.ಸೋಮಣ್ಣ ಈ ಬಾರಿ ಸ್ಪರ್ಧಿಸಲಿದ್ದಾರೆ. ಜೆಡಿಎಸ್​ನಿಂದ ಗುರುಪ್ರಸಾದ್ ಹೆಸರು ಕೇಳಿಬರುತ್ತಿದೆ.


ಈ ಬಾರಿ ಮತ ‘ಕೊಳ್ಳೆ’ ಕಷ್ಟ!

ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ 2004ರ ಚುನಾವಣೆಯಿಂದ ಈಚೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಬಿಎಸ್ಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿ ಪರಿಶಿಷ್ಟರು ಬಹುಸಂಖ್ಯಾತರಾಗಿದ್ದು, ಅವರೇ ನಿರ್ಣಾಯಕರು. ಇಲ್ಲಿ ನಿರಂತರವಾಗಿ ಯಾವ ಪಕ್ಷವೂ ಗೆದ್ದಿಲ್ಲ. ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ನಡುವೆ ಭಾರಿ ಪೈಪೋಟಿಯಿದೆ. ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿರುವ ಹಾಲಿ ಕಾಂಗ್ರೆಸ್ ಶಾಸಕ ಎಸ್.ಜಯಣ್ಣಗೆ ಈ ಬಾರಿ ಟಿಕೆಟ್ ಕೈತಪ್ಪಲಿದೆ ಎಂಬ ಮಾತಿದೆ. ಮಾಜಿ ಶಾಸಕ ಎಸ್.ಬಾಲರಾಜು ಸೇರಿ ಅನೇಕರು ರೇಸ್​ನಲ್ಲಿದ್ದಾರೆ. ಬಿಜೆಪಿ ಮುಖಂಡ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಕಾಂಗ್ರೆಸ್ ಬಾಗಿಲು ಬಡಿದಿದ್ದಾರೆ. ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ ಬಿಜೆಪಿ ಟಿಕೆಟ್​ನ ಪ್ರಬಲ ಆಕಾಂಕ್ಷಿ. ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಕಣಕ್ಕೆ ಇಳಿಯಲಿದ್ದಾರೆ. ಜೆಡಿಎಸ್​ನಿಂದ ಮುಳ್ಳೂರು ಶಿವಮಲ್ಲು, ಚಾಮರಾಜು ಆಕಾಂಕ್ಷಿಗಳಾಗಿದ್ದಾರೆ.


ಒಗ್ಗಟ್ಟಿನಲ್ಲಿ ಕಾಂಗ್ರೆಸ್, ಬಿಕ್ಕಟ್ಟಿನಲ್ಲಿ ಕಮಲ!

ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಫೈಟ್. ಎರಡು ಬಾರಿ ಗೆಲುವಿನ ನಗೆ ಬೀರಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮತ್ತೊಮ್ಮೆ ಕಾಂಗ್ರೆಸ್ ಟಿಕೆಟ್ ಖಚಿತ. ಹೆಚ್ಚು ಜನರ ಒಡನಾಟದಲ್ಲಿದ್ದಾರೆ. ಇದೇ ಪಕ್ಷದಲ್ಲಿದ್ದ ವಕೀಲ ಚಿನ್ನಸ್ವಾಮಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮುಖಂಡರಾದ ನಿಜಗುಣ ರಾಜು, ಡಾ.ಎ.ಆರ್. ಬಾಬು ಟಿಕೆಟ್ ಆಕಾಂಕ್ಷಿಗಳಾಗಿದ್ದು, ಯಾರಿಗೂ ಖಾತ್ರಿಯಾಗಿಲ್ಲ. ಕ್ಷೇತ್ರದಿಂದ 3 ಬಾರಿ ಗೆದ್ದಿದ್ದ ವಾಟಾಳ್ ನಾಗರಾಜ್, 2008, 2013ರ ಚುನಾವಣೆಗಳಲ್ಲಿ ಸೋತಿದ್ದಾರೆ. ಒಮ್ಮೆ ಬಿಜೆಪಿಯಿಂದ ಸಿ.ಗುರುಸ್ವಾಮಿ ಗೆದ್ದಿದ್ದರು. ಲಿಂಗಾಯತರು, ಪರಿಶಿಷ್ಟರು, ಉಪ್ಪಾರ ಮತದಾರರು ಹೆಚ್ಚಾಗಿದ್ದಾರೆ. ಜೆಡಿಎಸ್, ಬಿಎಸ್ಪಿ ಅಭ್ಯರ್ಥಿಗಳು ಕಣಕ್ಕೆ ಇಳಿಯುತ್ತಾರೆ.


ಕುಟುಂಬ ರಾಜಕಾರಣಕ್ಕೆ ಒಲವು

ಹನೂರು ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೆ ಒಲವು ಜಾಸ್ತಿ. ಮಾಜಿ ಸಚಿವರಾದ ದಿ.ಜಿ.ರಾಜೂಗೌಡ ಮತ್ತು ದಿ.ಎಚ್.ನಾಗಪ್ಪ ಕುಟುಂಬದವರೇ ಗೆದ್ದು ಬರುತ್ತಿದ್ದಾರೆ. ಕಳೆದೆರಡು ಬಾರಿ ಆರ್.ನರೇಂದ್ರ ಗೆದ್ದಿದ್ದಾರೆ. ಲಿಂಗಾಯತ, ಪರಿಶಿಷ್ಟ ಜಾತಿ ಮತ್ತು ಪಂಗಡವರು ಹೆಚ್ಚಿದ್ದು, ಕೈ-ಕಮಲಗಳ ನಡುವೆ ಸ್ಪರ್ಧೆ ಇದೆ. ಕಾಂಗ್ರೆಸ್​ನಿಂದ ನರೇಂದ್ರಗೆ ಟಿಕೆಟ್ ಖಚಿತ. ಬಿಜೆಪಿಯಿಂದ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅಥವಾ ಮಾಜಿ ಸಚಿವ ವಿ.ಸೋಮಣ್ಣ ಕಣಕ್ಕಿಳಿಯುವ ಸಾಧ್ಯತೆಯಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಸೋಮಣ್ಣ ಗುಂಡ್ಲುಪೇಟೆ ಕ್ಷೇತ್ರಕ್ಕೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಲೋಕೇಶ್ ಮೌರ್ಯ ತಾವೇ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ.


 ಕಾಂಗ್ರೆಸ್-ಕಮಲ ಬಲಾಬಲ

| ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ಕೊಡಗು ಜಿಲ್ಲೆ ಕೇವಲ ಎರಡು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮೈಸೂರು ಲೋಕಸಭಾ ವ್ಯಾಪ್ತಿಗೊಳಪಡುತ್ತದೆ. ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರಗಳು ಬಿಜೆಪಿ ವಶದಲ್ಲಿವೆ. ಈ ಚುನಾವಣೆಯಲ್ಲಿ ಇವೆರಡೂ ಕ್ಷೇತ್ರಗಳನ್ನು ಕಬಳಿಸಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದು, ಈ ಪ್ರಯತ್ನದಲ್ಲಿ ಜೆಡಿಎಸ್ ಸಹ ನಿರತವಾಗಿದೆ.

ಕೈ, ತೆನೆಗೆ ‘ಮಂಜು’ ಕರಗುವುದೇ?

ಸಂಘ ಪರಿವಾರದ ಅವಕೃಪೆಗೆ ಒಳಗಾಗಿರುವ ಮಡಿಕೇರಿ ಕ್ಷೇತ್ರದ ಬಿಜೆಪಿ ಶಾಸಕರಿಗೆ ಟಿಕೆಟ್ ತಪ್ಪುವುದು ಬಹುತೇಕ ನಿಶ್ಚಿತ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಅಥವಾ ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಬಿ.ಜೆ.ದೀಪಕ್ ಹುರಿಯಾಳಾಗುವ ಸಾಧ್ಯತೆ ಇದೆ. ಇವರಿಬ್ಬರಿಗೂ ಒಕ್ಕಲಿಗ ಸಮುದಾಯದ ಪ್ರಭಾವಿ ಸ್ವಾಮೀಜಿಯ ಬೆಂಬಲ ಇದೆ. ಏತನ್ಮಧ್ಯೆ, ವಿರಾಜಪೇಟೆಯ ಶಾಸಕ ಕೆ.ಜಿ. ಬೋಪಯ್ಯ ಇಲ್ಲಿ ಸ್ಪರ್ಧಿಸುತ್ತಾರೆಂಬ ಸುದ್ದಿ ಇದೆ. ಕಾಂಗ್ರೆಸ್​ನಿಂದ ಹೈಕೋರ್ಟ್ ವಕೀಲ ಚಂದ್ರಮೌಳಿ, ಕಾರ್ವಿುಕ ಮುಖಂಡ ನಾಪಂಡ ಮುತ್ತಪ್ಪ ಇತರರೂ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಚಿವ ಬಿ.ಎ.ಜೀವಿಜಯ ಜೆಡಿಎಸ್​ನಿಂದ ಸ್ಪರ್ಧಿಸಲಿದ್ದು, ಉದ್ಯಮಿ ಮಲ್ಲೇಶ್​ಗೌಡ ಟಿಕೆಟ್​ಗೆ ಕಸರತ್ತು ನಡೆಸುತ್ತಿದ್ದಾರೆ.

ವಿರಾಜಪೇಟೆ ಕೈ ವಶಕ್ಕೆ ಕಸರತ್ತು

ವಿರಾಜಪೇಟೆ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ಕಾರ್ಯೋನ್ಮುಖವಾಗಿದೆ. ಬಿಜೆಪಿಯ ಹಾಲಿ ಶಾಸಕ ಕೆ.ಜಿ.ಬೋಪಯ್ಯ ಮಡಿಕೇರಿಯಲ್ಲಿ ಸ್ಪರ್ಧಿಸಲಿದ್ದಾರೆಂಬ ಸುದ್ದಿ ಇರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಬಿಜೆಪಿಯಿಂದ ಮಾಜಿ ಜಿಲ್ಲಾಧ್ಯಕ್ಷರಾದ ಮಂಡೇಪಂಡ ಸುಜಾ ಕುಶಾಲಪ್ಪ, ಮಾಚಿಮಾಡ ರವೀಂದ್ರ, ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಹೆಸರು ಚಾಲ್ತಿಯಲ್ಲಿದೆ. ಕಾಂಗ್ರೆಸ್​ನಿಂದ ಮಾಜಿ ಎಂಎಲ್ಸಿ ಸಿ.ಎಸ್.ಅರುಣ್ ಮಾಚಯ್ಯ, ಅರಣ್ಯ ಅಭಿವೃದ್ಧಿ ನಿಗಮ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಜಿಲ್ಲಾಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ, ಸಚಿವ ಎಂ.ಆರ್.ಸೀತಾರಾಮ್ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ ಹೆಸರು ಕೇಳಿಬರುತ್ತಿದೆ. ಜೆಡಿಎಸ್​ನಿಂದ ಹಾಲಿ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಥವಾ ಮುಸ್ಲಿಂ ಮುಖಂಡರೊಬ್ಬರು ಕಣಕ್ಕಿಳಿಯಲಿದ್ದಾರೆ.

 

 

 

 

Leave a Reply

Your email address will not be published. Required fields are marked *

Back To Top